ಬೆಂಗಳೂರು(ಜ.11): ದಿಗ್ಗಜ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ರ ಪುತ್ರ ಸಮಿತ್‌ ಮೊದಲ ಬಾರಿಗೆ ಕರ್ನಾಟಕ ತಂಡವನ್ನು ಪ್ರತಿನಿಧಿಸುವ ಅವಕಾಶ ಪಡೆದಿದ್ದಾರೆ. ಶುಕ್ರವಾರ ದಕ್ಷಿಣ ವಲಯ ಅಂಡರ್‌-14 ಟೂರ್ನಿಗೆ ಕರ್ನಾಟಕ ತಂಡವನ್ನು ಪ್ರಕಟಿಸಲಾಯಿತು. ಸಮಿತ್‌ ಆ ತಂಡದಲ್ಲಿ ಸ್ಥಾನಗಳಿಸಿದ್ದಾರೆ. 

ಇದನ್ನೂ ಓದಿ: ಭರ್ಜರಿ ದ್ವಿಶತಕ ಬಾರಿಸಿದ ದ್ರಾವಿಡ್‌ ಪುತ್ರ ಸಮಿತ್‌

ಬಲಗೈ ಬ್ಯಾಟ್ಸ್‌ಮನ್‌ ಆಗಿರುವ ಸಮಿತ್‌, ಆಯ್ಕೆಗಾಗಿ ನಡೆಸಿದ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಕೆಎಸ್‌ಸಿಎ ಅಂತರ ವಲಯ ಅಂಡರ-14 ಟೂರ್ನಿಯ ಪಂದ್ಯವೊಂದರಲ್ಲಿ ಸಮಿತ್‌ 201 ಹಾಗೂ ಅಜೇಯ 94 ರನ್‌ ಗಳಿಸಿದ್ದರು. ಜ.16ರಿಂದ 18ರ ವರೆಗೂ ಬೆಂಗಳೂರಲ್ಲಿ ದಕ್ಷಿಣ ವಲಯ ಟೂರ್ನಿ ನಡೆಯಲಿದೆ. ಮಲ್ಯ ಅದಿತಿ ಅಂತಾರಾಷ್ಟ್ರೀಯ ಶಾಲೆಯ ವಿದ್ಯಾರ್ಥಿಯಾಗಿರುವ ಸಮಿತ್‌ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.

ಇದನ್ನೂ ಓದಿ: NCA ಸುಧಾರಣೆಗೆ ದ್ರಾವಿಡ್‌-ಗಂಗೂಲಿ ಸೂತ್ರ; ಬೆಂಗಳೂರಿನಲ್ಲೇ ಹೊಸ ಅಕಾಡೆಮಿ

ಸಮಿತ್‌ ದ್ರಾವಿಡ್‌, ಅಂಡರ್‌ 14 ಕೆಎಸ್‌ಸಿಎ ಅಂತರವಲಯ ಕ್ರಿಕೆಟ್‌ ಟೂರ್ನಿಯಲ್ಲಿ ಉಪಾಧ್ಯಕ್ಷರ ಇಲೆವೆನ್‌ ಪರ ದ್ವಿಶತಕ ಸಿಡಿಸಿದ್ದರು. ಧಾರವಾಡ ವಲಯ ವಿರುದ್ಧದ ಪಂದ್ಯದಲ್ಲಿ ಸಮಿತ್‌, ಮೊದಲ ಇನ್ನಿಂಗ್ಸಲ್ಲಿ 201 ಮತ್ತು ದ್ವಿತೀಯ ಇನ್ನಿಂಗ್ಸಲ್ಲಿ ಅಜೇಯ 94 ರನ್‌ಗಳಿಸಿದರು. ಅಲ್ಲದೇ 26 ರನ್‌ಗಳಿಗೆ 3 ವಿಕೆಟ್‌ ಪಡೆಯುವ ಮೂಲಕ ಆಲ್ರೌಂಡರ್‌ ಪ್ರದರ್ಶನ ತೋರಿದರು. ಈ ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು.