ವಿರಾಟ್ ಕೊಹ್ಲಿ ಮತ್ತದೇ ಸಿಕ್ಸರ್ ಬಾರಿಸ್ತಾರೆ ಎಂದು ನನಗನಿಸೊಲ್ಲ: ಪಾಕ್ ವೇಗಿ ಹ್ಯಾರಿಸ್ ರೌಫ್
* ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ಎದುರು ಸಿಕ್ಸರ್ ಚಚ್ಚಿದ್ದ ವಿರಾಟ್ ಕೊಹ್ಲಿ
* ಆ ರೀತಿಯ ಸಿಕ್ಸರ್ ಪದೇ ಪದೇ ಬಾರಿಸಲು ಸಾಧ್ಯವಿಲ್ಲ ಎಂದ ಹ್ಯಾರಿಸ್ ರೌಫ್
* ಆ ನನಗೆ ನೋವುಂಟು ಮಾಡಿತು ಎಂದ ಪಾಕ್ ವೇಗಿ
ಕರಾಚಿ(ಜ.09): ಟೀಂ ಇಂಡಿಯಾ 2022ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಲು ವಿಫಲವಾಗಿದೆ. ಅದ್ಭುತ ಪ್ರದರ್ಶನದ ಮೂಲಕ ಸೆಮಿಫೈನಲ್ ಪ್ರವೇಶಿಸಿದ್ದ ಟೀಂ ಇಂಡಿಯಾ, ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಎದುರು 10 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸುವ ಮೂಲಕ ತನ್ನ ಅಭಿಯಾನವನ್ನು ಮುಗಿಸಿತ್ತು. ಈ ಟೂರ್ನಿಯಲ್ಲಿ ಇಂಗ್ಲೆಂಡ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
ಇನ್ನು ಟೂರ್ನಿಯಲ್ಲಿ ಸಾಕಷ್ಟು ಗಮನ ಸೆಳೆದ ಪಂದ್ಯವೆಂದರೇ ಅದು, ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ. ಈ ಪಂದ್ಯವನ್ನು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, 4 ವಿಕೆಟ್‌ಗಳ ರೋಚಕ ಜಯ ಸಾಧಿಸಿತ್ತು. ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ ತಂಡವು, ಭಾರತಕ್ಕೆ 160 ರನ್‌ಗಳ ಗುರಿ ನೀಡಿತ್ತು. ಈ ಸವಾಲಿನ ಗುರಿ ಬೆನ್ನತ್ತಿದ ಟೀಂ ಇಂಡಿಯಾ 31 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ನಾಲ್ವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು. ಇದಾದ ಬಳಿಕ ಹಾರ್ದಿಕ್ ಪಾಂಡ್ಯ ಹಾಗೂ ವಿರಾಟ್ ಕೊಹ್ಲಿ ಆಕರ್ಷಕ ಜತೆಯಾಟವಾಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅದರಲ್ಲೂ ವಿರಾಟ್ ಕೊಹ್ಲಿ ಕೇವಲ 53 ಎಸೆತಗಳಲ್ಲಿ ಅಜೇಯ 82 ರನ್ ಬಾರಿಸುವ ಮೂಲಕ ಟೀಂ ಇಂಡಿಯಾಗೆ ರೋಚಕ ಗೆಲುವು ತಂದಿತ್ತಿದ್ದರು.
ರನ್ ಚೇಸ್ ಮಾಡುವ ವೇಳೆ ಟೀಂ ಇಂಡಿಯಾ, 19ನೇ ಓವರ್‌ನಲ್ಲಿ ಹ್ಯಾರಿಸ್ ರೌಫ್ ಬೌಲಿಂಗ್‌ನಲ್ಲಿ ವಿರಾಟ್ ಕೊಹ್ಲಿ ಸತತ ಎರಡು ಅದ್ಭುತ ಸಿಕ್ಸರ್ ಸಿಡಿಸುವ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸಿದ್ದರು. ಕೊಹ್ಲಿ ಮೊದಲ ಸಿಕ್ಸ್ ಅನ್ನು ಬೌಲರ್ ತಲೆಯ ಮೇಲೆಯೇ ಚೆಂಡನ್ನು ಸಿಕ್ಸರ್‌ಗಟ್ಟಿದ್ದು, ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿದೆ.
ಇದೀಗ ಪಾಕಿಸ್ತಾನದ ಖಾಸಗಿ ಚಾನೆಲ್‌ವೊಂದರಲ್ಲಿ ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ ಮಾರಕ ವೇಗಿ ಹ್ಯಾರಿಸ್ ರೌಫ್, " ಸಹಜವಾಗಿಯೇ ಸಿಕ್ಸರ್ ಬಾರಿಸಿದ್ದು, ನನಗೆ ನೋವುಂಟು ಮಾಡಿತು. ಇದರ ಬಗ್ಗೆ ಹೆಚ್ಚೇನು ಹೇಳಲು ಬಯಸುವುದಿಲ್ಲ, ಆದರೆ ವೈಯುಕ್ತಿಕವಾಗಿ ಆ ಸಿಕ್ಸರ್ ನನಗೆ ನೋವುಂಟು ಮಾಡಿತು. ಅಲ್ಲಿ ಏನೋ ಪ್ರಮಾದ ನಡೆಯಿತು. ವಿರಾಟ್ ಕೊಹ್ಲಿ ಎಂತಹ ದಿಗ್ಗಜ ಆಟಗಾರ ಎನ್ನುವುದನ್ನು ಕ್ರಿಕೆಟ್ ಆಡುವ ಹಾಗೂ ನೋಡುವ ಎಲ್ಲರಿಗೂ ಗೊತ್ತಿದೆ. ಆದರೆ ಆ ರೀತಿಯ ಶಾಟ್ ಅನ್ನು ಕೊಹ್ಲಿ ಮತ್ತೊಮ್ಮೆ ಹೊಡೆಯುತ್ತಾರೆ ಎಂದು ನನಗನಿಸುವುದಿಲ್ಲ. ಆ ರೀತಿಯ ಶಾಟ್ ತೀರಾ ವಿರಳ. ಈ ರೀತಿಯ ಶಾಟ್ ನೀವು ಪದೇ ಪದೇ ಹೊಡೆಯಲು ಸಾಧ್ಯವಿಲ್ಲ. ಅವರು ಅದ್ಭುತವಾಗಿ ಟೈಮಿಂಗ್ ಮಾಡಿ ಬ್ಯಾಟ್ ಬೀಸಿದ್ದರಿಂದಲೇ ಅದು ಸಿಕ್ಸರ್ ಗೆರೆ ದಾಟಿತು" ಎಂದು ಹ್ಯಾರಿಸ್ ರೌಫ್ ಹೇಳಿದ್ದಾರೆ.
ಸೂರ್ಯಕುಮಾರ್ ಯಾದವ್ ಚಿಕ್ಕವನಿದ್ದಾಗ ನನ್ನ ಬ್ಯಾಟಿಂಗ್ ನೋಡಿಲ್ಲ ಅನ್ಸತ್ತೆ: ರಾಹುಲ್ ದ್ರಾವಿಡ್
ಸದ್ಯ ವಿರಾಟ್ ಕೊಹ್ಲಿ, ಇತ್ತೀಚೆಗಷ್ಟೇ ತವರಿನಲ್ಲಿ ಮುಕ್ತಾಯವಾದ ಶ್ರೀಲಂಕಾ ಎದುರಿನ ಮೂರು ಪಂದ್ಯಗಳ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿದ್ದರು. ಆದರೆ ಇದೇ ಜನವರಿ 10ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಟೀಂ ಇಂಡಿಯಾವನ್ನು ಕೂಡಿಕೊಳ್ಳಲಿದ್ದಾರೆ. 2023ರ ಏಕದಿನ ವಿಶ್ವಕಪ್ ಟೂರ್ನಿಯು ಭಾರತದಲ್ಲೇ ನಡೆಯುವುದರಿಂದ, ಟೀಂ ಇಂಡಿಯಾ, ಲಂಕಾ ಎದುರಿನ ಏಕದಿನ ಸರಣಿಯಿಂದಲೇ ತಮ್ಮ ತಯಾರಿ ಆರಂಭಿಸುತ್ತಿದೆ.
ಟೀಂ ಇಂಡಿಯಾ 2011ರಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆದರೆ ಇದಾದ ಬಳಿಕ 2015 ಹಾಗೂ 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸೆಮೀಸ್‌ನಲ್ಲೇ ಮುಗ್ಗರಿಸಿತ್ತು. ಇದೀಗ ಭಾರತದಲ್ಲೇ ಮತ್ತೊಮ್ಮೆ ಏಕದಿನ ವಿಶ್ವಕಪ್ ಟೂರ್ನಿ ಜರುಗುವುದರಿಂದ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ವಿಶ್ವಕಪ್ ಜಯಿಸಲು ಸಕಲ ರಣತಂತ್ರ ಹೆಣೆಯುತ್ತಿದೆ.