ಫೇಕ್ ಮಿ.ಬೀನ್ ಕುರಿತಾಗಿ ಜಿಂಬಾಬ್ವೆ ಅಧ್ಯಕ್ಷನ ಟ್ವೀಟ್, ತಪ್ಪೊಪ್ಪಿಕೊಂಡು ಪಾಕ್ ಪ್ರಧಾನಿ ಟ್ವೀಟ್!
2022 ರ ಟಿ20 ವಿಶ್ವಕಪ್‌ನಲ್ಲಿ ಜಿಂಬಾಬ್ವೆ ಅಚ್ಚರಿಯ ಫಲಿತಾಂಶವನ್ನು ನೀಡಿತು. ಗುರುವಾರದ ಪಂದ್ಯದಲ್ಲಿ ಬಲಿಷ್ಠ ಪಾಕಿಸ್ತಾನ ತಂಡವನ್ನು 1 ರನ್‌ನಿಂದ ಮಣಿಸಿತು. ಆ ಬಳಿಕ ಜಿಂಬಾಬ್ವೆಯ ಅಧ್ಯಕ್ಷ ಎಮ್ಮರ್ಸನ್ ಎಂನಗಾಗ್ವಾ ಪಾಕಿಸ್ತಾನ ಫೇಕ್ ಮಿ.ಬೀನ್‌ಅನ್ನು ಕಳಿಸಿದ್ದ ವಿಚಾರವನ್ನಿಟ್ಟುಕೊಂಡು ಟಾಂಗ್ ನೀಡಿದ್ದರು. ಇದಕ್ಕೆ ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಪರ್ತ್ (ಅ.28): ಟಿ20 ವಿಶ್ವಕಪ್ 2022ರ ಋತುವಿನಲ್ಲಿ ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನ ಮುಂದುವರಿದಿದೆ. ತಂಡ ಇನ್ನೂ ಗೆಲುವಿನ ಖಾತೆ ತೆರೆಯಬೇಕಿದೆ. ಮೊದಲ ಪಂದ್ಯದಲ್ಲಿ ಭಾರತ ತಂಡಕ್ಕೆ ಸೋಲು ಕಂಡಿದ್ದ ಪಾಕಿಸ್ತಾನ ಎರಡನೇ ಪಂದ್ಯದಲ್ಲಿ ಜಿಂಬಾಬ್ವೆಯಂತಹ ದುರ್ಬಲ ತಂಡದಿಂದಲೂ ಸೋಲನ್ನು ಎದುರಿಸಬೇಕಾಯಿತು. ಆದರೆ ಈ ಸೋಲಿನೊಂದಿಗೆ 'ಮಿಸ್ಟರ್ ಬೀನ್' ವಿಚಾರ ಮತ್ತೆ ಮುನ್ನಲೆಗೆ ಬಂದಿದೆ.ಪಾಕಿಸ್ತಾನವನ್ನು ಸೋಲಿಸಿದ ನಂತರ, ಜಿಂಬಾಬ್ವೆಯ ಅಧ್ಯಕ್ಷ ಎಮ್ಮರ್ಸನ್ ಎಂನಗಾಗ್ವಾ ಮೊದಲು ಪಾಕಿಸ್ತಾನಕ್ಕೆ ಮಿ.ಬೀನ್ ಕೇಸ್ ಅನ್ನು ನೆನಪು ಮಾಡಿದರು. ಹಾಗೇನಾದರೂ ಮುಂದೆ ಮಿ.ಬೀನ್ ಅನ್ನು ಕಳಿಸುವ ವಿಚಾರ ಬಂದಲ್ಲಿ ನಿಜವಾದ ಮಿ.ಬೀನ್‌ಅನ್ನೇ ಕಳುಹಿಸಿ ಎಂದು ಪಾಕಿಸ್ತಾನದ ಕಾಲೆಳೆದಿದ್ದರು. ಜಿಂಬಾಬ್ವೆ ಅಧ್ಯಕ್ಷ ಮಿ.ಬೀನ್ ಕೇಸ್‌ಅನ್ನು ಪಾಕಿಸ್ತಾನಕ್ಕೆ ನೆನಪು ಮಾಡುವುದರೊಂದಿಗೆ ಜಿಂಬಾಬ್ವೆ ತಂಡದ ಅಭೂತಪೂರ್ವ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇನ್ನು ಎಮ್ಮರ್ಸನ್ ಎಂನಗಾಗ್ವಾ ಮಾಡಿದ ಟ್ವೀಟ್‌ಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಜಿಂಬಾಬ್ವೆ ಅಧ್ಯಕ್ಷ ಎಮ್ಮರ್ಸನ್ ಎಂನಗಾಗ್ವಾ ತಮ್ಮ ಟ್ವೀಟ್ ನಲ್ಲಿ, 'ಜಿಂಬಾಬ್ವೆಗೆ ಎಂತಹ ಅದ್ಭುತ ಗೆಲುವು. ಇದಕ್ಕಾಗಿ ಚೆವ್ರಾನ್‌ಗಳಿಗೆ ಅಭಿನಂದನೆಗಳು. ಮುಂದಿನ ಬಾರಿ, ನಿಜವಾದ ಮಿ.ಬೀನ್ ಅನ್ನು ಕಳುಹಿಸಿ' ಎಂದು ಅವರು ಬರೆದಿದ್ದರು. ಈ ಟ್ವೀಟ್‌ನಲ್ಲಿ ಪಾಕಿಸ್ತಾನ ಹಾಗೂ ಜಿಂಬಾಬ್ವೆ ಪಂದ್ಯದಲ್ಲಿ ಹೈಲೈಟೆಡ್ ಹ್ಯಾಶ್‌ಟ್ಯಾಗ್‌ಅನ್ನು ಬಳಕೆ ಮಾಡಿದ್ದರು. ಇದೇ ಟ್ವೀಟ್‌ಗೆ ಪಾಕಿಸ್ತಾನದ ಪ್ರಧಾನಿ ಷರೀಫ್ ಕೂಡ ಪ್ರತ್ಯುತ್ತರ ನೀಡಿದ್ದು, ನಮ್ಮಲ್ಲಿ ನಿಜವಾದ ಮಿ.ಬೀನ್ ಇಲ್ಲ ಎನ್ನುವುದನ್ನು ನಾವು ಒಪ್ಪುತ್ತೇವೆ. ಆದರೆ, ಕ್ರೀಡಾಸ್ಪೂರ್ತಿ ಅನ್ನೋದು ಎಂದಿಗೂ ನಮ್ಮೊಂದಿಗೆ ಇದೆ. ಪಾಕಿಸ್ತಾನ ತಂಡ ಪುನರಾಗಮನ ಮಾಡುವುದಲ್ಲಿ ನಿಸ್ಸೀಮರು ಎಂದು ಅವರು ಬರೆದುಕೊಂಡಿದ್ದು, ಅದರೊಂದಿಗೆ ಜಿಂಬಾಬ್ವೆ ತಂಡದ ಗೆಲುವಿಗೆ ಜಿಂಬಾಬ್ವೆ ಅಧ್ಯಕ್ಷರಿಗೆ ಅಭಿನಂದನೆಯನ್ನೂ ಸಲ್ಲಿಸಿದ್ದಾರೆ.
ವಾಸ್ತವವಾಗಿ, ಜಿಂಬಾಬ್ವೆ ವಿರುದ್ಧದ ಪಂದ್ಯದ ಮೊದಲು, ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಅಭ್ಯಾಸದ ಕೆಲವು ಚಿತ್ರಗಳನ್ನು ಹಂಚಿಕೊಂಡಿತ್ತು. ಈ ಬಗ್ಗೆ ಜಿಂಬಾಬ್ವೆಯ ಅಭಿಮಾನಿಯೊಬ್ಬರು ನೀವು ಒಮ್ಮೆ ನಕಲಿ ಪಾಕಿಸ್ತಾನಿ ಮಿಸ್ಟರ್ ಬೀನ್ ಅನ್ನು ಕಳಿಸಿದ್ದೀರಿ. ಇದಕ್ಕಾಗಿ ನಾವು ನಿಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ. ಈ ವಿಷಯವನ್ನು ಮೈದಾನದಲ್ಲಿ ನೋಡಿಕೊಳ್ಳುತ್ತೇವೆ. ಮಳೆ ಬರದಿರಲಿ ಎಂದು ಪ್ರಾರ್ಥಿಸಿ, ಅದು ಕೂಡ ನಿಮ್ಮನ್ನು ಕಾಪಾಡುವುದಿಲ್ಲ ಎಂದು ಬರೆದಿದ್ದರು. ಈ ಟ್ವೀಟ್ ನಂತರ, ಫೇಕ್ ಮಿ. ಬೀನ್ ವಿವಾದವು ಬೆಳಕಿಗೆ ಬಂದಿತು, ಇದು ಇಲ್ಲಿಯವರೆಗೆ ಟ್ರೆಂಡಿಂಗ್ ಆಗಿದೆ. ಆರಂಭದಲ್ಲಿ ಈ ಜಿಂಬಾಬ್ವೆ ಅಭಿಮಾನಿಯನ್ನು ಟ್ರೋಲ್ ಕೂಡ ಮಾಡಲಾಗಿತ್ತು. ಆದರೆ ಆತ ಭವಿಷ್ಯ ಪಂದ್ಯದ ಬಳಿಕ ನಿಜವಾಗಿ ಸಾಬೀತಾಯಿತು. ಪಾಕಿಸ್ತಾನವು 1 ರನ್‌ಗಳ ಸೋಲನ್ನು ಎದುರಿಸಬೇಕಾಯಿತು.
ನಕಲಿ ಮಿಸ್ಟರ್ ಬೀನ್ ಕಳಿಸಿದ್ರಲ್ಲ, ತಗೊಳ್ಳಿ ನಮ್ಮ ಗಿಫ್ಟು.. ಜಿಂಬಾಬ್ವೆ ಅಭಿಮಾನಿಗಳಿಂದಲೂ ಪಾಕ್ ಟ್ರೋಲ್!
ಅಷ್ಟಕ್ಕೂ ಜಿಂಬಾಬ್ವೆ ಮತ್ತು ಪಾಕಿಸ್ತಾನದ ನಡುವಿನ ಈ 'ಮಿಸ್ಟರ್ ಬೀನ್' ವಿವಾದ ಏನು?: ಈ ವಿವಾದವನ್ನು ಆರಂಭ ಮಾಡಿದ್ದೇ ಪಾಕಿಸ್ತಾನ ಎನ್ನುವ ವಿಚಾರ ನಿಮ್ಮ ಗಮನದಲ್ಲಿರಲಿ. 2016ರಲ್ಲಿ ಪಾಕಿಸ್ತಾನದ ಮಿ.ಬೀನ್ ಎಂದೇ ಖ್ಯಾತರಾದ ಆಸಿಫ್ ಮೊಹಮದ್‌ರನ್ನು ಜಿಂಬಾಬ್ವೆಗೆ ಕಳಿಸಿತ್ತು. ಅಂದಿನಿಂದ ಈ ವಿವಾದ ಪ್ರಾರಂಭವಾಗಿದ್ದವು. ಆದರೆ ಜಿಂಬಾಬ್ವೆಯನ್ನರು ಆತನೇ ನಿಜವಾದ ಮಿ.ಬೀನ್ ಎಂದು ನಂಬಿಕೊಂಡಿದ್ದರು. ಆತನಿಗಾಗಿ ರೋಡ್ ಶೋ ಕೂಡ ನಡೆಸಲಾಗಿತ್ತು.ಜಿಂಬಾಬ್ವೆಯ ರಾಜಧಾನಿ ಹರಾರೆಯಲ್ಲಿರುವ ಅಂತಾರಾಷ್ಟ್ರೀಯ ಸಮ್ಮೇಳನ ಕೇಂದ್ರದಲ್ಲಿ ನಕಲಿ ಮಿ.ಬೀನ್ ನೀಡಿದ್ದ ಕಾರ್ಯಕ್ರಮ ಸಂಪೂರ್ಣವಾಗಿ ಫ್ಲಾಪ್ ಆಗಿತ್ತು.
T20 World Cup: ಒಂದೇ ರನ್‌ನಿಂದ ಜಿಂಬಾಬ್ವೆ ವಿರುದ್ಧ ಮಕಾಡೆ ಮಲಗಿದ ಪಾಕಿಸ್ತಾನ!
ನಕಲಿ ಮಿ.ಬೀನ್ ಜಿಂಬಾಬ್ವೆಗೆ ಹೋಗಿ ನಕಲಿ ನಟನೆ ಮಾಡಿದ್ದು ಮಾತ್ರವಲ್ಲದೆ ಜನರಿಂದ ಹಣವನ್ನೂ ತೆಗೆದುಕೊಂಡಿದ್ದಾರೆ. ಅಂದಿನಿಂದ ಜಿಂಬಾಬ್ವೆ ಜನರು ಪಾಕಿಸ್ತಾನದ ಮೇಲೆ ಕಿಡಿಕಾರುತ್ತಿದ್ದಾರೆ. ಅಂದಿನಿಂದ, ಪಾಕಿಸ್ತಾನ ಮತ್ತು ಜಿಂಬಾಬ್ವೆ ನಡುವೆ ಪಂದ್ಯ ನಡೆದಾಗಲೆಲ್ಲಾ ಈ ನಕಲಿ ಮಿ.ಬೀನ್ ವಿವಾದ ಮುನ್ನೆಲೆಗೆ ಬರುತ್ತದೆ. ಈ ಬಗ್ಗೆ ಎರಡೂ ತಂಡಗಳ ಅಭಿಮಾನಿಗಳು ಪರಸ್ಪರ ಟ್ರೋಲ್ ಮಾಡುತ್ತಲೇ ಇದ್ದಾರೆ.