ಏಷ್ಯಾಕಪ್ ಟಿ20 ಸೂಪರ್-4 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಅಭಿಷೇಕ್ ಶರ್ಮಾ ಮತ್ತು ಗಿಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ಗೆಲುವಿನ ನಗೆ ಬೀರಿದ್ದು, ಪಂದ್ಯದ ವೇಳೆ ಪಾಕ್ ಆಟಗಾರನ ಉದ್ಧಟತನದ ವರ್ತನೆ ಗಮನ ಸೆಳೆದವು.
ದುಬೈ: ಏಷ್ಯಾಕಪ್ ಟಿ20ಯಲ್ಲಿ ಪಾಕಿಸ್ತಾನ ವಿರುದ್ಧ ಭಾರತದ ಪರಾಕ್ರಮ ಮುಂದುವರಿದಿದೆ. ಗುಂಪು ಹಂತದ ಪಂದ್ಯದಲ್ಲಿ ಬದ್ಧವೈರಿಯನ್ನು ಹೊಸಕಿ ಹಾಕಿದ್ದ ಟೀಂ ಇಂಡಿಯಾ, ಭಾನುವಾರ ನಡೆದಸೂಪರ್-4ಪಂದ್ಯದಲ್ಲೂ ಎದುರಾಳಿಯನ್ನು ಚೆಂಡಾಡಿತು. 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಸೂರ್ಯಕುಮಾರ್ ಪಡೆ, ಟೂರ್ನಿಯಲ್ಲಿ ಅಜೇಯ ಓಟ ಮುಂದುವರಿಸಿತು.
ಕಳೆದ ಪಂದ್ಯದಲ್ಲಿ ನಡೆದ ಕೆಲ ಘಟನೆಗಳಿಂದಾಗಿ ಈ ಪಂದ್ಯದ ಬಗ್ಗೆ ಕುತೂಹಲ ಹೆಚ್ಚಾಗಿತ್ತು. ನಿರೀಕ್ಷೆಯಂತೆಯೇ ಟಾಸ್ ವೇಳೆ ಪಾಕ್ ನಾಯಕನ ಜೊತೆ ಹ್ಯಾಂಡ್ ಶೇಕ್ ಮಾಡದ ಸೂರ್ಯ, ಟಾಸ್ ಗೆದ್ದ ಬಳಿಕ ಮೊದಲು ಫೀಲ್ಡ್ ಮಾಡುವುದಾಗಿ ತಿಳಿಸಿದರು. ಭಾರತೀಯ ಫೀಲ್ಡರ್ ಕೆಲ ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲಿದ ಪರಿಣಾಮ ಪಾಕ್ ಉತ್ತಮ ಆರಂಭ ಪಡೆಯಿತು. ಆದರೆ, ಶಿವಂ ದುಬೆ 2 ಪ್ರಮುಖ ವಿಕೆಟ್‌ಗಳನ್ನು ಕಬಳಿಸಿ ತಂಡ ಪುಟಿದೇಳಲು ನೆರವಾದರು. ಆರಂಭಿಕ ಫರ್ಹಾನ್ (58) ಗಳಿಸಿದ ಅರ್ಧಶತಕ ಹೊರತುಪಡಿಸಿ ಉಳಿದವರಿಂದ ದೊಡ್ಡ ಸ್ಕೋರ್ ಮೂಡಿಬರಲಿಲ್ಲ. 20 ಓವರಲ್ಲಿ 5 ವಿಕೆಟ್‌ಗೆ ಪಾಕ್ 171 ರನ್ ಗಳಿಸಿತು.
ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಲು ಇಳಿದ ಭಾರತಕ್ಕೆ ಅಭಿಷೇಕ್ ಹಾಗೂ ಗಿಲ್ ಭರ್ಜರಿ ಆರಂಭ ಒದಗಿಸಿದರು. ಮೊದಲ ಎಸೆತವನ್ನೇ ಸಿಕ್ಸರ್‌ಗಟ್ಟಿದ ಅಭಿಷೇಕ್, ಭಾರತದ ಉದ್ದೇಶ ಸ್ಪಷ್ಟಪಡಿಸಿದರು. ಅಭಿಷೇಕ್ 39 ಎಸೆತದಲ್ಲಿ 74, ಗಿಲ್ 28 ಎಸೆತದಲ್ಲಿ 47 ರನ್ ಸಿಡಿಸಿ ತಂಡವನ್ನು ಜಯದತ್ತ ಕೊಂಡೊಯ್ದರು. ಸೂರ್ಯ (0), ಸ್ಯಾಮನ್ (13) ಔಟಾದರೂ ತಿಲಕ್ ಔಟಾಗದೆ 30 ರನ್ ಸಿಡಿಸಿ ತಂಡವನ್ನು 7 ಎಸೆತ ಬಾಕಿ ಇರುವಾಗಲೇ ದಡ ಸೇರಿಸಿದರು. ಈ ಮೂಲಕ ಸೂಪರ್ 4 ಹಂತದಲ್ಲಿ ಮೊದಲ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಬಾಂಗ್ಲಾದೇಶ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ.
ಎಕೆ 47 ರೀತಿ ಬ್ಯಾಟ್ ತೋರಿಸಿ ಪಾಕ್‌ನ ಫರ್ಹಾನ್ ಉದ್ಧಟತನ
ಕಳೆದ ವಾರ ಭಾರತೀಯ ಆಟಗಾರರಿಂದ ಕ್ರಿಕೆಟ್ ಮೈದಾನದಲ್ಲೇ ಭಾರೀ ಅಪಮಾನಕ್ಕೊಳಗಾಗಿದ್ದ ಪಾಕಿಸ್ತಾನ ಕ್ರಿಕೆಟಿಗರು, ಈ ಬಾರಿ ಅದಕ್ಕೆ ತಿರುಗೇಟು ನೀಡುವ ನೆಪದಲ್ಲಿ ಉದ್ಧಟತನ ಮೆರೆದಿದ್ದಾರೆ. ಪಾಕಿಸ್ತಾನ ಬ್ಯಾಟರ್ ಸಾಹಿಬ್‌ಝಾದ ಫರ್ಹಾನ್ ಅರ್ಧಶತಕ ದಾಖಲಿಸಿದ ಬಳಿಕ ತಮ್ಮ ಬ್ಯಾಟ್ ಮೂಲಕ ಎಕೆ 47 ಗನ್ ಶಾಟ್ ರೀತಿ ಸಂಭ್ರಮಿಸಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಮುಂದುವರಿದ ನೋ ಶೇಕ್ ಹ್ಯಾಂಡ್ ವಾರ್
ಭಾರತ ತಂಡ ಗುಂಪು ಹಂತದ ಪಂದ್ಯದಲ್ಲಿ ಪಾಕಿಸ್ತಾನ ಆಟಗಾರರಿಗೆ ಹಸ್ತಲಾಘವ ನೀಡಿರಲಿಲ್ಲ. ಟಾಸ್ ಹಾಗೂ ಪಂದ್ಯದ ಬಳಿಕ ಪಾಕ್ ಆಟಗಾರರನ್ನು ಭಾರತೀಯರು ಕಡೆಗಣಿಸಿದ್ದರು. ಇದು ಭಾನುವಾರದ ಪಂದ್ಯದಲ್ಲೂ ಮುಂದುವರಿಯಿತು. ಟಾಸ್ ವೇಳೆ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಅವರು ಪಾಕಿಸ್ತಾನದ ನಾಯಕ ಸಲ್ಮಾನ್ ಆಘಾ ಕೈ ಕುಲುಕಲಿಲ್ಲ. ಅವರನ್ನು ಕಣ್ಣೆತ್ತಿಯೂ ನೋಡದೆ ತಮ್ಮ ಪಾಡಿಗೆ ಇದ್ದರು.
ಕೈ ಕುಲುಕದ ಮ್ಯಾಚ್ ರೆಫ್ರಿ -ಪಾಕ್ ನಾಯಕ
ಟಾಸ್ ವೇಳೆ ಉಭಯ ತಂಡಗಳ ಆಟಗಾರರ ಜೊತೆ ಮ್ಯಾಚ್ ರೆಫ್ರಿಯೂ ಕೈಕುಲುಕುವುದು ವಾಡಿದೆ. ಆದರೆ ಭಾನುವಾರ ಟಾಸ್ ಗೆ ಆಗಮಿಸಿದಾಗ ಸೂರ್ಯಕುಮಾರ್ ಯಾದವ್ ಹಾಗೂ ರೆಫ್ರಿ ಆ್ಯಂಡಿ ಪೈಕ್ರಾಫ್ಟ್ ಕೈ ಕುಲುಕಿದರು. ಪಾಕಿಸ್ತಾನ ನಾಯಕ ಸಲ್ಮಾನ್ ಆಘಾ ಹಾಗೂ ಪೈಕ್ರಾಫ್ಟ್ ಕೈಕುಲುಕದೆ ಸುಮ್ಮನಿದ್ದರು. ಕಳೆದ ವಾರ ಗುಂಪು ಹಂತದ ಪಂದ್ಯದ ವೇಳೆ ಭಾರತೀಯ ಆಟಗಾರರು ಕೈಕುಲುಕದಿರುವ ರೆಫ್ರಿ ಪೈಕ್ರಾಫ್ಟ್ ಕಾರಣ ಎಂದು ಪಾಕ್ ದೂರಿತ್ತು. ಅಲ್ಲದೆ, 2 ಬಾರಿ ಅವರ ವಿರುದ್ಧ ಐಸಿಸಿಗೂ ದೂರು ನೀಡಿತ್ತು.
