ಐಪಿಎಲ್ 2025ರ ಫೈನಲ್‌ನಲ್ಲಿ ಆರ್‌ಸಿಬಿ ಮತ್ತು ಪಂಜಾಬ್ ಮುಖಾಮುಖಿ. ಲೀಗ್ ಹಂತದಲ್ಲಿ ಅಗ್ರಸ್ಥಾನದಲ್ಲಿದ್ದ ಉಭಯ ತಂಡಗಳು ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಉಭಯ ತಂಡಗಳ ಗೆಲುವಿನ ದಾಖಲೆ ಹೇಗಿದೆ?

ಅಹಮದಾಬಾದ್: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ ವಹಿಸಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸ್ಪರ್ಧಾತ್ಮಕ ಮೊತ್ತ ಕಲೆಹಾಕುವತ್ತ ದಿಟ್ಟ ಹೆಜ್ಜೆ ಹಾಕುತ್ತಿದೆ.

ಉಭಯ ತಂಡಗಳು 2025ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಲೀಗ್ ಹಂತದ ಅಂತ್ಯದ ವೇಳೆಗೆ ಪಂಜಾಬ್ ಹಾಗೂ ಆರ್‌ಸಿಬಿ ತಂಡಗಳು ಕ್ರಮವಾಗಿ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆದಿದ್ದವು. ಕ್ವಾಲಿಫೈಯರ್ 1 ಪಂದ್ಯದಲ್ಲಿ ಮುಖಾಮುಖಿಯಲ್ಲಿ ಆರ್‌ಸಿಬಿ ತಂಡವು 10 ಓವರ್ ಬಾಕಿ ಇರುವಂತೆಯೇ 8 ವಿಕೆಟ್‌ ಅಂತರದ ಭರ್ಜರಿ ಗೆಲುವು ಸಾಧಿಸಿತ್ತು.

ಇನ್ನು ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ಪಾಲಿಗೆ ನರೇಂದ್ರ ಮೋದಿ ಸ್ಟೇಡಿಯಂ ಎಷ್ಟು ಅನುಕೂಲಕರವಾಗಿದೆ ಎನ್ನುವುದನ್ನು ನೋಡೋಣ ಬನ್ನಿ. ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ಪಾಲಿಗೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಅದೃಷ್ಟದ ಮೈದಾನ ಎನಿಸಿಕೊಂಡಿದೆ. ಅಹಮದಾಬಾದ್ ಮೈದಾನದಲ್ಲಿ ಆರ್‌ಸಿಬಿ ತಂಡವು 7 ಪಂದ್ಯಗಳನ್ನಾಡಿದ್ದು, ಈ ಪೈಕಿ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಪಂಜಾಬ್ ಕಿಂಗ್ಸ್ ತಂಡದ ಗೆಲುವಿನ ಪ್ರತಿಶತ 71.43% ಇದೆ.

ಇನ್ನೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಿಗೆ ಅಹಮದಾಬಾದ್ ಸ್ಟೇಡಿಯಂ 50-50 ಎನ್ನುವಂತಿದೆ. ಮೋದಿ ಸ್ಟೇಡಿಯಂನಲ್ಲಿ ಆರ್‌ಸಿಬಿ ತಂಡವು 6 ಪಂದ್ಯಗಳನ್ನಾಡಿದ್ದು ಈ ಪೈಕಿ 3 ಪಂದ್ಯಗಳಲ್ಲಿ ಗೆಲುವು 3 ಸೋಲು ಅನುಭವಿಸಿದ್ದು, ಗೆಲುವಿನ ಪ್ರತಿಶತ 50% ಇದೆ.

ಮತ್ತೆ ಟಿ20 ಫೈನಲ್‌ನಲ್ಲಿ ರಜತ್-ಶ್ರೇಯಸ್ ತಂಡಗಳ ಮುಖಾಮುಖಿ

ಸತತ ಎರಡನೇ ವರ್ಷ ಟಿ20 ಫೈನಲ್‌ನಲ್ಲಿ ರಜತ್ vs ಶ್ರೇಯಸ್ ನಾಯಕತ್ವದ ತಂಡಗಳು ಮುಖಾಮುಖಿಯಾಗಲಿವೆ. ಕಳೆದ ವರ್ಷ ಮುಸ್ತಾಕ್ ಅಲಿ ಟಿ20 ಫೈನಲ್‌ನಲ್ಲಿ ಶ್ರೇಯಸ್ ಮುಂಬೈಗೆ, ರಜತ್ ಮಧ್ಯಪ್ರದೇಶಕ್ಕೆ ನಾಯಕತ್ವ ವಹಿಸಿದ್ದರು. ಮುಂಬೈ ತಂಡ ಚಾಂಪಿಯನ್ ಆಗಿತ್ತು.

ಮಳೆ ಬಂದರೆ ಪಂದ್ಯ ನಾಳೆಗೆ ಮುಂದೂಡಿಕೆ

ಭಾನುವಾರದ ಕ್ವಾಲಿಫೈಯರ್-2 ಪಂದ್ಯ ಮಳೆಯಿಂದ 2.15 ಗಂಟೆ ತಡವಾಗಿ ಆರಂಭಗೊಂಡಿತ್ತು. ಮಂಗಳವಾರ ಅಹಮದಾಬಾದ್‌ನಲ್ಲೇ ಫೈನಲ್ ನಡೆಯಲಿದ್ದು, ಈ ಪಂದ್ಯಕ್ಕೂ ಮಳೆ ಭೀತಿ ಎದುರಾಗಿದೆ. ಫೈನಲ್‌ಗೆ 2 ಗಂಟೆ ಹೆಚ್ಚುವರಿ ಸಮಯ ನಿಗದಿಪಡಿಸಲಾಗಿದ್ದರೂ, ಮಳೆಯಿಂದ ಮಂಗಳವಾರ ಪಂದ್ಯ ನಡೆಯದಿದ್ದರೆ ಮೀಸಲು ದಿನವಾದ ಬುಧವಾರಕ್ಕೆ ಮುಂದೂಡಿಕೆ ಆಗಲಿದೆ.