ಪುಣೆ ಟೆಸ್ಟ್‌ಗೆ ಸ್ಪಿನ್ ಸ್ನೇಹಿ ಪಿಚ್: ಮತ್ತೆ 3 ಸ್ಪಿನ್ನರ್ ಜೊತೆ ಕಣಕ್ಕಿಳಿಯುತ್ತಾ ಭಾರತ?
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಪುಣೆಯ ಎಂಸಿಎ ಮೈದಾನ ಆತಿಥ್ಯ ವಹಿಸಿದ್ದು, ಇದು ಸ್ಪಿನ್ ಸ್ನೇಹಿ ಪಿಚ್ ಆಗುವ ಸಾಧ್ಯತೆಯಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಪುಣೆ: ಬೆಂಗಳೂರಿನ ಬೌನ್ಸಿ ಪಿಚ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲಿನ ಆಘಾತಕ್ಕೆ ಒಳಗಾಗಿದ್ದ ಭಾರತ ತಂಡ 2ನೇ ಪಂದ್ಯದಲ್ಲಿ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಆಡಲಿದೆ ಎಂದು ವರದಿಯಾಗಿದೆ. ಉಭಯ ತಂಡಗಳ ನಡುವೆ ಇಂದಿನಿಂದ ಪುಣೆಯಲ್ಲಿ ನಿರ್ಣಾಯಕ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದ್ದು, ಪಿಚ್ ನಿಧಾನಗತಿಯಲ್ಲಿರಲಿದೆ ಎಂದು ಹೇಳಲಾಗುತ್ತಿದೆ.
ಬೆಂಗಳೂರು ಟೆಸ್ಟ್‌ನ ಸೋಲಿನಿಂದ ಕುಗ್ಗಿ ಹೋಗಿರುವ ಭಾರತ ಉಳಿದೆರಡು ಪಂದ್ಯಗಳಲ್ಲಿ ಗೆದ್ದು ಸರಣಿಯನ್ನು 2-1 ಅಂತರದಲ್ಲಿ ಕೈವಶಪಡಿಸಿಕೊಳ್ಳುವ ಒತ್ತಡದಲ್ಲಿದೆ. ಸದ್ಯದ ವರದಿ ಪ್ರಕಾರ, ಇತ್ತಂಡಗಳ ನಡುವಿನ 2ನೇ ಟೆಸ್ಟ್‌ಗೆ ಕಪ್ಪು ಮಣ್ಣಿನಿಂದ ತಯಾರಿಸಲಾದ ಪಿಚ್ ಬಳಸಲಾಗುತ್ತದೆ. ಇದು ಬೆಂಗಳೂರು ಪಿಚ್‌ಗೆ ಹೋಲಿಸಿದರೆ ನಿಧಾನಗತಿಯಲ್ಲಿರಲಿದ್ದು, ಸ್ಪಿನ್ನರ್‌ಗಳು ಹೆಚ್ಚಿನ ನೆರವು ಪಡೆಯುವ ಸಾಧ್ಯತೆಯಿದೆ.
ರೋಹಿತ್ ಶರ್ಮಾ ಭೇಟಿ ಮಾಡಿ ಕೊಹ್ಲಿಗೆ ಸ್ಪೆಷಲ್ ಮೆಸೇಜ್ ಕಳಿಸಿದ ಕ್ಯೂಟ್ ಗರ್ಲ್; ವಿಡಿಯೋ ವೈರಲ್
ಮೊದಲ ಟೆಸ್ಟ್‌ನಲ್ಲಿ ಭಾರತ ಬೌನ್ಸಿ ಪಿಚ್ ಆಗಿದ್ದರೂ ಕೇವಲ ಇಬ್ಬರು ವೇಗಿಗಳೊಂದಿಗೆ ಕಣಕ್ಕಿಳಿದಿತ್ತು. ಮೂವರು ವೇಗಿಗಳೊಂದಿಗೆ ಆಡಿದ್ದ ಕಿವೀಸ್ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಪಂದ್ಯದಲ್ಲಿ ಮೂವರು ಸ್ಪಿನ್ನರ್‌ಗಳನ್ನು ಆಡಿಸಿದ್ದ ಭಾರತ ಹೆಚ್ಚಿನ ಯಶಸ್ಸು ಗಳಿಸಿರಲಿಲ್ಲ. ಆದರೆ ಪುಣೆ ಟೆಸ್ಟ್ ಪಂದ್ಯದಲ್ಲಿ ಸ್ಪಿನ್ ಸ್ನೇಹಿ ಪಿಚ್ ಇರಲಿರುವ ಕಾರಣ ಭಾರತ ಮತ್ತೆ ಮೂವರು ಸ್ಪಿನ್ನರ್‌ಗಳನ್ನು ಆಡಿಸುವುದು ಬಹುತೇಕ ಖಚಿತ.
ಕುಲ್ದೀಪ್ vs ಅಕ್ಷರ್ ಪೈಪೋಟಿ: ಭಾರತ ತಂಡ ಮೂವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಲು ನಿರ್ಧರಿಸಿದರೆ ಆಗ ಆಯ್ಕೆ ಗೊಂದಲ ಎದುರಾಗಲಿದೆ. ಅಶ್ವಿನ್ ಹಾಗೂ ಜಡೇಜಾ ಜೊತೆ ಮೂರನೇ ಸ್ಪಿನ್ನರ್ ಸ್ಥಾನಕ್ಕೆ ಕುಲ್ದೀಪ್ ಯಾದವ್ ಹಾಗೂ ಅಕ್ಷರ್ ಪಟೇಲ್ ನಡುವೆ ಪೈಪೋಟಿ ಏರ್ಪಡಲಿದೆ. ಬ್ಯಾಟಿಂಗ್‌ನಲ್ಲಿ ನೆರವಾಗಬಲ್ಲರು ಎಂಬ ಕಾರಣಕ್ಕೆ ಅಕ್ಷರ್‌ಗೆ ಮಣೆ ಹಾಕುವ ಸಾಧ್ಯತೆಯೂ ಇದೆ. ಇದೇ ವೇಳೆ 2ನೇ ಟೆಸ್ಟ್‌ಗೆ ವಾಷಿಂಗ್ಟನ್ ಸುಂದರ್ ಆಯ್ಕೆಯಾಗಿದ್ದು ಕುತೂಹಲಕ್ಕೆ ಕಾರಣವಾಗಿದ್ದು, ಕುಲ್ದೀಪ್ ಹಾಗೂ ಅಕ್ಷರ್‌ರನ್ನು ಹಿಂದಿಕ್ಕಿ ಆಡುವ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಂಡರೂ ಅಚ್ಚರಿಯಿಲ್ಲ.
ಆ ಮೂರು ಗಂಟೆಗಳು ನಮ್ಮ ಸಾಮರ್ಥ್ಯವನ್ನು ನಿರ್ಧರಿಸಲ್ಲ: ರೋಹಿತ್ ಶರ್ಮಾ
ಒಣ ಪಿಚ್: ಟಾಸ್ ಮತ್ತೆ ನಿರ್ಣಾಯಕ
ಪುಣೆ ಟೆಸ್ಟ್‌ಗೆ ಹುಲ್ಲು ಕಡಿಮೆಯಿರುವ ಒಣ ಪಿಚ್ ಬಳಸಲಾಗುತ್ತದೆ. ಇದರಿಂದಾಗಿ ಪಂದ್ಯದ ಆರಂಭದಲ್ಲಿ ವೇಗಿಗಳು ನೆರವು ಪಡೆಯಲಿದ್ದು, ಬಳಿಕ ರಿವರ್ಸ್ ಸ್ವಿಂಗ್ ಕೂಡಾ ಇರಲಿದೆ. ಪಂದ್ಯ ಸಾಗಿದಂತೆ ಬ್ಯಾಟಿಂಗ್ ಕಷ್ಟವಾಗುವ ಸಾಧ್ಯತೆ ಇರುವುದರಿಂದ ಮೊದಲು ಬ್ಯಾಟ್ ಮಾಡುವ ತಂಡಕ್ಕೆ ಅನುಕೂಲವಿದೆ. ಹೀಗಾಗಿ ಟಾಸ್ ಮತ್ತೆ ನಿರ್ಣಾಯಕ ಪಾತ್ರ ವಹಿಸಲಿದ್ದು, ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ.