ಭಾರತ ಎದುರಿನ ಪುಣೆ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡವು ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ.
ಪುಣೆ: ಭಾರತ ಹಾಗೂ ನ್ಯೂಜಿಲೆಂಡ್ ಎದುರಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಟಾಮ್ ಲೇಥಮ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಮೊದಲ ಟೆಸ್ಟ್ ಸೋಲಿನಿಂದ ಎಚ್ಚೆತ್ತುಕೊಂಡ ಟೀಂ ಇಂಡಿಯಾ, ಎರಡನೇ ಟೆಸ್ಟ್‌ನಲ್ಲಿ 3 ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ.
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಇಲ್ಲಿನ ಎಂಸಿಎ ಸ್ಟೇಡಿಯಂ ಆತಿಥ್ಯ ವಹಿಸಿದೆ. ನ್ಯೂಜಿಲೆಂಡ್ ತಂಡದಲ್ಲಿ ಒಂದು ಮಹತ್ವದ ಬದಲಾವಣೆ ಮಾಡಲಾಗಿದ್ದು, ವೇಗಿ ಮ್ಯಾಟ್ ಹೆನ್ರಿ ಗಾಯಗೊಂಡಿದ್ದು, ಅವರ ಬದಲಿಗೆ ಎಡಗೈ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ತಂಡ ಕೂಡಿಕೊಂಡಿದ್ದಾರೆ.
ಪುಣೆ ಟೆಸ್ಟ್‌ಗೆ ಸ್ಪಿನ್ ಸ್ನೇಹಿ ಪಿಚ್: ಮತ್ತೆ 3 ಸ್ಪಿನ್ನರ್ ಜೊತೆ ಕಣಕ್ಕಿಳಿಯುತ್ತಾ ಭಾರತ?
ಇನ್ನು ನಿರೀಕ್ಷೆಯಂತೆಯೇ ಭಾರತ ತಂಡಕ್ಕೆ ಅಗ್ರಕ್ರಮಾಂಕದ ಬ್ಯಾಟರ್ ಶುಭ್‌ಮನ್ ಗಿಲ್ ತಂಡ ಕೂಡಿಕೊಂಡಿದ್ದಾರೆ. ಭಾರತ ತಂಡದಲ್ಲಿ ಮೂರು ಬದಲಾವಣೆ ಮಾಡಲಾಗಿದ್ದು, ಕೆ ಎಲ್ ರಾಹುಲ್, ಮೊಹಮ್ಮದ್ ಸಿರಾಜ್ ಹಾಗೂ ಕುಲ್ದೀಪ್ ಯಾದವ್ ಅವರನ್ನು ಕೈಬಿಡಲಾಗಿದ್ದು, ಶುಭ್‌ಮನ್ ಗಿಲ್, ಆಕಾಶ್ ದೀಪ್ ಹಾಗೂ ವಾಷಿಂಗ್ಟನ್ ಸುಂದರ್ ತಂಡ ಕೂಡಿಕೊಂಡಿದ್ದಾರೆ.
ತವರಲ್ಲಿ ಭಾರತ 18 ಸರಣಿಯಲ್ಲಿ ಅಜೇಯ
ಭಾರತ 2012ರಿಂದ ತವರಿನಲ್ಲಿ ಒಂದೂ ಟೆಸ್ಟ್ ಸರಣಿ ಸೋತಿಲ್ಲ. ಕಳೆದ 18 ಸರಣಿಗಳಲ್ಲೂ ಭಾರತ ಗೆಲುವು ಸಾಧಿಸಿದೆ. ನ್ಯೂಜಿಲೆಂಡ್ ವಿರುದ್ಧ ಕೊನೆ 2 ಟೆಸ್ಟ್‌ನಲ್ಲಿ ಗೆಲ್ಲುವ ಮೂಲಕ ತವರಿನ ಸರಣಿ ಗೆಲುವಿನ ಓಟವನ್ನು 19ಕ್ಕೆ ಹೆಚ್ಚಿಸಲು ಭಾರತ ಕಾಯುತ್ತಿದೆ. ಪುಣೆ ಟೆಸ್ಟ್‌ನಲ್ಲಿ ಗೆದ್ದರೆ ಭಾರತ ಸರಣಿಯನ್ನು ಸಮಬಲಗೊಳಿಸಲಿದೆ. ಸೋತರೆ 18 ಸರಣಿ ಗೆಲುವಿನ ಓಟಕ್ಕೆ ಬ್ರೇಕ್ ಬೀಳಲಿದೆ.
ಪುಣೆ ಟೆಸ್ಟ್‌ನಲ್ಲಿ ಕಿವೀಸ್ ಎದುರು ಪುಟಿದೇಳುತ್ತಾ ಟೀಂ ಇಂಡಿಯಾ?
ಉಭಯ ತಂಡಗಳ ಆಟಗಾರರ ಪಟ್ಟಿ
ಭಾರತ: ರೋಹಿತ್ ಶರ್ಮಾ(ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಸರ್ಫರಾಜ್ ಖಾನ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ರವಿಚಂದ್ರನ್ ಅಶ್ವಿನ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ, ಆಕಾಶ್ ದೀಪ್
ನ್ಯೂಜಿಲೆಂಡ್: ಡೆವೊನ್ ಕಾನ್‌ವೇ, ಟಾಮ್ ಲೇಥಮ್ (ನಾಯಕ), ವಿಲ್ ಯಂಗ್, ರಚಿನ್ ರವೀಂದ್ರ, ಡ್ಯಾರೆಲ್ ಮಿಚೆಲ್, ಟಾಮ್ ಬಂಡೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟರ್, ಟಿಮ್ ಸೌಥಿ, ವಿಲಿಯಮ್ ರೂರ್ಕೆ, ಅಜಾಜ್ ಪಟೇಲ್.
ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ
ನೇರಪ್ರಸಾರ: ಸ್ಪೋರ್ಟ್ಸ್ 18, ಜಿಯೋ ಸಿನಿಮಾ
