Asianet Suvarna News Asianet Suvarna News

ಸೂರ್ಯಕುಮಾರ್ ಯಾದವ್ ಅವರಂತ ಆಟಗಾರರು ಶತಮಾನಕ್ಕೊಬ್ಬರು ಸಿಗುತ್ತಾರೆ: ಕಪಿಲ್‌ ದೇವ್

ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಗುಣಗಾನ ಮಾಡಿದ ಕಪಿಲ್ ದೇವ್
ಸೂರ್ಯ ಅವರಂತ ಆಟಗಾರ ಶತಮಾನಕ್ಕೊಬ್ಬರು ಸಿಗುತ್ತಾರೆ
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಮೂರನೇ ಶತಕ ಸಿಡಿಸಿದ ಸೂರ್ಯ

Players like Suryakumar Yadav come once in a century Says Kapil Dev kvn
Author
First Published Jan 9, 2023, 5:13 PM IST

ನವದೆಹಲಿ(ಜ.09): ಭಾರತ ಕ್ರಿಕೆಟ್ ಕಂಡಂತಹ ದಿಗ್ಗಜ ಆಲ್ರೌಂಡರ್‌ ಕಪಿಲ್‌ ದೇವ್, ಇದೀಗ ಟೀಂ ಇಂಡಿಯಾ ಪ್ರತಿಭಾನ್ವಿತ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ಪ್ರದರ್ಶನವನ್ನು ಗುಣಗಾನ ಮಾಡಿದ್ದು, ಇಂತಹ ಆಟಗಾರರು ಶತಮಾನಕ್ಕೊಬ್ಬರು ಸಿಗುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ಶ್ರೀಲಂಕಾ ವಿರುದ್ದದ ಮೂರನೇ ಹಾಗೂ ನಿರ್ಣಾಯಕ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್‌, ಕೇವಲ 51 ಎಸೆತಗಳಲ್ಲಿ ಅಜೇಯ 112 ರನ್ ಸಿಡಿಸುವ ಮೂಲಕ ಟೀಂ ಇಂಡಿಯಾ 200+ ರನ್ ದಾಖಲಿಸುವಲ್ಲಿ ಯಶಸ್ವಿಯಾಗಿದ್ದರು. ಅಂದಹಾಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಇದು ಸೂರ್ಯಕುಮಾರ್ ಯಾದವ್ ಬಾರಿಸಿದ ಮೂರನೇ ಶತಕವಾಗಿದೆ.

ಇನ್ನು ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ಪ್ರದರ್ಶನವನ್ನು ಹೊಗಳಲು ಪದಗಳೇ ಸಿಗುತ್ತಿಲ್ಲ ಎಂದು ಕಪಿಲ್ ದೇವ್ ಹೇಳಿದ್ದಾರೆ. " ಅವರ ಇನಿಂಗ್ಸ್‌ ವರ್ಣಿಸಲು ಪದಗಳೇ ಸಿಗುತ್ತಿಲ್ಲ. ನಾವು ಸಚಿನ್ ತೆಂಡುಲ್ಕರ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯವರ ಆಟವನ್ನು ನೋಡಿದಂತೆ ಭಾಸವಾಗುತ್ತದೆ. ಭಾರತದಲ್ಲಿ ಅಪಾರವಾದ ಪ್ರತಿಭಾನ್ವಿತ ಆಟಗಾರರಿದ್ದಾರೆ. ಸೂರ್ಯ ಆಡುತ್ತಿರುವ ರೀತಿ, ಅದರಲ್ಲೂ ಲ್ಯಾಪ್ ಶಾಟ್ ಮೂಲಕ ಚೆಂಡನ್ನು ಫೈನ್‌ಲೆಗ್‌ನತ್ತ ಬಾರಿಸುವುದನ್ನು ನೋಡುವುದೇ ಒಂದು ರೀತಿ ಸೊಗಸು. ಹೀಗೆ ಬಾರಿಸಿದರೆ ಬೌಲರ್ ಏನು ಮಾಡಬೇಕು ಹೇಳಿ?. ಬೌಲರ್‌ಗಳೆಲ್ಲ ಸೂರ್ಯಕುಮಾರ್‌ಗೆ ಬೌಲಿಂಗ್‌ ಮಾಡಲು ಭಯಪಡುತ್ತಿದ್ದಾರೆ. ಸೂರ್ಯ ಬೌಲರ್‌ಗಳ ಜತೆ ಆಟವಾಡುತ್ತಿದ್ದಾರೆ ಎಂದು ಭಾರತಕ್ಕೆ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ಕಪಿಲ್‌ ದೇವ್ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಮತ್ತದೇ ಸಿಕ್ಸರ್‌ ಬಾರಿಸ್ತಾರೆ ಎಂದು ನನಗನಿಸೊಲ್ಲ: ಪಾಕ್ ವೇಗಿ ಹ್ಯಾರಿಸ್ ರೌಫ್

"ಈ ರೀತಿ ಚೆಂಡನ್ನು ಬಾರಿಸುವುದು ನೋಡಲು ಸಿಗುವುದು ತೀರಾ ವಿರಳ. ನಾನು ಎಬಿ ಡಿವಿಲಿಯರ್ಸ್‌, ವಿವಿನ್ ರಿಚರ್ಡ್‌ಸನ್‌, ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ, ರಿಕಿ ಪಾಂಟಿಂಗ್ ಅವರಂತಹ ಆಟಗಾರರನ್ನು ನೋಡಿದ್ದೇವೆ. ಸೂರ್ಯಕುಮಾರ್ ಯಾದವ್ ಅವರಂತೆ ಕ್ಲೀನ್ ಶಾಟ್‌ ಹೊಡೆಯುವುದು ಕೆಲವೇ ಕೆಲವು ಮಂದಿ ಮಾತ್ರ. ಹ್ಯಾಟ್‌ ಆಫ್‌ ಅವರಿಗೆ ಎಂದು ಕಪಿಲ್ ದೇವ್ ಹೇಳಿದ್ದಾರೆ.

ಸೂರ್ಯಕುಮಾರ್ ಯಾದವ್, ಎದುರಾಳಿ ಬೌಲರ್‌ ಮನಸ್ಥಿತಿ ಅರಿತು ಬ್ಯಾಟ್ ಬೀಸುತ್ತಾರೆ. ಟೆನಿಸ್‌ನಲ್ಲಿ ಆದರೆ ನೀವು ಸರ್ವೀಸ್ ಔಟ್ ಅಥವಾ ಇನ್ ಎನ್ನುವುದನ್ನು ಗುರುತಿಸಬಹುದು. ಆದರೆ ಸೂರ್ಯ, ಚೆಂಡು ನೆಲಕ್ಕೆ ಬೀಳುವ ಮುನ್ನವೇ ಅದನ್ನು ಗುರುತಿಸಿ ಬೌಂಡರಿ ಬಾರಿಸುತ್ತಾರೆ. ಇದು ಅವರಿಗೆ ಸಿಕ್ಕಿದ ಗಾಡ್‌ ಗಿಫ್ಟ್‌. ಈ ರೀತಿಯ ಆಟಗಾರರು ಶತಮಾನಕ್ಕೊಬ್ಬರು ಸಿಗುತ್ತಾರೆ ಎಂದು ಕಪಿಲ್ ದೇವ್ ಹೇಳಿದ್ದಾರೆ.

Follow Us:
Download App:
  • android
  • ios