ಚುಟುಕು ವಿಶ್ವಕಪ್ ಗೆದ್ದ ಭಾರತ ಅಂಡರ್ 19 ಮಹಿಳಾ ತಂಡಕ್ಕೆ ರಾಹುಲ್ ದ್ರಾವಿಡ್ ವಿಶೇಷ ಸಂದೇಶ..!
* ಅಂಡರ್ 19 ಟಿ20 ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಕ್ರಿಕೆಟ್ ತಂಡ
* ಇತಿಹಾಸ ನಿರ್ಮಿಸಿದ ಶಫಾಲಿ ವರ್ಮಾ ನೇತೃತ್ವದ ಭಾರತ ಕಿರಿಯರ ತಂಡ
* ವಿಶ್ವಕಪ್ ಗೆದ್ದ ಶಫಾಲಿ ಪಡೆಗೆ ವಿಶೇಷ ಸಂದೇಶ ರವಾನಿಸಿದ ಟೀಂ ಇಂಡಿಯಾ
ಲಖನೌ(ಜ.30): ಚೊಚ್ಚಲ ಆವೃತ್ತಿಯ ಐಸಿಸಿ ಅಂಡರ್ 19 ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶಫಾಲಿ ವರ್ಮಾ ನೇತೃತ್ವದ ಭಾರತ ಕಿರಿಯರ ಮಹಿಳಾ ಕ್ರಿಕೆಟ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ, ಈ ಐತಿಹಾಸಿಕ ಗೆಲುವನ್ನು ಸಂಭ್ರಮಿಸಿದೆ. ಭಾರತ ಮಹಿಳಾ ಕ್ರಿಕೆಟ್ ತಂಡವು ಪವರ್-ಪ್ಲೇನಲ್ಲೇ ಇಂಗ್ಲೆಂಡನ್ನು ಕಟ್ಟಿಹಾಕಿತು. 4 ಓವರ್ ಮುಗಿಯುವ ಮೊದಲೇ 3 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ಆ ಬಳಿಕ ಚೇತರಿಸಿಕೊಳ್ಳಲಿಲ್ಲ.
ಭಾರತೀಯ ಬೌಲರ್‌ಗಳ ಸಾಂಘಿಕ ಪ್ರದರ್ಶನದ ಮುಂದೆ ಇಂಗ್ಲೆಂಡ್ ಬ್ಯಾಟರ್‌ಗಳ ಆಟ ನಡೆಯಲಿಲ್ಲ. ಶಿಸ್ತಬುದ್ಧ ದಾಳಿ ಸಂಘಟಿಸಿದ ಭಾರತೀಯರು ನಿರಂತರವಾಗಿ ವಿಕೆಟ್ ಕಬಳಿಸುತ್ತಾ, ಇಂಗ್ಲೆಂಡ್ 68 ರನ್‌ಗೆ ಆಲೌಟ್ ಆಗುವಂತೆ ಮಾಡಿದರು. ಭಾರತದ 6 ಬೌಲರ್‌ಗಳು ಬೌಲ್ ಮಾಡಿದರು. ಎಲ್ಲಾ 6 ಮಂದಿಗೆ ವಿಕೆಟ್ ದೊರೆಯಿತು. ಟಿಟಾಸ್ ಸಾಧು 4 ಓವರಲ್ಲಿ ಕೇವಲ 6 ರನ್ ನೀಡಿ 2 ವಿಕೆಟ್ ಕಿತ್ತರು. ಪಾರ್ಶವಿ ಹಾಗೂ ಅರ್ಚನಾಗೂ ತಲಾ 2 ವಿಕೆಟ್ ದೊರೆಯಿತು. ಇನ್ನು ಸಾಧಾರಣ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಕೇವಲ 3 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಇನ್ನು ಶಫಾಲಿ ವರ್ಮಾ ನೇತೃತ್ವದ ಕಿರಿಯರ ಭಾರತ ತಂಡದ ಸಾಧನೆಯ ಬಗ್ಗೆ ದೇಶಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಐತಿಹಾಸಿಕ ಗೆಲುವು ದಾಖಲಿಸಿದ ವನಿತೆಯರ ಪಡೆಗೆ ಭಾರತ ಸೀನಿಯರ್ ಪುರುಷರ ತಂಡದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಹಾಗೂ ಅಂಡರ್ 19 ವಿಶ್ವಕಪ್ ವಿಜೇತ ತಂಡದ ನಾಯಕ ಪೃಥ್ವಿ ಶಾ ಶುಭ ಹಾರೈಸಿದ್ದಾರೆ.
"ಭಾರತ ಮಹಿಳಾ ಅಂಡರ್ 19 ತಂಡದ ಪಾಲಿಗಿಂದು ಐತಿಹಾಸಿಕ ದಿನ. ನಾನು ಈ ಸಂದರ್ಭದಲ್ಲಿ ನಮ್ಮ ಪುರುಷರ ಅಂಡರ್ 19 ವಿಶ್ವಕಪ್ ವಿಜೇತ ತಂಡದ ನಾಯಕನಿಗೆ, ಮಹಿಳಾ ತಂಡಕ್ಕೆ ಸಂದೇಶ ರವಾನಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ರಾಹುಲ್ ದ್ರಾವಿಡ್ ಹೇಳಿರುವ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಇದರ ಬೆನ್ನಲ್ಲೇ ಅಂಡರ್ 19 ವಿಶ್ವಕಪ್ ವಿಜೇತ ತಂಡದ ನಾಯಕ ಪೃಥ್ವಿ ಶಾ, "ನನ್ನ ಪ್ರಕಾರ ಇದೊಂದು ಅತ್ಯದ್ಭುತ ಸಾಧನೆಯೇ ಸರಿ. ಅಭಿನಂದನೆಗಳು ಭಾರತ ಅಂಡರ್ 19 ಮಹಿಳಾ ತಂಡಕ್ಕೆ ಎಂದು ಪೃಥ್ವಿ ಶಾ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಕಿರಿಯರ ವಿಶ್ವಕಪ್ ಆಯ್ತು, ಇದೀಗ ಹಿರಿಯರ T20 ವಿಶ್ವಕಪ್ ಮೇಲೆ ಕಣ್ಣಿಟ್ಟ ಶಫಾಲಿ ವರ್ಮಾ..!
ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಪೃಥ್ವಿ ಶಾ ನೇತೃತ್ವದ ಭಾರತ ತಂಡವು, 2018ರಲ್ಲಿ ನಡೆದ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಸದ್ಯ ಟೀಂ ಇಂಡಿಯಾ, ತವರಿನಲ್ಲಿ ನ್ಯೂಜಿಲೆಂಡ್ ಎದುರು ಟಿ20 ಸರಣಿಯನ್ನು ಆಡುತ್ತಿದ್ದು, ಪೃಥ್ವಿ ಶಾ ಕೂಡಾ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಮರುಕಳಿಸಿದ 2007ರ ನೆನಪು!
2007ರಲ್ಲಿ ಪುರುಷರ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯನ್ನು ಗೆದ್ದು ಎಂ.ಎಸ್.ಧೋನಿ ಪಡೆ ಚಾಂಪಿಯನ್ ಆಗಿತ್ತು. ದಕ್ಷಿಣ ಆಫ್ರಿಕಾದಲ್ಲೇ ನಡೆದಿದ್ದ ಚೊಚ್ಚಲ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದು ಟೀಂ ಇಂಡಿಯಾ ರೋಚಕ ಜಯ ಸಾಧಿಸಿತ್ತು. ಇದೀಗ ಶಫಾಲಿ ವರ್ಮಾ ಪಡೆಯ ಸಾಧನೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು 2007ರ ನೆನಪನ್ನು ಮೆಲುಕು ಹಾಕುವಂತೆ ಮಾಡಿತು.