ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ಪಾಲಾದ ಪೂಜಾ ವಸ್ತ್ರಾಕರ್1.90 ರುಪಾಯಿ ನೀಡಿ ಪೂಜಾರನ್ನು ಸೆಳೆದುಕೊಂಡ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಬಂದ ಹಣವನ್ನು FD ಮಾಡಲು ಸಲಹೆ ನೀಡಿದ ಪೂಜಾ ವಸ್ತ್ರಾಕರ್ ತಂದೆ

ನವದೆಹಲಿ(ಫೆ.16): ನಾವೆಷ್ಟೇ ಬೆಳೆದರು, ಪೋಷಕರ ಕಣ್ಣಿಗೆ ನಾವು ಚಿಕ್ಕ ಮಕ್ಕಳಂತೆಯೇ ಕಾಣುತ್ತೇವೆ. ಇದು ಭಾರತೀಯ ಕ್ರಿಕೆಟ್‌ನ ಪೋಷಕರ ವಿಚಾರದಲ್ಲೂ ಹೊರತಾಗಿಲ್ಲ ಎನ್ನುವಂತಿದೆ ಈ ಉದಾಹರಣೆ. ಮಧ್ಯಪ್ರದೇಶ ಮೂಲದ ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಲ್ರೌಂಡರ್ ಪೂಜಾ ವಸ್ತ್ರಾಕರ್, ಅವರ ಕುರಿತಾದ ಟ್ವೀಟ್‌ವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. 

ಸದ್ಯ ಪೂಜಾ ವಸ್ತ್ರಾಕರ್‌, ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಪೂಜಾ ವಸ್ತ್ರಾಕರ್‌, ದಕ್ಷಿಣ ಆಫ್ರಿಕಾಗೆ ತೆರಳುವ ಮುನ್ನ ತಮ್ಮ ತಂದೆಗೆ 15 ಲಕ್ಷ ರುಪಾಯಿ ಬೆಲೆ ಬಾಳುವ ಕಾರೊಂದನ್ನು ಗಿಫ್ಟ್‌ ಮಾಡಿದ್ದರು. ತಮ್ಮ ಮಗಳು ಕೊಟ್ಟ ಕಾರಿನ ಬಗ್ಗೆ ಖುಷಿ ಪಡುವ ಬದಲು, ತಮ್ಮ ಮಗಳು ಅನಾವಶ್ಯಕವಾಗಿ ಹಣವನ್ನು ಖರ್ಚು ಮಾಡುತ್ತಿದ್ದಾಳೆ ಎಂದು ಬೇಸರ ಮಾಡಿಕೊಂಡಿದ್ದಾರೆ. ಇನ್ನು ಇತ್ತೀಚೆಗಷ್ಟೇ ನಡೆದ ಚೊಚ್ಚಲ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿಯು 1.90 ಕೋಟಿ ರುಪಾಯಿ ನೀಡಿ ಪೂಜಾ ವಸ್ತ್ರಾಕರ್ ಅವರನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. 

ಇದೀಗ ಪೂಜಾ ವಸ್ತ್ರಾಕರ್ ಅವರ ತಂದೆ, "ಪೂಜಾ ವಸ್ತ್ರಾಕರ್ ಸಾಕಷ್ಟು ಹಣವನ್ನು ಅನಾವಶ್ಯಕವಾಗಿ ಖರ್ಚು ಮಾಡುತ್ತಾಳೆ. ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಬರುವ ಸಂಪೂರ್ಣ ಹಣವನ್ನು ಫಿಕ್ಸಡ್‌ ಡೆಫಾಸಿಟ್‌ ಮಾಡಲು ಆಕೆಗೆ ಹೇಳುತ್ತೇನೆ ಎಂದು ಹೇಳಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

Scroll to load tweet…

ಪೂಜಾ ವಸ್ತ್ರಾಕರ್ ತಂದೆ ಬಂಧನ್‌ ರಾಮ್‌, ವುಮೆನ್ಸ್‌ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಬಂದಂತಹ ಎಲ್ಲಾ ಹಣವನ್ನು ಅವಳು ಫಿಕ್ಸೆಡ್ ಡೆಫಾಸಿಟ್ ಮಾಡಬೇಕು. ಹೀಗೆ ಮಾಡುವುದರಿಂದ ಕಷ್ಟಪಟ್ಟು ಸಂಪಾದಿಸಿದ ಹಣವು ಆಕೆಯ ಆರ್ಥಿಕ ಭವಿಷ್ಯವನ್ನು ಬಲಪಡಿಸಲಿದೆ, ಹಾಗೂ ಮುಂಬರುವ ದಿನಗಳಲ್ಲಿ ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಶುಭ್‌ಮನ್‌ ಗಿಲ್‌-ಸಾರಾ ಲವ್ವು ಫಿಕ್ಸು..! ಯಾವ 'ಸಾರಾ' ಫೋಟೋ ಕ್ಲಿಕ್‌ ಮಾಡಿದ್ದೆಂದು ಕಾಲೆಳೆದ ಫ್ಯಾನ್ಸ್‌!

"ಆಕೆ ತುಂಬಾ ಹಣವನ್ನು ವ್ಯರ್ಥ ಮಾಡುತ್ತಾಳೆ. ಹರಾಜಿನಲ್ಲಿ ಬಂದಂತಹ ಎಲ್ಲಾ ಹಣವನ್ನು ಆಕೆ ಎಫ್‌ಡಿ ಮಾಡಲಿ ಎಂದು ಬಯಸುತ್ತೇನೆ" ಎಂದು ರಾಮ್‌, ದ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಬಂಧನ್‌ ರಾಮ್‌, ಬಿಎಸ್‌ಎನ್‌ಎಲ್ ಉಧ್ಯೋಗಿಯಾಗಿದ್ದು, ತಮ್ಮ ಮಗಳು ದೇಶವನ್ನು ಪ್ರತಿನಿಧಿಸಲು ಕಂಡ ಕನಸನ್ನು ನನಸಾಗಿಸಿಕೊಂಡಿದ್ದು ಹೇಗೆ ಎನ್ನುವುದನ್ನು ಪ್ರೀತಿಯಿಂದಲೇ ಮೆಲುಕು ಹಾಕಿದ್ದಾರೆ. " ಅವಳು ನಾಲ್ಕು ವರ್ಷದವಳಾಗಿದ್ದಾಗಲೇ ಕ್ರಿಕೆಟ್ ಆಡಲು ಪ್ರಾರಂಭಿಸಿದಳು. ನಾನು ಕೂಡಾ, ಅವಳು ಮುಂದೊಂದು ದಿನ ಭಾರತವನ್ನು ಪ್ರತಿನಿಧಿಸುತ್ತಾಳೆ ಎಂದುಕೊಂಡಿರಲಿಲ್ಲ. ಆದರೆ ಆಕೆ ದೇಶವನ್ನು ಪ್ರತಿನಿಧಿಸುವ ಕನಸು ಅಚಲವಾಗಿತ್ತು. ಕ್ರಿಕೆಟ್‌ಗಾಗಿ ಆಕೆ ನನ್ನ ಬಳಿ ಹಣ ಕೇಳಿದಾಗ, ಕ್ರಿಕೆಟ್‌ಗಾಗಿ ಯಾಕೆ ಸುಮ್ಮನೆ ನೀನು ಹಣವನ್ನು ಅನಾವಶ್ಯಕವಾಗಿ ಖರ್ಚು ಮಾಡುತ್ತೀಯಾ ಎಂದು ನಾನು ಆಕೆಯ ಕಾಲೆಳೆಯುತ್ತಿದ್ದೆ. ಆಗೆಲ್ಲಾ ಅವಳು, ನೋಡ್ತಾ ಇರು ಅಪ್ಪ, ಮುಂದೊಂದು ದಿನ ನಾನು ಭಾರತಕ್ಕಾಗಿ ಆಡುತ್ತೇನೆ ಎನ್ನುತ್ತಿದ್ದಳು ಎಂದು ಆ ದಿನಗಳನ್ನು ಪೂಜಾ ವಸ್ತ್ರಾಕರ್ ತಂದೆ ಸ್ಮರಿಸಿದ್ದಾರೆ.

ವುಮೆನ್ಸ್‌ ಪ್ರೀಮಿ​ಯರ್‌ ಲೀಗ್‌​ ಹರಾ​ಜು ಪ್ರಕ್ರಿ​ಯೆಗೆ ಮುಂಬೈ​ ಆತಿಥ್ಯ ವಹಿಸಿತ್ತು. 246 ಭಾರ​ತೀ​ಯರು ಸೇರಿ​ದಂತೆ ಒಟ್ಟು 409 ಆಟ​ಗಾ​ರ್ತಿಯರು ಈ ಹರಾಜಿನಲ್ಲಿ ಪಾಲ್ಗೊಂಡಿದ್ದರು. ಈ ಪೈಕಿ 87 ಆಟಗಾರ್ತಿಯರನ್ನು ಐದು ಫ್ರಾಂಚೈಸಿಗಳು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾದವು. 

ಮಾರ್ಚ್‌ 4ರಿಂದ ಮೊದಲ ಆವೃತ್ತಿ ಡಬ್ಲ್ಯುಪಿಎಲ್‌

ಚೊಚ್ಚಲ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯು ಮಾರ್ಚ್‌ 4ರಿಂದ 26ರ ವರೆಗೂ ನಡೆಯಲಿದೆ. ಫೈನಲ್‌ ಸೇರಿ ಒಟ್ಟು 23 ಪಂದ್ಯಗಳು ನಡೆಯಲಿದ್ದು, ಮುಂಬೈನ ಬ್ರೆಬೋರ್ನ್‌ ಕ್ರೀಡಾಂಗಣ ಹಾಗೂ ನವಿ ಮುಂಬೈನ ಡಿ.ವೈ.ಪಾಟೀಲ್‌ ಕ್ರೀಡಾಂಗಣ ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ.