Asianet Suvarna News Asianet Suvarna News

ರವಿಚಂದ್ರನ್‌ ಅಶ್ವಿನ್ 500 ಟೆಸ್ಟ್‌ ವಿಕೆಟ್..! ದಿಗ್ಗಜರ ಸಾಲಿಗೆ ಸೇರಿದ ಸ್ಪಿನ್ ಮಾಂತ್ರಿಕ

ರಾಜ್‌ಕೋಟ್ ಟೆಸ್ಟ್ ಪಂದ್ಯಕ್ಕೂ ಮುನ್ನ 97 ಪಂದ್ಯಗಳನ್ನಾಡಿ ಅಶ್ವಿನ್ 499 ವಿಕೆಟ್ ಕಬಳಿಸಿದ್ದರು. ಆದರೆ ಇದೀಗ ಮೊದಲ ಇನಿಂಗ್ಸ್‌ನಲ್ಲಿ ಅಶ್ವಿನ್ ಇಂಗ್ಲೆಂಡ್ ಆರಂಭಿಕ ಬ್ಯಾಟರ್ ಕ್ರಾಲಿಯನ್ನು ಬಲಿ ಪಡೆಯುವ ಮೂಲಕ 500 ವಿಕೆಟ್ ಕಬಳಿಸಿದ ದಿಗ್ಗಜ ಬೌಲರ್‌ಗಳ ಸಾಲಿಗೆ ಸೇರಿದ್ದಾರೆ.

Ravichandran Ashwin picked up his 500th Test wicket remove Zak Crawley in Rajkot Test kvn
Author
First Published Feb 16, 2024, 3:27 PM IST

ರಾಜ್‌ಕೋಟ್‌(ಫೆ.16): ಭಾರತದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ನಿರೀಕ್ಷೆಯಂತೆಯೇ ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಾಕ್ ಕ್ರಾಲಿ ಅವರನ್ನು ಬಲಿ ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅಶ್ವಿನ್ 500 ವಿಕೆಟ್ ಕಬಳಿಸಿದ ಬೌಲರ್‌ಗಳ ಪ್ರತಿಷ್ಠಿತ ಕ್ಲಬ್ ಸೇರಿದ್ದಾರೆ. ಈ ಮೂಲಕ ಅಶ್ವಿನ್ 500 ವಿಕೆಟ್‌ ಕಬಳಿಸಿದ ಭಾರತದ ಎರಡನೇ ಹಾಗೂ ಒಟ್ಟಾರೆ 9ನೇ ಬೌಲರ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ.

ರಾಜ್‌ಕೋಟ್ ಟೆಸ್ಟ್ ಪಂದ್ಯಕ್ಕೂ ಮುನ್ನ 97 ಪಂದ್ಯಗಳನ್ನಾಡಿ ಅಶ್ವಿನ್ 499 ವಿಕೆಟ್ ಕಬಳಿಸಿದ್ದರು. ಆದರೆ ಇದೀಗ ಮೊದಲ ಇನಿಂಗ್ಸ್‌ನಲ್ಲಿ ಅಶ್ವಿನ್ ಇಂಗ್ಲೆಂಡ್ ಆರಂಭಿಕ ಬ್ಯಾಟರ್ ಕ್ರಾಲಿಯನ್ನು ಬಲಿ ಪಡೆಯುವ ಮೂಲಕ 500 ವಿಕೆಟ್ ಕಬಳಿಸಿದ ದಿಗ್ಗಜ ಬೌಲರ್‌ಗಳ ಸಾಲಿಗೆ ಸೇರಿದ್ದಾರೆ. ಭಾರತ ತಂಡವನ್ನು 445 ರನ್‌ಗಳಿಗೆ ಆಲೌಟ್ ಮಾಡಿ ಮೊದಲ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಸ್ಪೋಟಕ ಆರಂಭವನ್ನು ಪಡೆಯಿತು. ಮೊದಲ ವಿಕೆಟ್‌ಗೆ ಬೆನ್ ಡಕೆಟ್ ಹಾಗೂ ಜಾಕ್ ಕ್ರಾಲಿ 13.1 ಓವರ್‌ಗಳಲ್ಲಿ 89 ರನ್‌ಗಳ ಜತೆಯಾಟವಾಡಿದರು. ಈ ಸಂದರ್ಭದಲ್ಲಿ ಎರಡನೇ ಓವರ್‌ನ ಮೊದಲ ಎಸೆತದಲ್ಲೇ ಕ್ರಾಲಿ ಬಲಿ ಪಡೆಯುವ ಮೂಲಕ ಅಶ್ವಿನ್ ಭಾರತಕ್ಕೆ ಮೊದಲ ಯಶಸ್ಸು ದಕ್ಕಿಸಿಕೊಟ್ಟರು.

ಅಪರೂಪದ ದಾಖಲೆ ಬರದ ಅಶ್ವಿನ್: ರವಿಚಂದ್ರನ್ ಅಶ್ವಿನ್ ಇದೀಗ 500 ವಿಕೆಟ್ ಕಬಳಿಸುವ ಮೂಲಕ ಕೆಲವು ಅಪರೂಪದ ದಾಖಲೆ ಬರೆದಿದ್ದಾರೆ.  

ಟೆಸ್ಟ್‌ನಲ್ಲಿ ಎರಡನೇ ಅತಿ ಕಡಿಮೆ ಟೆಸ್ಟ್ ಪಂದ್ಯವನ್ನಾಡಿ 500 ವಿಕೆಟ್ ಸಾಧಕ:

ರವಿಚಂದ್ರನ್ ಅಶ್ವಿನ್ ಇದೀಗ ಕೇವಲ 98 ಟೆಸ್ಟ್ ಪಂದ್ಯಗಳನ್ನಾಡಿ 500 ವಿಕೆಟ್ ಕಬಳಿಸುವ ಮೂಲಕ ಮುತ್ತಯ್ಯ ಮುರುಳೀಧರನ್ ಬಳಿಕ ಅತಿಕಡಿಮೆ ಟೆಸ್ಟ್‌ ಪಂದ್ಯಗಳನ್ನಾಡಿ 500 ವಿಕೆಟ್ ಕಬಳಿಸಿದ ಬೌಲರ್ ಎನಿಸಿಕೊಂಡಿದ್ದಾರೆ. ಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರುಳೀಧರನ್ 87 ಟೆಸ್ಟ್ ಪಂದ್ಯಗಳನ್ನಾಡಿ 500 ವಿಕೆಟ್ ಕಬಳಿಸಿದ್ದರು.

ಅತಿ ಕಡಿಮೆ ಟೆಸ್ಟ್ ಪಂದ್ಯಗಳನ್ನಾಡಿ 500 ವಿಕೆಟ್ ಕಬಳಿಸಿದ ಟಾಪ್ 5 ಬೌಲರ್‌ಗಳು:

87 ಮುತ್ತಯ್ಯ ಮುರುಳೀಧರನ್
98 ರವಿಚಂದ್ರನ್ ಅಶ್ವಿನ್
105 ಅನಿಲ್ ಕುಂಬ್ಳೆ
108 ಶೇನ್ ವಾರ್ನ್
110 ಗ್ಲೆನ್ ಮೆಗ್ರಾಥ್

ಎರಡನೇ ಅತಿ ಕಡಿಮೆ ಎಸೆತದಲ್ಲಿ 500 ವಿಕೆಟ್ ಸಾಧಕ ಅಶ್ವಿನ್:

ಟೆಸ್ಟ್ ಕ್ರಿಕೆಟ್‌ನಲ್ಲಿ ಅಶ್ವಿನ್ ಕೇವಲ 25,714 ಎಸೆತಗಳನ್ನು ಎಸೆದು 500 ವಿಕೆಟ್ ಕಬಳಿಸುವ ಮೂಲಕ ಎರಡನೇ ಅತಿ ಕಡಿಮೆ ಎಸೆತದಲ್ಲಿ 500 ವಿಕೆಟ್ ಸಾಧನೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ದಿಗ್ಗಜ ಬೌಲರ್ ಗ್ಲೆನ್ ಮೆಗ್ರಾಥ್ 25,528 ಎಸೆತಗಳನ್ನು ಎಸೆದು 500 ವಿಕೆಟ್ ಕಬಳಿಸಿದ್ದರು.

ಅತಿಕಡಿಮೆ ಎಸೆತಗಳನ್ನು ಎಸೆದು 500 ವಿಕೆಟ್ ಕಬಳಿಸಿದ ಬೌಲರ್‌ಗಳಿವರು:

25528 ಗ್ಲೆನ್ ಮೆಗ್ರಾಥ್
25714 ರವಿಚಂದ್ರನ್ ಅಶ್ವಿನ್
28150 ಜೇಮ್ಸ್ ಆಂಡರ್‌ಸನ್
28430 ಸ್ಟುವರ್ಟ್ ಬ್ರಾಡ್
28833 ಕರ್ಟ್ನಿ ವಾಲ್ಷ್

Follow Us:
Download App:
  • android
  • ios