salary hike: ಪಾಕಿಸ್ತಾನ, ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೆ ಖುಷಿ ಸುದ್ದಿ ನೀಡಿದೆ. ಅವರ ಸಂಬಳದಲ್ಲಿ ಏರಿಕೆ ಮಾಡಿದೆ. ಅಷ್ಟಕ್ಕೂ ನಮ್ಮ ಭಾರತದ ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೆ ಎಷ್ಟು ಸಂಬಳ ಸಿಗುತ್ತೆ ಗೊತ್ತಾ?
ಪಾಕಿಸ್ತಾನ ಕ್ರಿಕೆಟ್ ಮಂಡಳಿ (Pakistan Cricket Board), ತನ್ನ ಮಹಿಳಾ ಕ್ರಿಕೆಟ್ ಆಟಗಾರ್ತಿಯರ (Womens Cricketer) ಸಂಬಳ ಹೆಚ್ಚಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ಪಿಸಿಬಿ 2025-26ರ ಋತುವಿಗಾಗಿ ಎಲ್ಲಾ ವಿಭಾಗಗಳ ವೇತನವನ್ನು ಶೇಕಡಾ 50 ರಷ್ಟು ಹೆಚ್ಚಿಸಿದೆ. ಮಂಡಳಿ ಒಟ್ಟು 20 ಮಹಿಳಾ ಆಟಗಾರ್ತಿಯರನ್ನು ಎ ನಿಂದ ಇ ಸೆಕ್ಷನ್ ಗೆ ಹಂಚಿದ್ದು, ಸೆಕ್ಷನ್ ಪ್ರಕಾರ ಅವರಿಗೆ ವೇತನ ಸಿಗಲಿದೆ. ಜುಲೈ 1, 2025 ರಿಂದ ಜೂನ್ 30, 2026 ರವರೆಗೆ ಈ ಸಂಬಳ ಜಾರಿಯಲ್ಲಿರಲಿದೆ.
ಇ ವರ್ಗ ಶುರು ಮಾಡಿದ ಪಿಸಿಬಿ : ಎಡಗೈ ಸ್ಪಿನ್ ಬೌಲರ್ ಸಾದಿಯಾ ಇಕ್ಬಾಲ್ ಅವರ ಉತ್ತಮ ಪ್ರದರ್ಶನ ಗಮನದಲ್ಲಿಟ್ಕೊಂಡು ಅವರನ್ನು ಎ ವರ್ಗಕ್ಕೆ ಬಡ್ತಿ ನೀಡಲಾಗಿದೆ. ನಾಯಕಿ ಫಾತಿಮಾ ಸನಾ, ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಮುನಿಬಾ ಅಲಿ ಮತ್ತು ಆಲ್ರೌಂಡರ್ ಸಿದ್ರಾ ಅಮೀನ್ ಕೂಡ ಎ ವರ್ಗದಲ್ಲಿ ಸ್ಥಾನ ಪಡೆದಿದ್ದಾರೆ. ಸಾದಿಯಾ 2025 ರ ಐಸಿಸಿ ಮಹಿಳಾ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಅವರು ಈವರೆಗೆ 48 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 60 ವಿಕೆಟ್ ಕಬಳಿಸಿದ್ದಾರೆ. 27 ಏಕದಿನ ಪಂದ್ಯಗಳಲ್ಲಿ, ಅವರು 35 ವಿಕೆಟ್ ಪಡೆದಿದ್ದಾರೆ.
ಪಿಸಿಬಿ ಉದಯೋನ್ಮುಖ ಆಟಗಾರರಿಗಾಗಿ ಹೊಸ ವರ್ಗ ಇ ಶುರು ಮಾಡಿದೆ. ಈ ವಿಭಾಗದಲ್ಲಿ ಇಮಾನ್ ಫಾತಿಮಾ ಮತ್ತು ಶವಾಲ್ ಜುಲ್ಫಿಕರ್ ಮೊದಲ ಸ್ಥಾನದಲ್ಲಿದ್ದಾರೆ. ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಫಾತಿಮಾ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು. ತಂಡದಲ್ಲಿರುವ ಕೆಲ ಆಟಗಾರ್ತಿಯರು ಬಡ್ತಿ ಪಡೆದಿದ್ದಾರೆ. ಡಯಾನಾ ಬೇಗ್ ಅವರನ್ನು ಬಿ ವರ್ಗ ಮತ್ತು ರಮೀನ್ ಶಮೀಮ್ ಅವರನ್ನು ಸಿ ವರ್ಗಕ್ಕೆ ಸೇರಿಸದಲಾಗಿದೆ. ಗರಿಷ್ಠ 10 ಆಟಗಾರ್ತಿಯರಿಗೆ ಡಿ ವರ್ಗದಲ್ಲಿ ಸ್ಥಾನ ನೀಡಲಾಗಿದೆ. ಪಾಕಿಸ್ತಾನದ ಮಹಿಳಾ ತಂಡ ಪ್ರಸ್ತುತ ಐರ್ಲೆಂಡ್ ಪ್ರವಾಸದಲ್ಲಿದೆ. ಬುಧವಾರ ನಡೆದ ಮೊದಲ ಪಂದ್ಯದಲ್ಲಿ ಅದು 11 ರನ್ಗಳಿಂದ ಸೋಲು ಕಂಡಿದೆ.
ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿಯರ ಸಂಬಳ ಎಷ್ಟಿದೆ?: ಮಾರ್ಚ್ ನಲ್ಲಿ ಬಿಸಿಸಿಐ ಮಹಿಳಾ ಆಟಗಾರ್ತಿಯರ ಗ್ರೇಡ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದ್ರ ಪ್ರಕಾರ ಭಾರತೀಯ ಮಹಿಳಾ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್, ಉಪನಾಯಕಿ ಸ್ಮೃತಿ ಮಂಧಾನ ಮತ್ತು ಆಲ್ರೌಂಡರ್ ದೀಪ್ತಿ ಶರ್ಮಾ ಅವರನ್ನು ಎ ಗ್ರೇಡ್ನಲ್ಲಿ ಉಳಿಸಿಕೊಳ್ಳಲಾಗಿದೆ. ವೇಗದ ಬೌಲರ್ ರೇಣುಕಾ ಠಾಕೂರ್, ಆಲ್ರೌಂಡರ್ ಜೆಮಿಮಾ ರೋಡ್ರಿಗಸ್, ವಿಕೆಟ್ ಕೀಪರ್ ರಿಚಾ ಘೋಷ್ ಮತ್ತು ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಬಿ ಗ್ರೇಡ್ನಲ್ಲಿದ್ದಾರೆ. ಕೇಂದ್ರ ಒಪ್ಪಂದದ ಪ್ರಕಾರ ಎ ವರ್ಗದ ಮಹಿಳಾ ಕ್ರಿಕೆಟ್ ಆಟಗಾರ್ತಿಯರು ವಾರ್ಷಿಕವಾಗಿ 50 ಲಕ್ಷ ರೂಪಾಯಿ ಪಡೆಯುತ್ತಾರೆ. ಬಿ ವರ್ಗದ ಕ್ರಿಕೆಟ್ ಆಟಗಾರ್ತಿರುವ 30 ಲಕ್ಷ ರೂಪಾಯಿ ಪಡೆಯುತ್ತಾರೆ. ಸಿ ವರ್ಗದ ಕ್ರಿಕೆಟ್ ಆಟಗಾರ್ತಿಯರಿಗೆ 10 ಲಕ್ಷ ರೂಪಾಯಿ ಸಿಗುತ್ತದೆ.
ಪಾಕ್ ಆಟಗಾರ್ತಿಯರ ಸಂಬಳ ತುಂಬಾ ಕಡಿಮೆ ಇದೆ. ಕೆಲ ದಿನಗಳ ಹಿಂದೆ ಪಾಕಿಸ್ತಾನದ ದೇಶೀಯ ಕ್ರಿಕೆಟ್ ಆಟಗಾರ್ತಿಯರ ಪಂದ್ಯ ಶುಲ್ಕ ಚರ್ಚೆಗೆ ಬಂದಿತ್ತು. ಅವರ ಶುಲ್ಕವನ್ನು ಮಂಡಳಿ ಕಡಿಮೆ ಮಾಡಿತ್ತು. ಪಾಕಿಸ್ತಾನದ ದೇಶೀಯ ಮಹಿಳಾ ಕ್ರಿಕೆಟಿಗರ ಪಂದ್ಯ ಶುಲ್ಕವನ್ನು 25,000 ಪಾಕಿಸ್ತಾನಿ ರೂಪಾಯಿಗಳಿಂದ 20,000 ಪಿಕೆಆರ್ ಗೆ ಇಳಿಸಲಾಗಿತ್ತು. ಇದು ಭಾರತೀಯ ಕರೆನ್ಸಿಯಲ್ಲಿ ಕೇವಲ 6000 ರೂಪಾಯಿ. ಅಚ್ಚರಿಯ ವಿಷಯವೆಂದರೆ ದೇಶೀಯ ಮಹಿಳಾ ಕ್ರಿಕೆಟಿಗರ ಮಾಸಿಕ ವೇತನ ಪಾಕಿಸ್ತಾನಿ ಕಾರ್ಮಿಕರಿಗಿಂತ ಕಡಿಮೆ.


