ಫೈನಲ್ ಪಂದ್ಯದ ಆರಂಭದಲ್ಲಿ ಆರ್‌ಸಿಬಿ ಅಬ್ಬರ ಇರಲಿಲ್ಲ. ವಿಕೆಟ್ ಕಳೆದಕೊಂಡು ಆತಂಕ ಎದುರಿಸಿತ್ತು. ಕೊನೆಗೆ 190 ರನ್ ಸಿಡಿಸಿದೆ. ಈ ಮೊತ್ತ ಪಂಜಾಬ್ ಕಿಂಗ್ಸ್ ಕಟ್ಟಿ ಹಾಕಿ ಟ್ರೋಫಿ ಗೆಲ್ಲಲು ಸಾಕೇ? ಅಹಮ್ಮದಾಬಾದ್ ಟಿ20 ಅಂಕಿ ಅಂಶ ಏನು?

ಅಹಮ್ಮದಾಬಾದ್(ಜೂ.03) ಐಪಿಎಲ್ ಫೈನಲ್ ಪಂದ್ಯ ಕ್ಷಣಕ್ಷಣಕ್ಕೂ ಕೂತೂಹಲ ಹೆಚ್ಚಿಸುತ್ತಿದೆ. ಮಹತ್ವದ ಪಂದ್ಯದ ಆರಂಭದಲ್ಲಿ ಆರ್‌ಸಿಬಿ ಅಬ್ಬರ ಬ್ಯಾಟಿಂಗ್ ಇರಲಿಲ್ಲ. ಇದಕ್ಕೆ ಪಂಜಾಬ್ ಕಿಂಗ್ಸ್ ಅವಕಾಶ ನೀಡಲಿಲ್ಲ. ಆರಂಭದಲ್ಲೇ ವಿಕೆಟ್ ಪತನ, ರನ್ ಗಳಿಸಲು ಹೋರಾಟಗಳಿಂದ ಆರ್‌ಸಿಬಿ ರನ್ರೇಟ್ ಕುಸಿದಿತ್ತು. ಕೊಹ್ಲಿ ವಿಕೆಟ್ ಉಳಿಸಿಕೊಂಡು ದಿಟ್ಟ ಹೋರಾಟ ನೀಡಿದರು. ಆದರೆ ಹಾಫ್ ಸೆಂಚುರಿ ಬರಲಿಲ್ಲ. ಸ್ಫೋಟಕ ಬ್ಯಾಟಿಂಗ್ ಇರದಿದ್ದರೂ ಆರ್‌ಸಿಬಿ ಸ್ಪರ್ಧಾತ್ಮಕ ರನ್ ಸಿಡಿಸಿದೆ. ಆರ್‌ಸಿಬಿ 9 ವಿಕೆಟ್ ನಷ್ಟಕ್ಕೆ 190 ರನ್ ಸಿಡಿಸಿದೆ.

ಪಂಜಾಬ್ ಕಿಂಗ್ಸ್‌ಗೆ 191 ರನ್ ಟಾರ್ಗೆಟ್

ಪಂಜಾಬ್ ಕಿಂಗ್ಸ್‌ಗೆ 191 ರನ್ ಟಾರ್ಗೆಟ್ ನೀಡಲಾಗಿದೆ. ಈ ಟಾರ್ಗೆಟ್ ಆರ್‌ಸಿಬಿ ತಂಡವನ್ನು ಟ್ರೋಫಿ ಗೆಲ್ಲುವಂತೆ ಮಾಡುತ್ತಾ? ಹಲವು ಪ್ರಶ್ನೆಗಳು ಅಭಿಮಾನಿಗಳನ್ನು ಕಾಡುತ್ತಿದೆ. 2003ರಲ್ಲಿ ಇದೇ ಮೈದಾನದಲ್ಲಿ ಫೈನಲ್ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಗುಜರಾತ್ ಟೈಟಾನ್ಸ್ ಗೆಲುವು ದಾಖಲಿಸಿತ್ತು. ಇನ್ನು 10 ಅಂತಾರಾಷ್ಟ್ರೀಯ ಟಿ20 ಪಂದ್ಯ ನಡೆದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೇಳೆ 6 ಪಂದ್ಯದಲ್ಲಿ ಗೆಲುವು ದಾಖಲಾಗಿದೆ. 4 ಪಂದ್ಯ ಚೇಸಿಂಗ್ ತಂಡ ಗೆದ್ದುಕೊಂಡಿದೆ.

ಇನ್ನು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಒಟ್ಟು 42 ಐಪಿಎಲ್ ಪಂದ್ಯ ನಡೆದಿದೆ. 20 ಬಾರಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆದ್ದುಕೊಂಡಿದ್ದರೆ, 22 ಬಾರಿ ಸೆಕೆಂಡ್ ಬ್ಯಾಟಿಂಗ್ ಮಾಡಿದ ತಂಡ ಗೆದ್ದುಕೊಂಡಿದೆ. ನರೇಂದ್ರ ಮೋದಿ ಕ್ರೀಡಾಂಗಣದ ಕೆಲ ದಾಖಲೆಗಳು ಆರ್‌ಸಿಬಿ ಪರವಾಗಿದ್ದರೆ, ಮತ್ತೆ ಕೆಲ ಅಂಕಿ ಅಂಶ ವಿರುದ್ಧವಾಗಿದೆ. ಆದರೆ ಲೀಗ್ ಹಾಗೂ ಪ್ಲೇ ಆಫ್ ಹಂತದ ಪಂದ್ಯ ಗಮನಿಸಿದರೆ ಆರ್‌ಸಿಬಿ ಡಿಫೆಂಡ್ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು.

ಆರ್‌ಸಿಬಿ ಇನ್ನಿಂಗ್ಸ್

ಟಾಸ್ ಸೋತು ಬ್ಯಾಟಿಂಗ್ ಇಳಿದ ಆರ್‌ಸಿಬಿಗೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಫಿಲಿಪ್ ಸಾಲ್ಟ್ ಕೇವಲ 16 ರನ್ ಸಿಡಿಸಿ ಔಟಾದರು. ಮೊದಲ ವಿಕೆಟ್ ಪತನ ಆರ್‌ಸಿಬಿಗೆ ತೀವ್ರ ಹಿನ್ನಡೆ ತಂದಿತ್ತು. ಮಯಾಂಕ್ ಅಗರ್ವಾಲ್ 24 ರನ್ ಕಾಣಿಕೆ ನೀಡಿದರು. ಮಯಾಂಕ್ ಹಾಗೂ ಕೊಹ್ಲಿ ಇನ್ನಿಂಗ್ಸ್ ಕಟ್ಟುತ್ತಿದ್ದಂತೆ ವಿಕೆಟ್ ಪತನಗೊಂಡಿತು. ಹೀಗಾಗಿ ಆರ್‌ಸಿಬಿ ರನ್‌ರೇಟ್ ಮತ್ತೆ ಕುಸಿದಿತ್ತು. ನಾಯಕ ರಜತ್ ಪಾಟೀದಾರ್ 26 ರನ್ ಕಾಣಿಕೆ ನೀಡಿದರು. ಆದರೆ ಅಬ್ಬರ ಇರಲಿಲ್ಲ. ಇತ್ತ ಏಕಾಂಗಿ ಹೋರಾಟ ನೀಡಿದ ವಿರಾಟ್ ಕೊಹ್ಲಿ 43 ರನ್ ಸಿಡಿಸಿ ಔಟಾದರು. ಕೊಹ್ಲಿ ವಿಕೆಟ್ ಪತನ ಆರ್‌ಸಿಬಿ ತಂಡಕ್ಕೆ ತೀವ್ರ ಹಿನ್ನಡೆ ತಂದಿತ್ತು.

ಲಿಯಾಮ್ ಲಿವಿಂಗ್‌ಸ್ಟೋನ್ 25 ರನ್ ಸಿಡಿಸಿ ಔಟಾದರು. ಜಿತೇಶ್ ಶರ್ಮಾ 24 ರನ್ ಕಾಣಿಕೆ ನೀಡಿದರು. ಅಂತಿಮ ಹಂತದಲ್ಲಿ ರೋಮಾರಿಯೋ ಶೆಫರ್ಡ್ ಹಾಗೂ ಕ್ರುನಾಲ್ ಪಾಂಡ್ಯ 200 ರನ್ ಗಡಿ ದಾಟಿಸುವ ಸೂಚನೆ ನೀಡಿದರು. ಆದರೆ ಶೆಫರ್ಡ್ 17 ರನ್ ಸಿಡಿಸಿ ಔಟಾದರು. ಕ್ರುನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್ ವಿಕೆಟ್ ಕಳೆದುಕೊಂಡು ಆರ್‌ಸಿಬಿ 8 ವಿಕೆಟ್ ನಷ್ಟಕ್ಕೆ 190 ರನ್ ಸಿಡಿಸಿತು. ಪಂಜಾಬ್‌ಗೆ 191 ರನ್ ಟಾರ್ಗೆಟ್ ನೀಡಿದೆ.