Breaking: ಮೂರನೇ ಟೆಸ್ಟ್ ತ್ಯಜಿಸಿದ ಆರ್.ಅಶ್ವಿನ್, 10 ಆಟಗಾರರೊಂದಿಗೆ ಆಡಲಿದೆ ಭಾರತ!
ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಸಾಧನೆ ಬೆನ್ನಲ್ಲಿಯೇ ಆರ್.ಅಶ್ವಿನ್, ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ನಿಂದ ಹೊರಬಿದ್ದಿದ್ದಾರೆ ಎಂದು ಬಿಸಿಸಿಐ ಘೋಷಣೆ ಮಾಡಿದೆ.
ನವದೆಹಲಿ (ಫೆ.16): ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಶುಕ್ರವಾರ ಕುಟುಂಬದಲ್ಲಿ ವೈದ್ಯಕೀಯ ತುರ್ತುಸ್ಥಿತಿಯಿಂದಾಗಿ ಭಾರತ ಮತ್ತು ಇಂಗ್ಲೆಂಡ್ ನಡುವಿನ 3 ನೇ ಟೆಸ್ಟ್ ಪಂದ್ಯದಿಂದ ಹಿಂದೆ ಸರಿದಿದ್ದಾರೆ. ಇದರಿಂದಾಗಿ ಭಾರತ ತಂಡ ಪ್ರವಾಸಿ ಇಂಗ್ಲೆಂಡ್ ವಿರುದ್ಧ ರಾಜ್‌ಕೋಟ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನ 10 ಮಂದಿ ಆಟಗಾರರೊಂದಿಗೆ ಆಡಲಿದೆ. ಆರ್.ಅಶ್ವಿನ್ ಬದಲಾಗಿ ಫೀಲ್ಡಿಂಗ್‌ನಲ್ಲಿ ಬದಲಿ ಆಟಗಾರನನ್ನು ಮಾತ್ರವೇ ಭಾರತ ಕಣಕ್ಕಿಳಿಸಬಹುದಾಗಿದೆ.ಇನ್ನು ಅವರ ಕುಟುಂಬದಲ್ಲಿ ಯಾವ ರೀತಿಯ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾಗಿದೆ ಎನ್ನುವ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ. 'ಇಂಗ್ಲೆಂಡ್ ವಿರುದ್ಧ ನಡೆಯತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮುಂದಿನ ಭಾಗದಲ್ಲಿ ಅಶ್ವಿನ್ ಅವರ ಸೇವೆ ತಂಡಕ್ಕೆ ಲಭ್ಯವಿರೋದಿಲ್ಲ. ಕುಟುಂಬದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾದ ಕಾರಣಕ್ಕೆ ಅವರು ತಂಡವನ್ನು ತೊರೆದಿದ್ದಾರೆ' ಎಂದು ಬಿಸಿಸಿಐ, ಅಶ್ವಿನ್ ಅಲಭ್ಯತೆಯ ಬಗ್ಗೆ ಪ್ರಕಟಣೆಯ ಮೂಲಕ ಮಾಹಿತಿ ನೀಡಿದೆ.
"ರವಿಚಂದ್ರನ್ ಅಶ್ವಿನ್ ಟೆಸ್ಟ್ ತಂಡದಿಂದ ಹಿಂದೆ ಸರಿದಿದ್ದಾರೆ, ಕೌಟುಂಬಿಕ ವೈದ್ಯಕೀಯ ತುರ್ತುಸ್ಥಿತಿಯಿಂದಾಗಿ ತಕ್ಷಣವೇ ತಂಡತೊರೆದಿದ್ದಾರೆ. ಈ ಸವಾಲಿನ ಸಮಯದಲ್ಲಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ತಂಡವು ಅಶ್ವಿನ್ ಅವರನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ" ಎಂದು ಬಿಸಿಸಿಐ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. .
ಚಾಂಪಿಯನ್ ಕ್ರಿಕೆಟಿಗರ ಹಾಗೂ ಅವರ ಕುಟುಂಬಕ್ಕೆ ಬಿಸಿಸಿಐ ತನ್ನ ಎಲ್ಲಾ ರೀತಿಯ ಬೆಂಬಲವನ್ನು ನೀಡಲಿದೆ. ಆಟಗಾರರ ಆರೋಗ್ಯ ಹಾಗೂ ಅವರ ಪ್ರೀತಿ ಪಾತ್ರರ ಆರೋಗ್ಯ ಬಿಸಿಸಿಐ ಮಾಲಿಗೆ ಯಾವಾಗಲೂ ಮುಖ್ಯವಾಗಿರುತ್ತದೆ. ಅಶ್ವಿನ್ ಅವರ ಕುಟುಂಬದ ಸಂಕಷ್ಟದ ಸಮಯದಲ್ಲಿ ನಾವು ಅವರ ಖಾಸಗಿತನವನ್ನು ಗೌರವವಿಸಬೇಕು ಎಂದು ಎಲ್ಲರಲ್ಲಿ ಕೇಳಿಕೊಳ್ಳುತ್ತಿದ್ದೇವೆ ಎಂದು ಬಿಸಿಸಿಐ ಹೇಳಿದೆ.
'ನನ್ನ ಮಗ ಜೋಪಾನ': ಕ್ಯಾಪ್ಟನ್ ರೋಹಿತ್ ಶರ್ಮಾಗೆ ಮುಗ್ದತೆಯಿಂದ ಮನವಿ ಮಾಡಿದ ಸರ್ಫರಾಜ್ ಖಾನ್ ತಂದೆ
ಇದಕ್ಕೂ ಮುನ್ನ ತಮ್ಮ 500 ವಿಕೆಟ್ ಸಾಧನೆಯನ್ನು ಅಶ್ವಿನ್ ತಮ್ಮ ತಂದೆಗೆ ಅರ್ಪಿಸಿದ್ದರು. 2ನೇ ದಿನದಾಟ ಮುಕ್ತಾಯದ ಬಳಿಕ ಮಾತನಾಡಿದ್ದ ಅಶ್ವಿನ್, ಇಂದು ನಾನು ಏನಾಗಿದ್ದೇನೋ ಅದಕ್ಕೆಲ್ಲವೂ ನನ್ನ ತಂದೆಯೇ ಕಾರಣ. ಪ್ರತಿ ಬಾರಿ ನಾನು ಆಡಲು ಮೈದಾನಕ್ಕೆ ಇಳಿದಾಗ ಅವರಿಗೆ ಹೃದಯಾಘಾತವಾಗುತ್ತಿತ್ತು. ಜೀವನಪೂರ್ತಿ ಅವರು ನನ್ನ ಕ್ರಿಕೆಟ್‌ಗಾಗಿಯೇ ಕಳೆದಿದ್ದಾರೆ. ನನ್ನ ಅಟವನ್ನು ಟಿವಿಯಲ್ಲಿ ನೋಡಿಯೇ ಅವರ ಆರೋಗ್ಯ ಹದಗೆಟ್ಟಿರಬಹುದು ಎಂದು ಅಶ್ವಿನ್ ಹೇಳಿದ್ದಾರೆ.
Update: ಅಶ್ವಿನ್ ಅವರ ತಾಯಿಗೆ ಗಂಭೀರ ಅನಾರೋಗ್ಯವಾಗಿದ್ದು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಟ್ವೀಟ್ ಮಾಡಿದ್ದಾರೆ. ತನ್ನ ತಾಯಿಯೊಂದಿಗೆ ಇರುವ ಸಲುವಾಗಿ ಅವರು ರಾಜ್‌ಕೋಟ್‌ನಿಂದ ತುರ್ತಾಗಿ ಚೆನ್ನೈಗೆ ಪ್ರಯಾಣ ಮಾಡಿದ್ದಾರೆ ಎಂದು ರಾಜೀವ್ ಶುಕ್ಲಾ ಟ್ವೀಟ್ ಮಾಡಿದ್ದಾರೆ.
ರವಿಚಂದ್ರನ್ ಅಶ್ವಿನ್ 500 ಟೆಸ್ಟ್ ವಿಕೆಟ್..! ದಿಗ್ಗಜರ ಸಾಲಿಗೆ ಸೇರಿದ ಸ್ಪಿನ್ ಮಾಂತ್ರಿಕ