ಮುಂಬೈ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಸ್ಫೋಟಕ 181 ರನ್ ಸಿಡಿಸಿದ ಪೃಥ್ವಿ ಶಾ, ಔಟಾದ ಬಳಿಕ ಮುಂಬೈ ಆಟಗಾರ ಮುಶೀರ್ ಖಾನ್ ಜೊತೆ ಗಲಾಟೆ ಮಾಡಿಕೊಂಡಿದ್ದಾರೆ. ಮುಶೀರ್ ನೀಡಿದ ಸೆಂಡ್‌ಆಫ್‌ನಿಂದ ಕೆರಳಿದ ಶಾ, ಬ್ಯಾಟ್‌ನಿಂದ ಹೊಡೆಯಲು ಮುಂದಾದ ಘಟನೆಯ ವಿಡಿಯೋ ವೈರಲ್ ಆಗಿದೆ.

ಮುಂಬೈ: ಮಹಾರಾಷ್ಟ್ರದ ಯುವ ಕ್ರಿಕೆಟಿಗ ಪೃಥ್ವಿ ಶಾ ಬುಧವಾರ ಎರಡು ಕಾರಣಗಳಿಂದ ಸುದ್ದಿಯಾಗಿದ್ದಾರೆ. ಭಾರತ ತಂಡಕ್ಕೆ ಮರಳಲು ಕಾಯುತ್ತಿರುವ ಪೃಥ್ವಿ ಶಾ, ಮುಂಬೈ ವಿರುದ್ಧ ಪುಣೆಯಲ್ಲಿ ನಡೆಯುತ್ತಿರುವ ಮೂರು ಅಭ್ಯಾಸ ಪಂದ್ಯದಲ್ಲಿ ಸ್ಫೋಟಕ ಆಡವಾಡಿದ್ದಾರೆ. ರಣಜಿ ಟ್ರೋಫಿ ಟೂರ್ನಿಗೂ ಮುನ್ನ ಆಯೋಜನೆಗೊಂಡಿದ್ದ ಈ ಅಭ್ಯಾಸ ಪಂದ್ಯದಲ್ಲಿ ಪೃಥ್ವಿ ಶಾ ಹಾಗೂ ಮಶೀರ್ ಖಾನ್ ನಡುವಿನ ಗಲಾಟೆಗೂ ಸಾಕ್ಷಿಯಾಗಿದೆ.

ಅಷ್ಟಕ್ಕೂ ಆ ಅಭ್ಯಾಸ ಪಂದ್ಯದಲ್ಲಿ ಆಗಿದ್ದೇನು?

ಅವರು 220 ಎಸೆತಗಳಲ್ಲಿ 181 ರನ್ ಸಿಡಿಸಿದ್ದಾರೆ. ಆದರೆ ಅಮೋಘ ಆಟದ ಬಳಿಕ ತಮ್ಮ ಬ್ಯಾಟ್‌ನಿಂದ ಮುಂಬೈ ಆಟಗಾರ ಮುಶೀರ್ ಖಾನ್ ಹೊಡೆಯಲು ಮುಂದಾಗಿದ್ದು, ಇದರ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಸ್ಪಿನ್ನರ್ ಮುಶೀರ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ಪೃಥ್ವಿ ಔಟಾದರು. ಈ ವೇಳೆ ಮುಶೀರ್ ನೀಡಿದ ಸೆಂಡ್ ಆಫ್ ಪೃಥ್ವಿ ಶಾರನ್ನು ಕೆರಳಿಸಿದ್ದು, ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಅಲ್ಲದೆ, ಪೃಥ್ವಿ ತಮ್ಮ ಬ್ಯಾಟನ್ನು ಮುಶೀರ್‌ ಕಡೆ ಬೀಸಿದ್ದಾರೆ. ಬಳಿಕ ಅಂಪೈರ್‌ಗಳು ಮಧ್ಯಪ್ರವೇಶಿಸಿ ಪೃಥ್ವಿ ಹಾಗೂ ಮುಂಬೈ ಆಟಗಾರರನ್ನು ಸಮಾಧಾನಪಡಿಸಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

Scroll to load tweet…

ಮುಂಬೈ ತೊರೆದು ಮಹಾರಾಷ್ಟ್ರ ಸೇರಿರುವ ಪೃಥ್ವಿ ಶಾ

ಮುಂಬೈ ಮೂಲದ ಕ್ರಿಕೆಟಿಗ ಪೃಥ್ವಿ ಶಾ, ಈ ವರ್ಷಾರಂಭದಲ್ಲಿ ಮುಂಬೈ ಕ್ರಿಕೆಟ್ ಸಂಸ್ಥೆಯಿಂದ ನಿರಪೇಕ್ಷಣಾ ಪತ್ರ ಪಡೆದು, ಈ ಬಾರಿಯ ರಣಜಿ ಟ್ರೋಫಿ ಟೂರ್ನಿ ಸೇರಿದಂತೆ ದೇಶಿ ಕ್ರಿಕೆಟ್‌ನಲ್ಲಿ ಮಹಾರಾಷ್ಟ್ರ ಪರ ಕಣಕ್ಕಿಳಿಯಲು ರೆಡಿಯಾಗಿದ್ದಾರೆ. ಇನ್ನು ಇತ್ತೀಚೆಗಷ್ಟೇ ನಡೆದ ಬುಚಿ ಬಾಬು ಆಹ್ವಾನಿತ ಕ್ರಿಕೆಟ್ ತಂಡಗಳ ಟೂರ್ನಿಯಲ್ಲಿ ಪೃಥ್ವಿ ಶಾ, 111, 1 ಹಾಗೂ 66 ರನ್ ಸಿಡಿಸಿ ಗಮನ ಸೆಳೆದಿದ್ದರು.

ಬ್ಯಾಟಿಂಗ್‌ ಸ್ನೇಹಿ ಪಿಚ್‌ನಲ್ಲಿ ಭಾರತದ ಎರಡನೇ ಟೆಸ್ಟ್?

ನವದೆಹಲಿ: ಭಾರತ-ವೆಸ್ಟ್ ಇಂಡೀಸ್ 2ನೇ ಟೆಸ್ಟ್ ಪಂದ್ಯಕ್ಕೆ ಬ್ಯಾಟಿಂಗ್ ಸ್ನೇಹಿ ಪಿಚ್ ಬಳಸಲಾಗುತ್ತದೆ ಎಂದು ತಿಳಿದುಬಂದಿದೆ. ಅಕ್ಟೋಬರ್ 10ರಿಂದ ನವದೆಹಲಿಯಲ್ಲಿ ಪಂದ್ಯ ಆರಂಭಗೊಳ್ಳಲಿದೆ. ಈ ಪಂದ್ಯಕ್ಕೆ ಬಳಸಲಾಗುವ ಕಪ್ಪು ಮಣ್ಣಿನ ಪಿಚ್‌ನಲ್ಲಿ ಅಲ್ಲಲ್ಲಿ ಹುಲ್ಲು ಬೆಳೆದಿದ್ದು, ಕೆಲವೆಡೆ ಮಣ್ಣು ಗೋಚರಿಸುತ್ತಿದೆ. ಇದು ಬ್ಯಾಟರ್‌ಗಳಿಗೆ ಹೆಚ್ಚಿನ ನೆರವು ನೀಡುವ ಸಾಧ್ಯತೆಯಿದ್ದು, ಪಂದ್ಯದಲ್ಲಿ ದೊಡ್ಡ ಮೊತ್ತ ದಾಖಲಾಗುವ ನಿರೀಕ್ಷೆಯಿದೆ. ಆದರೆ, ಕ್ರಮೇಣ ಪಿಚ್ ಒಣಗುವುದರಿಂದ ಸ್ಪಿನ್ನರ್‌ಗಳು ಪ್ರಮುಖ ಪಾತ್ರ ಸಾಧಿಸುವ ಸಾಧ್ಯತೆಯೂ ಇದೆ.

ಅಹಮದಾಬಾದ್‌ನಲ್ಲಿ ನಡೆದ ಉಭಯ ತಂಡಗಳ ನಡುವಿನ ಮೊದಲ ಪಂದ್ಯ ಎರಡೂವರೆ ದಿನಗಳಲ್ಲೇ ಕೊನೆಗೊಂಡಿತ್ತು. ಹುಲ್ಲು ಬೆಳೆದಿದ್ದ ಕೆಂಪು ಮಣ್ಣಿನ ಪಿಚ್‌ನಲ್ಲಿ ಹೆಚ್ಚಿನ ಬೌನ್ಸ್ ಕಂಡುಬಂದಿದ್ದು, ಬೂಮ್ರಾ ಹಾಗೂ ಸಿರಾಜ್ ಮೊದಲ ದಿನವೇ ಮಾರಕ ದಾಳಿ ನಡೆಸಿದ್ದರು. ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಹಾಗೂ 140 ರನ್‌ಗಳ ಅಂತರದಲ್ಲಿ ಬೃಹತ್ ಗೆಲುವು ಸಾಧಿಸಿತ್ತು.

ಐಸಿಸಿ ತಿಂಗಳ ಕ್ರಿಕೆಟಿಗರು ಪ್ರಶಸ್ತಿ ರೇಸಲ್ಲಿ ಅಭಿಷೇಕ್, ಕುಲ್ದೀಪ್ ಯಾದವ್, ಸ್ಮೃತಿ

ದುಬೈ: ಐಸಿಸಿ ಸೆಪ್ಟೆಂಬ‌ರ್ ತಿಂಗಳ ಶ್ರೇಷ್ಠ ಆಟಗಾರರ ಪ್ರಶಸ್ತಿಗೆ ಭಾರತದ ಮೂವರು ಕ್ರಿಕೆಟಿಗರು ನಾಮನಿರ್ದೇಶನಗೊಂಡಿದ್ದಾರೆ. ಪುರುಷರ ವಿಭಾಗದಲ್ಲಿ ಎಡಗೈ ಸ್ಫೋಟಕ ಬ್ಯಾಟ‌ರ್ ಅಭಿಷೇಕ್ ಶರ್ಮಾ ಹಾಗೂ ತಾರಾ ಸ್ಪಿನ್ನರ್ ಕುಲ್ದೀಪ್ ಯಾದವ್ ಜೊತೆ ಜಿಂಬಾಬೈಯ ಬ್ರಿಯಾನ್ ಬೆನೆಟ್ ನಾಮನಿರ್ದೇಶಿತರಾಗಿದ್ದಾರೆ. ಅಭಿಷೇಕ್ ಶರ್ಮಾ ಇತ್ತೀಚೆಗೆ ಕೊನೆಗೊಂಡ ಏಷ್ಯಾಕಪ್ 320 ಟೂರ್ನಿಯಲ್ಲಿ ಆಡಿದ 7 ಪಂದ್ಯಗಳಲ್ಲಿ 314 ರನ್ ಚಚ್ಚಿದ್ದರೆ, ಕುಲೀಪ್ ಯಾದವ್ 17 ವಿಕೆಟ್ ಪಡೆದಿದ್ದರು.

ಮಹಿಳಾ ವಿಭಾಗದಲ್ಲಿ ಸ್ಮೃತಿ ಮಂಧನಾ, ಪಾಕಿಸ್ತಾನದ ಸಿದ್ರಾ ಅಮೀನ್, ದಕ್ಷಿಣ ಆಫ್ರಿಕಾದ ಟಾಜ್ಜಿನ್ ಬ್ರಿಟ್ಸ್ ಪ್ರಶಸ್ತಿ ರೇಸ್‌ನಲ್ಲಿದ್ದಾರೆ. ಸ್ಮೃತಿ ಸೆಪ್ಟೆಂಬರ್‌ನಲ್ಲಿ ಆಡಿದ 4 ಪಂದ್ಯಗಳಲ್ಲಿ 308 ರನ್ ಸಿಡಿಸಿದ್ದರು.