ಪಾಕಿಸ್ತಾನ ವಿರುದ್ಧದ ಮುಂಬರುವ ಸೀಮಿತ ಓವರ್‌ಗಳ ಹಾಗೂ ಟೆಸ್ಟ್‌ ಸರಣಿಗೆ ದಕ್ಷಿಣ ಆಫ್ರಿಕಾ ತಂಡವನ್ನು ಪ್ರಕಟಿಸಲಾಗಿದೆ. ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಕ್ವಿಂಟನ್ ಡಿ ಕಾಕ್ ಅಚ್ಚರಿಯ ರೀತಿಯಲ್ಲಿ ತಂಡಕ್ಕೆ ಮರಳಿದ್ದಾರೆ. 

ಬೆಂಗಳೂರು: ಮುಂಬರುವ ಪಾಕಿಸ್ತಾನ ಎದುರಿನ ಸೀಮಿತ ಓವರ್‌ಗಳ ಸರಣಿ ಹಾಗೂ ಟೆಸ್ಟ್‌ ಸರಣಿಗೆ ಕ್ರಿಕೆಟ್ ಸೌಥ್ ಆಫ್ರಿಕಾ ತಂಡವನ್ನು ಪ್ರಕಟಿಸಿದೆ. ಹರಿಣಗಳ ಪಡೆಯು ಪಾಕಿಸ್ತಾನ ಎದುರು ಎರಡು ಪಂದ್ಯಗಳ ಟೆಸ್ಟ್ ಸರಣಿ, ಮೂರು ಪಂದ್ಯಗಳ ಟಿ20 ಸರಣಿ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ.

ಇನ್ನು ದಿಢೀರ್ ಎನ್ನುವಂತೆ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ದಕ್ಷಿಣ ಆಫ್ರಿಕಾ ವಿಕೆಟ್‌ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಇದೀಗ ತಮ್ಮ ನಿವೃತ್ತಿ ನಿರ್ಧಾರವನ್ನು ವಾಪಾಸ್ ಪಡೆದುಕೊಂಡಿದ್ದಾರೆ. ಹೀಗಾಗಿ ಪಾಕಿಸ್ತಾನ ಎದುರಿನ ಸೀಮಿತ ಓವರ್‌ಗಳ ಸರಣಿಗೆ ಹರಿಣಗಳ ಪಡೆಯಲ್ಲಿ ಸ್ಥಾನ ಪಡೆದಿದ್ದಾರೆ. ಇದೀಗ ಕ್ವಿಂಟನ್ ಡಿ ಕಾಕ್ ತಮ್ಮ ಕಮ್‌ಬ್ಯಾಕ್ ಸರಣಿಯಲ್ಲಿ ಅಬ್ಬರಿಸುವ ವಿಶ್ವಾಸದಲ್ಲಿದ್ದಾರೆ.

ಪಾಕಿಸ್ತಾನ ಎದುರಿನ ಸರಣಿಗೂ ಮುನ್ನ ದಕ್ಷಿಣ ಆಫ್ರಿಕಾ ತಂಡವು ನಮೀಬಿಯಾ ಎದುರು ಏಕೈಕ ಟಿ20 ಪಂದ್ಯವನ್ನಾಡಲಿದೆ. ದಕ್ಷಿಣ ಆಫ್ರಿಕಾ ಹಾಗೂ ನಮೀಬಿಯಾ ನಡುವಿನ ಏಕೈಕ ಟಿ20 ಪಂದ್ಯವು ಅಕ್ಟೋಬರ್ 11ರಂದು ನಿಗದಿಯಾಗಿದೆ. ಇನ್ನು ಇದಾದ ಬಳಿಕ ದಕ್ಷಿಣ ಆಫ್ರಿಕಾ ಹಾಗೂ ಪಾಕಿಸ್ತಾನ ನಡುವಿನ ಮೊದಲ ಟೆಸ್ಟ್ ಪಂದ್ಯವು ಅಕ್ಟೋಬರ್ 12ರಿಂದ ಆರಂಭವಾಗಲಿದೆ. ಇನ್ನು ಎರಡನೇ ಟೆಸ್ಟ್ ಪಂದ್ಯವು ಅಕ್ಟೋಬರ್ 20ರಿಂದ ನಡೆಯಲಿದೆ.

ಇನ್ನು ಇದಾದ ಬಳಿಕ ಮೂರು ಪಂದ್ಯಗಳ ಟಿ20 ಸರಣಿಯು ಅಕ್ಟೋಬರ್ 28, 31 ಹಾಗೂ ನವೆಂಬರ್ 01ರಂದು ನಿಗದಿಯಾಗಿದೆ. ಇದಾದ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿಯು ಕ್ರಮವಾಗಿ ಕ್ರಮವಾಗಿ ನವೆಂಬರ್ 4, 6 ಹಾಗೂ 8 ರಂದು ನಡೆಯಲಿದೆ.

ಏಯ್ಡನ್ ಮಾರ್ಕ್‌ರಮ್ ನಾಯಕ, ತೆಂಬಾ ಬವುಮಾ ಔಟ್

ಗಾಯದ ಸಮಸ್ಯೆಯಿಂದಾಗಿ ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ಪಾಕಿಸ್ತಾನ ಎದುರಿನ ಸರಣಿಗೆ ಅಲಭ್ಯರಾಗಿದ್ದಾರೆ. ಹೀಗಾಗಿ ಏಯ್ಡನ್ ಮಾರ್ಕ್‌ರಮ್ ದಕ್ಷಿಣ ಆಫ್ರಿಕಾ ಟೆಸ್ಟ್ ತಂಡವನ್ನು ಮುನ್ನಡೆಸಲಿದ್ದಾರೆ.

ಪಾಕಿಸ್ತಾನ ಎದುರಿನ ಟೆಸ್ಟ್ ಸರಣಿಗೆ ದಕ್ಷಿಣ ಆಫ್ರಿಕಾ ತಂಡ:

ಏಯ್ಡನ್ ಮಾರ್ಕ್‌ರಮ್(ನಾಯಕ), ಡೇವಿಡ್‌ ಬೆಡ್ಡಿಂಗ್‌ಹ್ಯಾಮ್, ಕಾರ್ಬಿನ್ ಬೋಷ್, ಡೆವಾಲ್ಡ್ ಬ್ರೆವೀಸ್, ಟೋನಿ ಡೆ ಜಾರ್ಜಿ, ಬುಬೈರ್ ಹಂಜಾ, ಸಿಮೊನ್ ಹಾರ್ಮರ್, ಮಾರ್ಕೊ ಯಾನ್ಸೆನ್, ಕೇಶವ್ ಮಹರಾಜ್(ಎರಡನೇ ಟೆಸ್ಟ್‌ಗೆ ಮಾತ್ರ), ವಿಯಾನ್ ಮುಲ್ಡರ್, ಸೆನುರನ್ ಮುತ್ತುಸ್ವಾಮಿ, ಕಗಿಸೋ ರಬಾಡ, ರಿಯಾನ್ ರಿಕೆಲ್ಟನ್, ಟ್ರಿಸ್ಟನ್ ಸ್ಟಬ್ಸ್, ಪ್ರೆನೆಲನ್ ಸುಬ್ರಾಯನ್, ಕೈಲ್ ವೆರಿಯೆನ್ನೆ.

ಪಾಕಿಸ್ತಾನ ಎದುರಿನ ಟಿ20 ಸರಣಿಗೆ ದಕ್ಷಿಣ ಆಫ್ರಿಕಾ ತಂಡ:

ಡೇವಿಡ್ ಮಿಲ್ಲರ್(ನಾಯಕ), ಕಾರ್ಬಿನ್ ಬೋಷ್, ಡೆವಾಲ್ಡ್ ಬ್ರೆವೀಸ್, ನಂದ್ರೆ ಬರ್ಗರ್, ಗೆರಾಲ್ಡ್ ಕೋಟ್ಜೀ, ಕ್ವಿಂಟನ್ ಡಿ ಕಾಕ್, ಡೆನೊವನ್ ಪೆರೇರಾ, ರೀಝಾ ಹೆಂಡ್ರಿಕ್ಸ್, ಜಾರ್ಜ್ ಲಿಂಡೆ, ಕ್ವೇನಾ ಮಫೆಕಾ, ಲುಂಗಿ ಎಂಗಿಡಿ, ನಬಾ ಪೀಟರ್, ಲುವಾನ್ ಪ್ರಿಟೋರಿಯಸ್, ಆಂಡಿಲೇ ಸಿಮೆಲೇನೆ, ಲಿಜ್ಜಾಡ್ ವಿಲಿಯಮ್ಸ್.

ಪಾಕಿಸ್ತಾನ ಎದುರಿನ ಏಕದಿನ ಸರಣಿಗೆ ದಕ್ಷಿಣ ಆಫ್ರಿಕಾ ತಂಡ:

ಮ್ಯಾಥ್ಯೂ ಬ್ರೇಟ್ಜಿ(ನಾಯಕ), ಕಾರ್ಬಿನ್ ಬೋಷ್, ಡೆವಾಲ್ಡ್ ಬ್ರೆವೀಸ್, ನಂದ್ರೆ ಬರ್ಗರ್, ಗೆರಾಲ್ಡ್ ಕೋಟ್ಜಿ, ಕ್ವಿಂಟನ್ ಡಿ ಕಾಕ್, ಟೋನನಿ ಡೆ ಝೋರ್ಜಿ, ಡೊನ್ವಾನ ಫೆರೇರಾ, ಬೋರ್ನ್ ಪೋರ್ಟಿನ್, ಕ್ವೇನಾ ಮಫೆಕಾ, ಲುಂಗಿ ಎಂಗಿಡಿ, ನಬಾ ಪೀಟರ್, ಲುವಾನ್ ಪ್ರಿಟೋರಿಯಸ್, ಸಿನೆಥೆಂಬಾ ಖ್ವಿಸೇಲಿ.