ಮಾಜಿ ಆಯ್ಕೆಗಾರ ಕೃಷ್ಣಮಾಚಾರಿ ಶ್ರೀಕಾಂತ್, ಭಾರತ ಟಿ20 ತಂಡಕ್ಕೆ ರಜತ್ ಪಾಟೀದಾರ್ ಅವರನ್ನು ಆಯ್ಕೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ತಿಲಕ್ ವರ್ಮಾ ಅವರ ಸ್ಥಿರತೆಯ ಬಗ್ಗೆ ಪ್ರಶ್ನಿಸಿರುವ ಅವರು, ಪಾಟೀದಾರ್ ಅವರ ನಾಯಕತ್ವ ಮತ್ತು ಸ್ಪೋಟಕ ಬ್ಯಾಟಿಂಗ್ ಅನ್ನು ಉಲ್ಲೇಖಿಸಿ ಅವಕಾಶ ನೀಡಲು ಆಗ್ರಹಿಸಿದ್ದಾರೆ.
ಬೆಂಗಳೂರು: ಮುಂಬರುವ ಟಿ20 ಸರಣಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟೀದಾರ್ ಅವರನ್ನು ಬಿಸಿಸಿಐ ಆಯ್ಕೆ ಸಮಿತಿ ಭಾರತ ತಂಡಕ್ಕೆ ಆಯ್ಕೆ ಮಾಡಲಿ ಎಂದು ಮಾಜಿ ಆಯ್ಕೆ ಸಮಿತಿ ಮುಖ್ಯಸ್ಥ ಕೃಷ್ಣಮಾಚಾರಿ ಶ್ರೀಕಾಂತ್ ಒತ್ತಾಯಿಸಿದ್ದಾರೆ. ತಮ್ಮದೇ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಶ್ರೀಕಾಂತ್, ಭಾರತ ತಂಡದ ಉಪನಾಯಕ ತಿಲಕ್ ವರ್ಮಾ ಅವರ ಸ್ಥಾನದ ಬಗ್ಗೆ ಮತ್ತೊಮ್ಮೆ ಪ್ರಶ್ನೆ ಎತ್ತಿದ್ದಾರೆ.
ರಜತ್ ಪಾಟೀದಾರ್ ಅವರ ಜತೆ ತಿಲಕ್ ವರ್ಮಾ ಅವರ ಹೋಲಿಕೆ ಸಾಧ್ಯವೇ ಇಲ್ಲ:
ಜಿಂಬಾಬ್ವೆ ಎದುರಿನ ಮೂರನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಭಾರತ ತಂಡದ ಉಪನಾಯಕ ತಿಲಕ್ ವರ್ಮಾ 9 ಎಸೆತಗಳನ್ನು ಎದುರಿಸಿ 11 ರನ್ ಗಳಿಸಿದ್ದರು. ಇದಕ್ಕೂ ಮೊದಲು ಎರಡನೇ ಟಿ20 ಪಂದ್ಯದಲ್ಲಿ ತಿಲಕ್ ವರ್ಮಾ 29 ಎಸೆತಗಳಲ್ಲಿ 60 ರನ್ ಬಾರಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೀಕಾಂತ್, ಸ್ಥಿರ ಪ್ರದರ್ಶನದ ವಿಚಾರದಲ್ಲಿ ರಜತ್ ಪಾಟೀದಾರ್ ಜತೆಗೆ ತಿಲಕ್ ವರ್ಮಾ ಹೋಲಿಕೆ ಸಾಧ್ಯವೇ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
'ಮತ್ತೊಮ್ಮೆ ತಿಲಕ್ ವರ್ಮಾ 9 ಬಾಲ್ ತಿಂದರು. ಅವರು ತುಂಬಾ ದೀರ್ಘ ಸಮಯ ವೇಗವಾಗಿ ರನ್ ಗಳಿಸಲ್ಲ. ಅಷ್ಟಕ್ಕೂ ಅವರಲ್ಲಿ ಸ್ಥಿರತೆ ಎಲ್ಲಿದೆ? ನೀವೇ ಹೇಳಿ? ಇಂಗ್ಲೆಂಡ್‌ನಲ್ಲಿ ಅವರು ಹೇಗೆ ಆಡಿದರು?. ಅಲ್ಲೊಂದು ಇಲ್ಲೊಂದು ಇನ್ನಿಂಗ್ಸ್ ಆಡಿದ್ದಾರೆ ಅಷ್ಟೇ. ಅವರ ಜತೆ ರಜತ್ ಪಾಟೀದಾರ್ ಹೋಲಿಕೆ ಸರಿಯಲ್ಲ. ನಿಮಗೆ ಒಳ್ಳೆಯ ಟಿ20 ಇನ್ನಿಂಗ್ಸ್ ಆಡುವ ಆಟಗಾರ ಬೇಕಿದ್ದರೇ ರಜತ್ ಪಾಟೀದಾರ್‌ಗೆ ಒಂದು ಅವಕಾಶ ಕೊಟ್ಟು ನೋಡಿ. ಯಶ್ ಠಾಕೂರ್ ಸೇರಿ ಎಲ್ಲರಿಗೂ ಅವಕಾಶ ಸಿಗುತ್ತಿದೆ. ಹಾಗೆಯೇ ರಜತ್ ಪಾಟೀದಾರ್‌ಗೆ ಒಂದು ಅವಕಾಶ ಕೊಡಿ ಎಂದು ಕೃಷ್ಣಮಾಚಾರಿ ಶ್ರೀಕಾಂತ್ ಹೇಳಿದ್ದಾರೆ.
ತಿಲಕ್ ವರ್ಮಾ ಟ್ರ್ಯಾಕ್ ರೆಕಾರ್ಡ್
ತಿಲಕ್ ವರ್ಮಾ ಇದುವರೆಗೂ ಭಾರತ ಪರ 56 ಟಿ20 ಇನ್ನಿಂಗ್ಸ್‌ಗಳನ್ನಾಡಿ 44.45ರ ಬ್ಯಾಟಿಂಗ್ ಸರಾಸರಿಯಲ್ಲಿ 145.18ರ ಸ್ಟ್ರೈಕ್‌ರೇಟ್‌ನಲ್ಲಿ 1,645 ರನ್ ಸಿಡಿಸಿದ್ದಾರೆ. ಇದರಲ್ಲಿ ಎರಡು ಶತಕ ಹಾಗೂ 9 ಅರ್ಧಶತಕಗಳು ಸೇರಿವೆ. ಅಜೇಯ 120 ರನ್ ತಿಲಕ್ ವರ್ಮಾ ಬಾರಿಸಿದ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿಕೊಂಡಿದೆ.
ಇನ್ನು ಈ ವರ್ಷ ತಿಲಕ್ ವರ್ಮಾ ಅವರಿಂದ ಮಿಶ್ರ ಪ್ರದರ್ಶನ ಮೂಡಿ ಬಂದಿದೆ. ಈ ವರ್ಷ ಭಾರತ ಪರ 19 ಪಂದ್ಯಗಳನ್ನಾಡಿರುವ ತಿಲಕ್ ವರ್ಮಾ 34ರ ಸರಾಸರಿಯಲ್ಲಿ 462 ರನ್ ಸಿಡಿಸಿದ್ದಾರೆ. ಇದರಲ್ಲಿ ಮೂರು ಅರ್ಧಶತಕಗಳು ಸೇರಿವೆ.
ಇನ್ನೊಂದೆಡೆ ರಜತ್ ಪಾಟೀದಾರ್ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿದೆ. ಪಾಟೀದಾರ್ ನಾಯಕನಾಗಿ ಮಾತ್ರವಲ್ಲದೇ ಬ್ಯಾಟರ್ ಆಗಿಯೂ ಕಳೆದೆರಡು ಸೀಸನ್‌ನಲ್ಲೂ ಸ್ಪೋಟಕ ಬ್ಯಾಟಿಂಗ್ ಮಾಡಿ ಗಮನ ಸೆಳೆದಿದ್ದಾರೆ. ಹೀಗಿದ್ದೂ ರಜತ್ ಪಾಟೀದಾರ್‌ಗೆ ಭಾರತ ಟಿ20 ತಂಡದಲ್ಲಿ ಸ್ಥಾನ ಸಿಗುತ್ತಿಲ್ಲ.


