ಐರ್ಲೆಂಡ್ ಎದುರಿನ ಟಿ20 ಸರಣಿಗೆ ಭಾರತ ಕ್ರಿಕೆಟ್ ತಂಡ ಪ್ರಕಟ17 ಆಟಗಾರರನ್ನೊಳಗೊಂಡ ಭಾರತ ತಂಡದಲ್ಲಿ ರಾಹುಲ್ ತೆವಾಟಿಯಾಗಿಲ್ಲ ಸ್ಥಾನತಂಡದಲ್ಲಿ ಸ್ಥಾನ ಸಿಗದ ಬೆನ್ನಲ್ಲೇ ನಿರಾಸೆ ಹೊಸಹಾಕಿದ ರಾಹುಲ್ ತೆವಾಟಿಯಾ
ನವದೆಹಲಿ(ಜೂ.16): ಭಾರತದ ಪ್ರತಿಭಾನ್ವಿತ ಆಲ್ರೌಂಡರ್ ರಾಹುಲ್ ತೆವಾಟಿಯಾ, 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಒಳ್ಳೆಯ ಮ್ಯಾಚ್ ಫಿನಿಶರ್ ಆಗಿ ಗಮನ ಸೆಳೆದಿದ್ದರು. ಇದರ ಬೆನ್ನಲ್ಲೇ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡುವ ಕನಸು ಕಾಣುತ್ತಿದ್ದರು. ಆದರೆ ತೆವಾಟಿಯಾ ಆಸೆಗೆ ಬಿಸಿಸಿಐ ಆಯ್ಕೆ ಸಮಿತಿ ಮತ್ತೊಮ್ಮೆ ತಣ್ಣೀರೆರಚಿದೆ. ಇದರ ಬೆನ್ನಲ್ಲೇ ಎಡಗೈ ಆಟಗಾರ ತೆವಾಟಿಯಾ ಮಾಡಿದ ಟ್ವೀಟ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಹೌದು, ಇದೇ ಜೂನ್ 26, 28ಕ್ಕೆ ನಿಗದಿಯಾಗಿರುವ ಐರ್ಲೆಂಡ್ ವಿರುದ್ದದ 2 ಟಿ20 ಪಂದ್ಯಗಳ ಸರಣಿಗೆ 17 ಮಂದಿ ಆಟಗಾರರನ್ನೊಳಗೊಂಡ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು, ರಾಹುಲ್ ತೆವಾಟಿಯಾ, ಭಾರತ ಕ್ರಿಕೆಟ್ ತಂಡದಲ್ಲಿ (Indian Cricket Team) ಸ್ಥಾನ ಗಿಟ್ಟಿಸಿಕೊಳ್ಳಲು ವಿಫಲರಾಗಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ 2022ನೇ ಸಾಲಿನ ಐಪಿಎಲ್ (IPL 2022) ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಪ್ರತಿನಿಧಿಸಿದ್ದ ರಾಹುಲ್ ತೆವಾಟಿಯಾ (Rahul Tewatia) ಬ್ಯಾಟಿಂಗ್‌ನಲ್ಲಿ ತಮ್ಮ ಮ್ಯಾಚ್ ಫಿನಿಶಿಂಗ್ ಆಟದ ಮೂಲಕ ಗಮನ ಸೆಳೆದಿದ್ದರು. ಐಪಿಎಲ್‌ನ ಕೆಲ ಪಂದ್ಯಗಳಲ್ಲಂತೂ ತೆವಾಟಿಯಾ ಏಕಾಂಗಿಯಾಗಿ ಗುಜರಾತ್ ಟೈಟಾನ್ಸ್ (Gujarat Titans) ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಹೀಗಾಗಿ ತೆವಾಟಿಯಾಗೆ ಟೀಂ ಇಂಡಿಯಾದಿಂದ ಕರೆ ಬರಬಹುದು ಎಂದು ನಿರೀಕ್ಷಿಸಲಾಗಿತ್ತು. ಹೀಗಾಗಿ ದಕ್ಷಿಣ ಆಫ್ರಿಕಾ ಎದುರಿನ 5 ಪಂದ್ಯಗಳ ಟಿ20 ಸರಣಿಗೆ ಹಿರಿಯ ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಿದ ಬೆನ್ನಲ್ಲೇ ಹೊಸ ಮುಖಗಳಿಗೆ ಮಣೆಹಾಕಲು ಬಿಸಿಸಿಐ (BCCI) ತೀರ್ಮಾನಿಸಿತ್ತು. ಅದೇ ರೀತಿ ರೋಹಿತ್ ಶರ್ಮಾ (Rohit Sharma), ಕೆ ಎಲ್ ರಾಹುಲ್ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್‌ಗೆ ನಾಯಕ ಪಟ್ಟ ಕಟ್ಟಲಾಗಿತ್ತು. ಇದರ ಜತೆಗೆ ಯುವ ವೇಗಿಗಳಾದ ಆರ್ಶದೀಪ್ ಸಿಂಗ್, ಉಮ್ರಾನ್ ಮಲಿಕ್‌ಗೂ ತಂಡದಲ್ಲಿ ಸ್ಥಾನ ನೀಡಲಾಗಿತ್ತು. ಆದರೆ ರಾಹುಲ್ ತೆವಾಟಿಯಾ ಅವರನ್ನು ಕಡೆಗಣಿಸಲಾಯಿತು.
ದಕ್ಷಿಣ ಆಫ್ರಿಕಾ ಎದುರಿನ ಟಿ20 ಸರಣಿ ಮುಗಿದ ಬಳಿಕ ಟೀಂ ಇಂಡಿಯಾ (Team India), ಈ ತಿಂಗಳಾಂತ್ಯದಲ್ಲಿ ಐರ್ಲೆಂಡ್ ಪ್ರವಾಸ ಮಾಡಲಿದ್ದು, ಈ ವೇಳೆ 2 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಐರ್ಲೆಂಡ್ ಎದುರಿನ ಟಿ20 ಸರಣಿಯಲ್ಲಾದರೂ ರಾಹುಲ್ ತೆವಾಟಿಯಾ ಭಾರತ ತಂಡದಲ್ಲಿ ಸ್ಥಾನ ಪಡೆಯಬಹುದು ಎನ್ನುವ ನಿರೀಕ್ಷೆ ಮತ್ತೊಮ್ಮೆ ಹುಸಿಯಾಗಿದೆ. ಐರ್ಲೆಂಡ್ ಎದುರಿನ 2 ಪಂದ್ಯಗಳ ಟಿ20 ಸರಣಿಗೆ ಭಾರತ ಕ್ರಿಕೆಟ್ ತಂಡ ಪ್ರಕಟವಾದ ಬೆನ್ನಲ್ಲೇ ಟ್ವೀಟ್ ಮಾಡಿರುವ ರಾಹುಲ್ ತೆವಾಟಿಯಾ, ನಿರೀಕ್ಷೆಗಳು ನೋವನ್ನುಂಟು ಮಾಡುತ್ತವೆ (Expectations hurt) ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
'Expectations hurt' ಎನ್ನುವ ರಾಹುಲ್ ತೆವಾಟಿಯಾ ಅವರ ಟ್ವೀಟ್‌ಗೆ ಹಲವು ಅಭಿಮಾನಿಗಳು ಸಮಾಧಾನ ಮಾಡುವ ಯತ್ನವನ್ನು ನಡೆಸಿದ್ದಾರೆ. ಇನ್ನು ಕೆಲವರು ಆದಷ್ಟು ಬೇಗ ನೀವು ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುತ್ತೀರ ಎಂದು ಸಂತೈಸಿದ್ದಾರೆ. 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸ್ಪೋಟಕ ಬ್ಯಾಟರ್ ರಾಹುಲ್ ತೆವಾಟಿಯಾ 16 ಪಂದ್ಯಗಳನ್ನಾಡಿ 147.62ರ ಬ್ಯಾಟಿಂಗ್ ಸ್ಟ್ರೈಕ್‌ರೇಟ್‌ನಲ್ಲಿ217 ರನ್ ಸಿಡಿಸಿದ್ದರು.
ಚೊಚ್ಚಲ ಬಾರಿಗೆ ಟೀಂ ಇಂಡಿಯಾ ನಾಯಕರಾಗಿ ಹಾರ್ದಿಕ್ ಪಾಂಡ್ಯ ಆಯ್ಕೆ..!
ಇನ್ನು ಐರ್ಲೆಂಡ್ ಎದುರಿನ ಟಿ20 ಸರಣಿಗೆ ನಾಯಕರಾಗಿ ಹಾರ್ದಿಕ್ ಪಾಂಡ್ಯ (Hardik Pandya) ಅವರನ್ನು ನೇಮಕ ಮಾಡಲಾಗಿದೆ. ಐಪಿಎಲ್‌ನಲ್ಲಿ ಹಾರ್ದಿಕ್ ಪಾಂಡ್ಯ ನಾಯಕನಾಗಿ ಗುಜರಾತ್ ಟೈಟಾನ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದರು. ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದ ಮಹಾರಾಷ್ಟ್ರ ಮೂಲದ ಸನ್‌ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟರ್ ರಾಹುಲ್ ತ್ರಿಪಾಠಿ ಇದೇ ಮೊದಲ ಬಾರಿಗೆ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಗಾಯದಿಂದ ಚೇತರಿಸಿಕೊಂಡಿರುವ ಮುಂಬೈ ಆಟಗಾರ ಸೂರ್ಯಕುಮಾರ್ ಯಾದವ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನುಳಿದಂತೆ ದಕ್ಷಿಣ ಆಫ್ರಿಕಾ ಎದುರಿನ ಟಿ20 ಸರಣಿಯಲ್ಲಿ ಸ್ಥಾನ ಪಡೆದ ಆಟಗಾರರನ್ನೇ ಭಾರತ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.
