ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯವು ಇಂದಿನಿಂದ ಪುಣೆಯ ಎಂಸಿಎ ಮೈದಾನದಲ್ಲಿ ಆರಂಭವಾಗಲಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಪುಣೆ: ಬೆಂಗಳೂರಿನ ಮೊದಲ ಟೆಸ್ಟ್‌ನಲ್ಲಿ ಆಘಾತಕಾರಿ ಸೋಲಿಗೆ ತುತ್ತಾಗಿದ್ದ ಟೀಂ ಇಂಡಿಯಾ ಈಗ ಸರಣಿ ಉಳಿಸಿಕೊಳ್ಳಬೇಕಾದ ಒತ್ತಡದಲ್ಲಿದೆ. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಗುರುವಾರದಿಂದ ನ್ಯೂಜಿಲೆಂಡ್ ವಿರುದ್ಧ 2ನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಬೆಂಗಳೂರಿನಲ್ಲಿ ಕುಗ್ಗಿ ಹೋಗಿದ್ದ ಭಾರತ, ಪುಣೆ ಕ್ರೀಡಾಂಗಣದಲ್ಲಿ ಪುಟಿದೇಳುತ್ತಾ ಎಂಬ ಕುತೂಹಲ ಸದ್ಯ ಅಭಿಮಾನಿಗಳಲ್ಲಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಅಚ್ಚರಿ ರೀತಿಯಲ್ಲಿ ಕೇವಲ 46 ರನ್‌ಗೆ ಸರ್ವಪತನ ಕಂಡಿದ್ದ ರೋಹಿತ್ ಪಡೆ, 2ನೇ ಇನ್ನಿಂಗ್ಸ್‌ನಲ್ಲಿ ದಿಟ್ಟ ಹೋರಾಟ ಪ್ರದರ್ಶಿಸಿದ್ದರೂ ಗೆಲುವು ಸಿಕ್ಕಿರಲಿಲ್ಲ. ತಂಡ 3 ಪಂದ್ಯಗಳ ಸರಣಿಯನ್ನು 1-1ರಿಂದ ಸಮಬಲಗೊಳಿಸಬೇಕಿದ್ದರೆ ಪುಣೆ ಟೆಸ್ಟ್ ನಲ್ಲಿ ಗೆಲ್ಲಲೇಬೇಕು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ದೃಷ್ಟಿಯಲ್ಲೂ ಭಾರತಕ್ಕೆ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ.

ಪುಣೆ ಟೆಸ್ಟ್‌ಗೆ ಸ್ಪಿನ್‌ ಸ್ನೇಹಿ ಪಿಚ್‌: ಮತ್ತೆ 3 ಸ್ಪಿನ್ನರ್‌ ಜೊತೆ ಕಣಕ್ಕಿಳಿಯುತ್ತಾ ಭಾರತ?

ಪಂದ್ಯದಲ್ಲಿ ಭಾರತ ಕಮ್‌ಬ್ಯಾಕ್ ಮಾಡುವ ನಿರೀಕ್ಷೆ ಇದ್ದರೂ ತಂಡದಲ್ಲಿ ಆಯ್ಕೆ ಗೊಂದಲ ಎದುರಾಗುವುದು ಖಚಿತ. ಮೊದಲ ಪಂದ್ಯಕ್ಕೆ ಗಾಯದಿಂದಾಗಿ ಶುಭಮನ್ ಗಿಲ್ ಗೈರಾಗಿದ್ದರು. ರಿಷಬ್ 2ನೇ ಇನ್ನಿಂಗ್ಸ್ ವೇಳೆ ಗಾಯಗೊಂಡಿದ್ದರು. ಸದ್ಯ ಇವರಿಬ್ಬರೂ ಆಯ್ಕೆಗೆ ಲಭ್ಯವಿದ್ದಾರೆ. ಆದರೆ ಗಿಲ್ ಬದಲು ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ಸರ್ಫರಾಜ್ ಖಾನ್ ಅಭೂತಪೂರ್ವ ಹೋರಾಟ ಪ್ರದರ್ಶಿಸಿ 150 ರನ್ ಸಿಡಿಸಿದ್ದರು. ಹೀಗಾಗಿ 2ನೇ ಪಂದ್ಯಕ್ಕೆ ಗಿಲ್ ಅಥವಾ ಸರ್ಫರಾಜ್ ಪೈಕಿ ಯಾರನ್ನು ತಂಡಕ್ಕೆ ಸೇರಿಸಿಕೊಳ್ಳುವುದು ಎಂಬ ಗೊಂದಲ ಕೋಚ್ ಗೌತಮ್ ಗಂಭೀರ್, ನಾಯಕ ರೋಹಿತ್‌ ಶರ್ಮಾ ಅವರ ಮುಂದಿದೆ.

ರಾಹುಲ್‌ಗೆ ಮತ್ತೊಂದು ಚಾನ್ಸ್?: ಒಂದು ವೇಳೆ ಗಿಲ್‌ಗೆ ಅವಕಾಶ ಸಿಕ್ಕರೆ ಆಗ ಸರ್ಫರಾಜ್ ಅಥವಾ ಕೆ.ಎಲ್.ರಾಹುಲ್ ಪೈಕಿ ಒಬ್ಬರು ತಂಡದಿಂದ ಹೊರಗುಳಿಯಬೇಕಾಗುತ್ತದೆ. ಆದರೆ ಗಂಭೀರ್ ಹೇಳಿಕೆ ಗಮನಿಸಿದರೆ ರಾಹುಲ್‌ಗೆ ಮತ್ತೊಂದು ಅವಕಾಶ ಸಿಗುವ ಸಾಧ್ಯತೆ ಇದೆ. ಹೀಗಾದರೆ ಸರ್ಫರಾಜ್ ಅನಿವಾರ್ಯವಾಗಿ ಜಾಗ ಬಿಟ್ಟುಕೊಡಬೇಕಾಗಬಹುದು.

ರೋಹಿತ್ ಶರ್ಮಾ ಭೇಟಿ ಮಾಡಿ ಕೊಹ್ಲಿಗೆ ಸ್ಪೆಷಲ್ ಮೆಸೇಜ್ ಕಳಿಸಿದ ಕ್ಯೂಟ್ ಗರ್ಲ್‌; ವಿಡಿಯೋ ವೈರಲ್

ಮೂವರು ಸ್ಪಿನ್ನರ್ಸ್ ಸಾಧ್ಯತೆ: ಬೆಂಗಳೂರಿಗೆ ಹೋಲಿಸಿದರೆ ಪುಣೆ ಪಿಚ್ ನಿಧಾನಗತಿಯಲ್ಲಿರಲಿದ್ದು, ಸ್ಪಿನ್ನರ್‌ಗಳು ಹೆಚ್ಚಿನ ನೆರವು ಪಡೆಯಬಲ್ಲರು. ಹೀಗಾಗಿ ಭಾರತ ಈ ಪಂದ್ಯದಲ್ಲಿ 3 ತಜ್ಞ ಸ್ಪಿನ್ನರ್‌ಗಳನ್ನು ಆಡಿಸುವ ನಿರೀಕ್ಷೆಯಿದೆ. ಆರ್.ಅಶ್ವಿನ್, ಜಡೇಜಾ ಜೊತೆ 3ನೇ ಸ್ಪಿನ್ನರ್ ಸ್ಥಾನಕ್ಕೆ ಕುಲ್ಲೀಪ್ ಯಾದವ್, ಅಕ್ಷ‌ರ್ ಪಟೇಲ್ ಹಾಗೂ ವಾಷಿಂಗ್ಟನ್ ಸುಂದರ್ ನಡುವೆ ಪೈಪೋಟಿಯಿದೆ. ಇನ್ನು, ಮೊನಚು ಕಳೆದುಕೊಂಡಿರುವ ಮೊಹಮದ್ ಸಿರಾಜ್ ಬದಲು ಆಕಾಶ್‌ದೀಪ್‌ಗೆ ಸ್ಥಾನ ಸಿಗಬಹುದು.

ಸರಣಿ ಗುರಿ: ಮೊದಲ ಪಂದ್ಯದ ಗೆಲುವಿನ ಹುಮ್ಮಸ್ಸಿನಲ್ಲಿರುವ ನ್ಯೂಜಿಲೆಂಡ್ ಸದ್ಯ ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದೆ. ತಂಡ ಈ ಪಂದ್ಯದಲ್ಲೂ ಕೇನ್‌ವಿಲಿಯಮನ್‌ ಸೇವೆಯಿಂದ ವಂಚಿತವಾಗಲಿದೆ. ಕಾನ್‌ವೇ, ರಚಿನ್ ರವೀಂದ್ರ, ಮ್ಯಾಟ್ ಹೆನ್ರಿ, ವಿಲಿಯಂ ರೂರ್ಕಿ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ.

ತವರಲ್ಲಿ ಭಾರತ 18 ಸರಣಿಯಲ್ಲಿ ಅಜೇಯ

ಭಾರತ 2012ರಿಂದ ತವರಿನಲ್ಲಿ ಒಂದೂ ಟೆಸ್ಟ್ ಸರಣಿ ಸೋತಿಲ್ಲ. ಕಳೆದ 18 ಸರಣಿಗಳಲ್ಲೂ ಭಾರತ ಗೆಲುವು ಸಾಧಿಸಿದೆ. ನ್ಯೂಜಿಲೆಂಡ್ ವಿರುದ್ಧ ಕೊನೆ 2 ಟೆಸ್ಟ್‌ನಲ್ಲಿ ಗೆಲ್ಲುವ ಮೂಲಕ ತವರಿನ ಸರಣಿ ಗೆಲುವಿನ ಓಟವನ್ನು 19ಕ್ಕೆ ಹೆಚ್ಚಿಸಲು ಭಾರತ ಕಾಯುತ್ತಿದೆ. ಪುಣೆ ಟೆಸ್ಟ್‌ನಲ್ಲಿ ಗೆದ್ದರೆ ಭಾರತ ಸರಣಿಯನ್ನು ಸಮಬಲಗೊಳಿಸಲಿದೆ. ಸೋತರೆ 18 ಸರಣಿ ಗೆಲುವಿನ ಓಟಕ್ಕೆ ಬ್ರೇಕ್ ಬೀಳಲಿದೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್ ಶರ್ಮಾ(ನಾಯಕ), ಯಶಸ್ವಿ ಜೈಸ್ವಾಲ್‌, ಶುಭಮನ್‌ ಗಿಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಸರ್ಫರಾಜ್ ಖಾನ್/ ಕೆ ಎಲ್ ರಾಹುಲ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲ್ಲೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್/ಆಕಾಶ್ ದೀಪ್

ನ್ಯೂಜಿಲೆಂಡ್: ಡೆವೊನ್ ಕಾನ್‌ವೇ, ಟಾಮ್ ಲೇಥಮ್ (ನಾಯಕ), ವಿಲ್ ಯಂಗ್, ರಚಿನ್‌ ರವೀಂದ್ರ, ಡ್ಯಾರೆಲ್ ಮಿಚೆಲ್, ಟಾಮ್ ಬಂಡೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟರ್, ಟಿಮ್ ಸೌಥಿ/ರೂರ್ಕೆ, ಮ್ಯಾಟ್ ಹೆನ್ರಿ, ಅಜಾಜ್ ಪಟೇಲ್.

ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ

ನೇರಪ್ರಸಾರ: ಸ್ಪೋರ್ಟ್ಸ್ 18, ಜಿಯೋ ಸಿನಿಮಾ