ಭಾರತ-ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟಿ20 ಪಂದ್ಯಕ್ಕೆ ಕ್ಷಣಗಣನೆಎರಡನೇ ಟಿ20 ಪಂದ್ಯಕ್ಕೆ ಎದುರಾಯ್ತು ಮಳೆ ಭೀತಿಎರಡನೇ ಟಿ20 ಪಂದ್ಯಕ್ಕೆ ಗುವಾಹಟಿಯ ಅಸ್ಸಾ ಕ್ರಿಕೆಟ್ ಸಂಸ್ಥೆಯ ಮೈದಾನ ಆತಿಥ್ಯ

ಗುವಾಹಟಿ(ಅ.02): ಭಾರತ-ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಎರಡನೇ ಟಿ20 ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಮೊದಲ ಪಂದ್ಯದಲ್ಲಿ ಅನಾಯಾಸವಾಗಿ ಗೆಲುವು ಸಾಧಿಸಿ ಆತ್ಮವಿಶ್ವಾಸದಿಂದ ಬೀಗುತ್ತಿರುವ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಇಂದಿನ ಪಂದ್ಯವನ್ನೂ ಗೆದ್ದು, ಸರಣಿ ಕೈವಶ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಹೀಗಿರುವಾಗಲೇ ಕ್ರಿಕೆಟ್ ಅಭಿಮಾನಿಗಳಲ್ಲಿ ಮಳೆ ಅಡ್ಡಿ ಪಡಿಸುವ ಆತಂಕ ಮನೆ ಮಾಡಿದೆ.

ಹೌದು, ಈ ಹಿಂದೆ ನಿಗದಿಯಾಗಿದ್ದ ಅಂತಾರಾಷ್ಟ್ರೀಯ ಪಂದ್ಯವು ಮಳೆಗೆ ಆಹುತಿಯಾಗಿತ್ತು. ಇದೀಗ ಇಂದು ನಡೆಯುವ ಪಂದ್ಯಕ್ಕೂ ಮಳೆಯ ಭೀತಿ ಎದುರಾಗಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟಿ20 ಪಂದ್ಯವನ್ನು ಮೈದಾನಕ್ಕೆ ಬಂದು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಕೋವಿಡ್ 19 ರೋಗ ವಕ್ಕರಿಸಿದ ಬಳಿಕ ಗುವಾಹಟಿಯಲ್ಲಿ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಟಿ20 ಪಂದ್ಯ ಇದಾಗಿರುವುದರಿಂದ ಈಗಾಗಲೇ ಪಂದ್ಯದ ಎಲ್ಲಾ ಟಿಕೆಟ್‌ಗಳು ಸೋಲ್ಡೌಟ್ ಆಗಿವೆ. ಇದೆಲ್ಲದರ ನಡುವೆ ಮಳೆರಾಯನ ಅವಕೃಪೆ ತೋರದಿದ್ದರೇ ಭರ್ಜರಿ ಪಂದ್ಯಾಟ ನಡೆಯಲಿದೆ.

ಈ ಪಂದ್ಯಕ್ಕೂ ಮೊದಲು ಜನವರಿ 05, 2020ರಲ್ಲಿ ಭಾರತ-ಶ್ರೀಲಂಕಾ ತಂಡಗಳ ನಡುವಿನ ಟಿ20 ಪಂದ್ಯಕ್ಕೆ ಇಲ್ಲಿನ ಬರ್ಸಾಪುರ ಸ್ಟೇಡಿಯಂ ಆತಿಥ್ಯವನ್ನು ವಹಿಸಿತ್ತು. ಆದರೆ ನಿರಂತರವಾಗಿ ಸುರಿದ ಮಳೆಯಿಂದಾಗಿ ಒಂದೂ ಎಸೆತವೂ ಕಾಣದೆ ಪಂದ್ಯ ರದ್ದಾಗಿತ್ತು. ಹೀಗಾಗಿ ಇಂದೂ ಕೂಡಾ ಸ್ಟೇಡಿಯಂ ಸುತ್ತ ಮೋಡ ಕವಿದ ವಾತಾವರಣ ಇರುವುದರಿಂದ ಪಂದ್ಯದ ಆರಂಭದ ಕುರಿತಂತೆ ಆತಂಕ ಮನೆ ಮಾಡಿದೆ.

ಪಂದ್ಯ ಆರಂಭಕ್ಕೂ ಮುನ್ನ ಸುದ್ದಿಗೋಷ್ಟಿಯಲ್ಲಿ ಭಾಗವಹಿಸಿ ಮಾತನಾಡಿದ ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್‌, ಪ್ರೇಕ್ಷಕರು ಮೈದಾನಕ್ಕೆ ದಾಂಗುಡಿ ಇಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಅಭಿಪ್ರಾಯಪಟ್ಟಿದ್ದಾರೆ. 'ಜೂನ್‌ ಬಳಿಕ ಎಲ್ಲವೂ ಸಹಜ ಸ್ಥಿತಿಗೆ ಬಂದಿವೆ. ಪ್ರತಿ ಬಾರಿ ನಾವು ಭಾರತದಲ್ಲಿ ಆಡುವಾಗ, ಪ್ರತಿ ಸ್ಟೇಡಿಯಂ ಕೂಡಾ ಪ್ರೇಕ್ಷಕರಿಂದ ಭರ್ತಿಯಾಗಿರುತ್ತದೆ. ಇದು ಒಳ್ಳೆಯ ಲಕ್ಷಣ. ನಮ್ಮ ಹುಡುಗರ ಉತ್ತಮ ಪ್ರದರ್ಶನ ತೋರುವ ಮೂಲಕ ಪ್ರೇಕ್ಷಕರಿಗೆ ಒಳ್ಳೆಯ ಮನರಂಜನೆ ನೀಡುವ ವಿಶ್ವಾಸ ನನಗಿದೆ. ಈ ವಿಕೆಟ್‌ನಲ್ಲಿ ಒಳ್ಳೆಯ ಕ್ರಿಕೆಟ್‌ ನೋಡುವ ಅವಕಾಶ ಸಿಗುವ ವಿಶ್ವಾಸವಿದೆ' ಎಂದು ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.

Ind vs SA ಟೀಂ ಇಂಡಿಯಾಗಿಂದು ಹರಿಣಗಳೆದುರು ಸರಣಿ ಗೆಲುವಿನ ಗುರಿ

ಸ್ಥಳೀಯ ಹವಾಮಾನ ಇಲಾಖೆಯ ವರದಿ ಪ್ರಕಾರ, ಭಾನುವಾರದಂದು ಗುವಾಹಟಿಯ ಮೈದಾನದ ಸುತ್ತ ಭಾಗಶಃ ಮೋಡ ಕವಿಯಲಿದ್ದು, ತುಂತುರು ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿರುವುದು ಕ್ರಿಕೆಟ್‌ ಅಭಿಮಾನಿಗಳ ಆತಂಕಕ್ಕೆ ಈಡಾಗುವಂತೆ ಮಾಡಿದೆ.

ಒಂದು ವೇಳೆ ಮಳೆ ಅಡ್ಡಿಪಡಿಸಿದರೂ ಸಹಾ, ಆದಷ್ಟು ಬೇಗ ಪಂದ್ಯ ನಡೆಸಲು ಸಕಲ ಸಿದ್ದತೆಗಳನ್ನು ಮಾಡಿಕೊಂಡಿರುವುದಾಗಿ ಅಸ್ಸಾಂ ಕ್ರಿಕೆಟ್ ಸಂಸ್ಥೆಯು ತಿಳಿಸಿದೆ. ಗುವಾಹಟಿಯ ಈ ಸ್ಟೇಡಿಯಂನಲ್ಲಿ 39 ಸಾವಿರ ಮಂದಿ ಪಂದ್ಯವನ್ನು ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ.

ಈ ಮೊದಲು ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಎರಡನೇ ಟಿ20 ಪಂದ್ಯಕ್ಕೂ ಮಳೆರಾಯ ಅಡ್ಡಿಪಡಿಸಿದ್ದ. ನಾಗ್ಪುರದ ವಿದರ್ಭ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಯೋಜನೆಗೊಂಡಿದ್ದ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದರಿಂದ ಪಂದ್ಯವನ್ನು ತಲಾ 8 ಓವರ್‌ಗೆ ನಿಗದಿಪಡಿಸಿ ಪಂದ್ಯವನ್ನು ಆಡಿಸಲಾಗಿತ್ತು. ಆ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತ್ತು. ಇದೀಗ ಇಂದಿನ ಪಂದ್ಯವು ಪೂರ್ಣ 20 ಓವರ್ ನಡೆಯುತ್ತೋ ಅಥವಾ ಮಳೆ ಅಡ್ಡಿ ಪಡಿಸಿದರೆ ಓವರ್‌ಗಳನ್ನು ಕಡಿತಗೊಳಿಸಿ ಪಂದ್ಯವನ್ನು ಆಯೋಜಿಸಲಾಗುತ್ತದೆಯೋ ಕಾದು ನೋಡಬೇಕಿದೆ.