Asianet Suvarna News Asianet Suvarna News

Ind vs Pak ಭಾರತವನ್ನು ಎದುರಿಸುವಾಗ ಯಾವಾಗಲೂ ಒತ್ತಡವಿರುತ್ತೆ: ಪಾಕ್ ನಾಯಕ ಬಾಬರ್ ಅಜಂ

ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ
ಆಗಸ್ಟ್ 27ರಿಂದ ಏಷ್ಯಾಕಪ್ ಟೂರ್ನಿ ಆರಂಭವಾಗಲಿದೆ
ಭಾರತ ಹಾಗೂ ಪಾಕಿಸ್ತಾನ ತಂಡಗಳು ಆಗಸ್ಟ್ 28ರಂದು ಸೆಣಸಾಟ

Pressure Is Always There says Babar Azam Ahead Of India vs Pakistan Match In Asia Cup 2022 kvn
Author
Bengaluru, First Published Aug 12, 2022, 5:43 PM IST

ಇಸ್ಲಾಮಾಬಾದ್‌(ಆ.12): ಕ್ರಿಕೆಟ್ ಜಗತ್ತಿನ ಸಾಂಪ್ರದಾಯಿಕ ಎದುರಾಳಿಗಳೆಂದೇ ಬಿಂಬಿಸಲ್ಪಟ್ಟಿರುವ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವಿನ ಮತ್ತೊಂದು ಮುಖಾಮುಖಿಗೆ ದಿನಗಣನೆ ಆರಂಭವಾಗಿದೆ. ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ 2013ರಿಂದೀಚೆಗೆ ಉಭಯ ತಂಡಗಳ ನಡುವೆ ಇದುವರೆಗೂ ಯಾವುದೇ ದ್ವಿಪಕ್ಷೀಯ ಸರಣಿಗಳು ನಡೆದಿಲ್ಲ. ಕೇವಲ ಐಸಿಸಿ ಟೂರ್ನಿಗಳಲ್ಲಿ ಹಾಗೂ ಏಷ್ಯಾಕಪ್ ಟೂರ್ನಿಗಳಲ್ಲಿ ಈ ಎರಡು ತಂಡಗಳು ಗೆಲುವಿಗಾಗಿ ಕಾದಾಡುತ್ತಿವೆ. ಉಭಯ ತಂಡಗಳ ನಡುವಿನ ಪೈಪೋಟಿ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿರುತ್ತಾರೆ. ವರ್ಷದಲ್ಲಿ ಕೆಲವೇ ಕೆಲವು ಬಾರಿ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು ಮುಖಾಮುಖಿಯಾಗುವುದರಿಂದಾಗಿ ಸಹಜವಾಗಿಯೇ ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿರುತ್ತದೆ.

ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವಿನ ಪಂದ್ಯದ ವೇಳೆ ಆಟಗಾರರಲ್ಲಿಯೂ ಸಾಕಷ್ಟು ಒತ್ತಡವಿರುತ್ತದೆ ಎನ್ನುವುದನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ಕೂಡಾ ಒಪ್ಪಿಕೊಂಡಿದ್ದಾರೆ. ಪಾಕಿಸ್ತಾನ ಮಾಧ್ಯಮದವರ ಜತೆ ಪ್ರಶ್ನೋತ್ತರ ವೇಳೆಯಲ್ಲಿ ಪತ್ರಕರ್ತರೊಬ್ಬರು, ಮುಂಬರುವ ಏಷ್ಯಾಕಪ್ ಟೂರ್ನಿಯಲ್ಲಿ ಮೂರು ಬಾರಿ ಭಾರತ ಎದುರು ಪಂದ್ಯವನ್ನಾಡಬೇಕಿದೆ. ಭಾರತವನ್ನು ಎದುರಿಸುವಾಗ ನಿಮ್ಮ ಮೇಲೆ ಯಾವುದಾದರೂ ಒತ್ತಡವಿರಲಿದೆಯೇ ಎಂದು ಪ್ರಶ್ನಿಸಿದ್ದಾರೆ.

ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಾಬರ್ ಅಜಂ, ನೋಡಿ, ನಾವು ಈ ಪಂದ್ಯವನ್ನು ಸಾಮಾನ್ಯ ಪಂದ್ಯದಂತೆಯೇ ಆಡಲು ಪ್ರಯತ್ನಿಸುತ್ತೇವೆ. ಆದರೆ ಸಹಜವಾಗಿಯೇ ನಮ್ಮ ಮೇಲಿರುವ ಒತ್ತಡ ವಿಭಿನ್ನವಾಗಿರುತ್ತದೆ. ಆದರೆ ನಾವು ಈ ಹಿಂದೆ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮಾಡಿದಂತೆಯೇ, ಒಂದು ಪಂದ್ಯದತ್ತ ಗಮನ ಹರಿಸುತ್ತೇವೆ. ನಮ್ಮ ಶಕ್ತಿ ಸಾಮರ್ಥ್ಯದ ಮೇಲೆ ನಮಗೆ ವಿಶ್ವಾಸವಿದೆ. ಈ ಬಾರಿ ಕೂಡಾ ನಾವು ಅತ್ಯುತ್ತಮ ಪ್ರದರ್ಶನ ತೋರಲು ಎದುರು ನೋಡುತ್ತಿದ್ದೇವೆ. ಪ್ರಯತ್ನ ಮಾಡುವುದು ನಮ್ಮ ಕೈಯಲ್ಲಿದೆ, ಆದರೆ ಫಲಿತಾಂಶ ನಮ್ಮ ಕೈಯಲ್ಲಿಲ್ಲ ಎಂದು ಬಾಬರ್ ಅಜಂ ಹೇಳಿದ್ದಾರೆ.

ಹರ್ಷಲ್ ಪಟೇಲ್‌ ಜೊತೆ ಜಸ್ಪ್ರೀತ್ ಬುಮ್ರಾ ಸಹ ಟಿ20 ವರ್ಲ್ಡ್​ಕಪ್ ಆಡಲ್ವಾ..?

2022ರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಯುಎಇ ಆತಿಥ್ಯವನ್ನು ವಹಿಸಿದ್ದು, ಆಗಸ್ಟ್ 27ರಿಂದ ಏಷ್ಯಾಕಪ್ ಟೂರ್ನಿ ಆರಂಭವಾಗಲಿದೆ. ಇನ್ನು ಭಾರತ ಹಾಗೂ ಪಾಕಿಸ್ತಾನ ತಂಡಗಳು ಆಗಸ್ಟ್ 28ರಂದು ಸೆಣಸಾಟ ನಡೆಸಲಿವೆ. ಏಷ್ಯಾಕಪ್ ಟೂರ್ನಿಯಲ್ಲಿ ಏಷ್ಯಾದ ಒಟ್ಟು 6 ತಂಡಗಳು ಪಾಲ್ಗೊಳ್ಳಲಿದ್ದು,  ಭಾರತ ಹಾಗೂ ಪಾಕಿಸ್ತಾನ ತಂಡಗಳು ಗುಂಪು ಹಂತದಲ್ಲಿ ಒಮ್ಮೆ ಹಾಗೂ ಸೂಪರ್ 4 ಹಂತವು ರೌಂಡ್ ರಾಬಿನ್ ಮಾದರಿಯಲ್ಲಿರುವುದರಿಂದ ಒಮ್ಮೆ ಮತ್ತು ಒಂದು ವೇಳೆ ಉಭಯ ತಂಡಗಳು ಫೈನಲ್ ಪ್ರವೇಶಿಸಿದ ಮತ್ತೊಮ್ಮೆ ಹೀಗೆ ಮೂರು ಬಾರಿ ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಸೆಣಸಾಟ ನಡೆಸುವ ಸಾಧ್ಯತೆಯಿದೆ.

ಏಷ್ಯಾಕಪ್ ಟೂರ್ನಿಗೆ ಭಾರತ ತಂಡ ಹೀಗಿದೆ ನೋಡಿ

ರೋಹಿತ್ ಶರ್ಮಾ (ಕ್ಯಾಪ್ಟನ್), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್‌ ಪಂತ್‌ (ವಿ.ಕೀ), ದಿನೇಶ್ ಕಾರ್ತಿಕ್ (ವಿ.ಕೀ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಯಜುವೇಂದ್ರ ಚಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಆರ್ಶ್‌ದೀಪ್‌ ಸಿಂಗ್‌,  ಅವೇಶ್ ಖಾನ್.

ಏಷ್ಯಾಕಪ್ ಟೂರ್ನಿಗೆ ಪಾಕಿಸ್ತಾನ ತಂಡ ಹೀಗಿದೆ ನೋಡಿ

ಬಾಬರ್ ಅಜಂ(ನಾಯಕ), ಶಾದಾಬ್ ಖಾನ್, ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹ್ಯಾರಿಸ್ ರೌಫ್, ಇಫ್ತಿಕರ್ ಅಹಮದ್, ಕುಶ್ದೀಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸೀಂ ಜೂನಿಯರ್, ನಸೀಮ್ ಶಾ, ಶಾಹೀನ್ ಶಾ ಅಫ್ರಿದಿ, ಶೆಹನವಾಜ್‌ ದಿಹಾನಿ, ಉಸ್ಮಾನ್ ಖಾದಿರ್.

Follow Us:
Download App:
  • android
  • ios