ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಪಂದ್ಯದ ಗೆಲುವನ್ನು ಪಹಲ್ಗಾಂ ಉಗ್ರ ದಾಳಿ ಸಂತ್ರಸ್ತರಿಗೆ ಅರ್ಪಿಸಿರುವುದಾಗಿ ನಾಯಕ ಸೂರ್ಯಕುಮಾರ್ ಯಾದವ್ ತಿಳಿಸಿದ್ದಾರೆ.  

ದುಬೈ: ಕೆಲ ತಿಂಗಳುಗಳ ಹಿಂದೆ ಕಾಶ್ಮೀರದ ಪಹಲ್ಗಾಂನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ್ದ ದಾಳಿಯನ್ನು ಭಾರತ ಕ್ರಿಕೆಟ್ ತಂಡ ಏಷ್ಯಾಕಪ್ ಪಂದ್ಯದಲ್ಲಿ ಖಂಡಿಸಿದೆ. 

ಭಾನುವಾರ ನಡೆದ ಪಂದ್ಯದಲ್ಲಿ ಪಾಕ್‌ ವಿರುದ್ಧ7 ವಿಕೆಟ್‌ಗಳ ಅತಿ ಸುಲಭ ಗೆಲುವು ದಾಖಲಿಸಿ ಪರಾಕ್ರಮ ಮೆರೆಯುವ ಮೂಲಕ ಬದ್ಧವೈರಿಗೆ ಮುಖಭಂಗ ಉಂಟು ಮಾಡಿದ್ದು ಒಂದು ಕಡೆಯಾದರೆ, ಪಂದ್ಯದುದ್ದಕ್ಕೂ ಪಾಕಿಸ್ತಾನಿ ಆಟಗಾರರನ್ನು ಕಡೆಗಣಿಸಿ ಅವರೊಂದಿಗೆ ಹ್ಯಾಂಡ್ ಶೇಕ್ ಮಾಡದೆ, ಅವರ ಜತೆ ಸಂವಹನ ನಡೆಸದೆ, ಗೆದ್ದ ಬಳಿಕ ಪಾಕಿಗಳ ಮುಖ ಸಹ ನೋಡದೆ ಡ್ರೆಸ್ಸಿಂಗ್ ರೂಂಗೆ ತೆರಳಿ ಬಾಗಿಲು ಬಂದ್ ಮಾಡಿಕೊಂಡಿದ್ದು ಭಾರತೀಯರ ಮೆಚ್ಚುಗೆಗೆ ಪಾತ್ರವಾಗಿದೆ.ಎಲ್ಲಕ್ಕಿಂತ ಹೆಚ್ಚಾಗಿ ಬಹುಮಾನ ವಿತರಣೆ ಮುಗಿದ ಮೇಲೆ ಮೈಕ್ ಹಿಡಿದು ಪಾಕಿಸ್ತಾನದ ಉಗ್ರವಾದಕ್ಕೆ ಧಿಕ್ಕಾರ ಎನ್ನುವ ನೇರ ಅರ್ಥದಲ್ಲಿ ಮಾತನಾಡಿದ ನಾಯಕ ಸೂರ್ಯಕುಮಾರ್, ನಮ್ಮ ಈ ಗೆಲುವನ್ನು ಪಹಲ್ಗಾಂ ಸಂತ್ರಸ್ತರಿಗೆ, ಭಾರತೀಯ ಸೇನೆಗೆ ಅರ್ಪಿಸುತ್ತೇವೆ ಎಂದಿದ್ದು ಪಾಕ್‌ನ ಗಾಯದ ಮೇಲೆ ಉಪ್ಪು ಸವರಿದಂತಾಯಿತು. ಪಹಲ್ಗಾಂ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆದ ಮೊದಲ ಪಂದ್ಯ ಇದಾಗಿತ್ತು.

ಪಂದ್ಯವನ್ನು ಬಹಿಷ್ಕರಿಸುವಂತೆ ಭಾರತ ತಂಡವನ್ನು ಏಷ್ಯಾಕಪ್ ವೇಳಾಪಟ್ಟಿ ಪ್ರಕಟಗೊಂಡ ದಿನದಿಂದಲೇ ಅನೇಕರು ಒತ್ತಾಯಿಸುತ್ತಿದ್ದರು. ಆದರೆ ಪಂದ್ಯಕ್ಕೆ ಬಿಸಿಸಿಐ, ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದವು. ಈ ಬಗ್ಗೆಯೂ ಅನೇಕರು ಟೀಕೆ ಮಾಡಿದ್ದರು. ಭಾರತ ತಂಡ ಗೆದ್ದು ಪಾಕಿಸ್ತಾನದ ಉಗ್ರವಾದವನ್ನು ಖಂಡಿಸಿದ ಬಳಿಕ ಸಾಮಾಜಿಕತಾಣಗಳಲ್ಲಿ ಟೀಂ ಇಂಡಿಯಾವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಪಂದ್ಯ ಬಹಿಷ್ಕರಿಸುವ ಅಧಿಕಾರ ಆಟಗಾರರಿಗೆ ಇರಲಿಲ್ಲ. ಆದರೆ ಮೈದಾನದಲ್ಲಿ ಪಾಕಿಸ್ತಾನಕ್ಕೆ ಎಂಥ ಉತ್ತರ ಕೊಡಬೇಕು, ವೈರಿ ದೇಶವನ್ನು ಹೇಗೆನಡೆಸಿಕೊಳ್ಳಬೇಕು ಅದನ್ನು ಭಾರತೀಯರು ಅಚ್ಚುಕಟ್ಟಾಗಿ ಮಾಡಿದ್ದಾರೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

ಟಾಸ್ ವೇಳೆಯೇ ಮುಖಭಂಗ

ಸಾಮಾನ್ಯವಾಗಿ ಯಾವುದೇ ಹಂತದ ಪಂದ್ಯವಾದರೂ ಟಾಸ್ ವೇಳೆ ಉಭಯ ತಂಡಗಳ ನಾಯಕರು ಹ್ಯಾಂಡ್ ಶೇಕ್ ಮಾಡಿ ಪರಸ್ಪರ 'ಗುಡ್‌ಲಕ್' ಹೇಳುವುದು ಸಾಮಾನ್ಯ. ಆದರೆ ಈ ಪಂದ್ಯದ ವೇಳೆ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಹ್ಯಾಂಡ್‌ಶೇಕ್‌ ಇರಲಿ, ಪಾಕ್ ನಾಯಕ ಸಲ್ಮಾನ್ ಅಲಿ ಅಘಾರನ್ನು ತಿರುಗಿಯೂ ನೋಡಲಿಲ್ಲ. ಸಲ್ಮಾನ್ ತಮ್ಮ ಬಳಿ ಬಂದಾಗ ಸೂರ್ಯ ಕುಮಾರ್ ಕೈ ಕಟ್ಟಿ ನಿಂತು, ಮುಖ ತಿರುಗಿಸಿದರು.

ಪಂದ್ಯ ನಡೆಯುವಾಗಲೂ ಪರಸ್ಪರ ಮಾತಿಲ್ಲ!

ಏನೇ ವೈರತ್ವವಿದ್ದರೂ ಪಂದ್ಯದ ನಡುವೆ ಉಭಯ ತಂಡಗಳ ಆಟಗಾರರ ನಡುವೆ ಒಂದೆರಡು ಬಾರಿಯಾದರೂ ಮಾತುಕತೆ ನಡೆಯುತ್ತದೆ. ಒಬ್ಬರನ್ನೊಬ್ಬರು ಕಿಚಾಯಿಸುವುದು, ಕಾಲೆಳೆಯುವುದು, ಬೈದುಕೊಳ್ಳುವುದು, ಗುರಾಯಿಸುವುದು ಇದ್ದಿದ್ದೇ. ಆದರೆ ಭಾನುವಾರದ ಪಂದ್ಯದ ವೇಳೆ ಭಾರತ ತಂಡದ ಆಟಗಾರರು ಪಾಕಿಸ್ತಾನ ಆಟಗಾರರ ಜೊತೆ ಮಾತಾಡುವುದಿರಲಿ, ಅವರನ್ನು ಕಣ್ಣೆತ್ತಿಯೂ ನೋಡಲಿಲ್ಲ.

ಪಾಕ್‌ನ ಅಭಿನಂದನೆ ಸ್ವೀಕರಿಸದ ಭಾರತ!

ಗೆಲುವಿನ ಸಿಕ್ಸರ್ ಸಿಡಿಸಿದ ಬಳಿಕ ಸೂರ್ಯ, ಪಾಕಿಗಳ ಹ್ಯಾಂಡ್‌ಶೇಕ್ ಮಾಡದೆ ತಮ್ಮ ಜೊತೆಗಾರ ದುಬೆ ಜೊತೆ ಪೆವಿಲಿಯನ್‌ಗೆ ತೆರಳಿದರು. ಭಾರತೀಯರಾರೂ ಡ್ರೆಸ್ಸಿಂಗ್ ರೂಂ ಮುಂಭಾಗದ ಮೆಟ್ಟಿಲು ಇಳಿದು ಕೆಳಕ್ಕೆ ಬರಲಿಲ್ಲ. ಭಾರತೀಯರನ್ನು ಅಭಿನಂದಿಸಲು ಪಾಕ್ ಆಟಗಾರರು ಮೈದಾನದಲ್ಲೇ ಕಾಯುತ್ತಾ ನಿಂತಿದ್ದರು. ಆದರೆ ಭಾರತೀಯರೆಲ್ಲರೂ ಡ್ರೆಸ್ಸಿಂಗ್ ರೂಂ ಒಳಕ್ಕೆ ಹೋಗಿ, ಬಾಗಿಲು ಬಂದ್ ಮಾಡಿಕೊ೦ಡರು.

ಪಾಕ್ ಮಹಿಳೆಗೂ ಹ್ಯಾಂಡ್‌ ಶೇಕ್ ಇಲ್ಲ

ಬಹುಮಾನ ವಿತರಣೆ ವೇಳೆ ಸಾಮಾನ್ಯವಾಗಿ ಉಪಸ್ಥಿತರಿರುವ ಗಣ್ಯರೆಲ್ಲರಿಗೂ ಹ್ಯಾಂಡ್‌ಶೇಕ್‌ ಮಾಡುವುದು ಪದ್ಧತಿ. ಆದರೆ ಬಹುಮಾನ ಸ್ವೀಕರಿಸಲು ಆಗಮಿಸಿದ ಅಕ್ಷ‌ರ್ ಪಟೇಲ್, ಕುಲ್ದೀಪ್ ಯಾದವ್, ಸೂರ್ಯಕುಮಾರ್ ಯಾದವ್ ಅಲ್ಲಿ ಪಾಕ್ ಜೆರ್ಸಿ ತೊಟ್ಟು ನಿಂತಿದ್ದ ಯುಎಇ ಮೂಲದ ಸಂಸ್ಥೆಯೊಂದರ ಮಹಿಳೆಯನ್ನು ಕಣ್ಣೆತ್ತಿಯೂ ನೋಡಲಿಲ್ಲ. ಆಕೆ ಭಾರತ ಆಟಗಾರರಿಗೆ ಹ್ಯಾಂಡ್ ಶೇಕ್ ಮಾಡಲು ಉತ್ಸುಕರಾಗಿದ್ದಂತೆ ಕಂಡುಬಂತಾದರೂ, ಭಾರತೀಯರು ಆಕೆಯತ್ತ ಸುಳಿಯಲಿಲ್ಲ.

ನಾಯಕ ಸೂರ್ಯ 'ಬಿಗ್' ಸಂದೇಶ!

ಬಹುಮಾನ ವಿತರಣೆ ಬಳಿಕ ಸೂರ್ಯರ ಸಂದರ್ಶನ ನಡೆಯಿತು. ಪ್ರಸಾರಕರ ಪರ ಮಾಂಜೇಕರ್ ತಮ್ಮ ಪ್ರಶ್ನೆ ಮುಗಿಸಿದ ಬಳಿಕ ಸೂರ್ಯ ತಾವೇನೋ ಹೇಳಬೇಕಿದೆ ಎಂದು ಮತ್ತೆ ಮೈಕ್ ಕೈಗೆತ್ತಿಕೊಂಡರು. 'ಪಹಲ್ಗಾಂ ಉಗ್ರ ದಾಳಿಯ ಸಂತ್ರಸ್ತರ ಕುಟುಂಬಗಳೊಂದಿಗೆ ನಾವಿದ್ದೇವೆ. ಈ ಗೆಲುವನ್ನು ನಮ್ಮ ಸೇನೆಗೆ ಅರ್ಪಿಸುತ್ತೇವೆ' ಎಂದು ಸೂರ್ಯಕುಮಾರ್‌ ಹೇಳುತ್ತಿದ್ದಂತೆ, ಕ್ರೀಡಾಂಗಣದಲ್ಲಿ ಭಾರತೀಯ ಅಭಿಮಾನಿಗಳು ಸಹ ಸಹಮತ ವ್ಯಕ್ತಪಡಿಸಿದರು.