- Home
- Sports
- Cricket
- ಬುಮ್ರಾ ಇಲ್ಲದೇ ಇಂಗ್ಲೆಂಡ್‌ನಲ್ಲಿ 2 ಟೆಸ್ಟ್ ಗೆದ್ದ ಭಾರತ: ಅಚ್ಚರಿ ಅಭಿಪ್ರಾಯ ವ್ಯಕ್ತಪಡಿಸಿದ ಸಚಿನ್ ತೆಂಡುಲ್ಕರ್
ಬುಮ್ರಾ ಇಲ್ಲದೇ ಇಂಗ್ಲೆಂಡ್‌ನಲ್ಲಿ 2 ಟೆಸ್ಟ್ ಗೆದ್ದ ಭಾರತ: ಅಚ್ಚರಿ ಅಭಿಪ್ರಾಯ ವ್ಯಕ್ತಪಡಿಸಿದ ಸಚಿನ್ ತೆಂಡುಲ್ಕರ್
ಮುಂಬೈ: ಆಂಡರ್‌ಸನ್-ತೆಂಡುಲ್ಕರ್ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 2-2ರ ಸಮಬಲ ಸಾಧಿಸಿ ತವರಿಗೆ ವಾಪಾಸಾಗಿದೆ. ಬುಮ್ರಾ ಇಲ್ಲದೇ ಎರಡು ಟೆಸ್ಟ್ ಗೆದ್ದ ಕುರಿತಂತೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ತಮ್ಮದೇ ಆದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಸರಣಿಯಲ್ಲಿ ಪ್ರಮುಖ ವೇಗಿ ಜಸ್‌ಪ್ರೀತ್ ಬುಮ್ರಾ ಆಡದ 2 ಪಂದ್ಯಗಳಲ್ಲಿ ಭಾರತ ಗೆದ್ದಿದ್ದು ಕಾಕತಾಳೀಯ ಎಂದು ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಆಂಡರ್‌ಸನ್-ತೆಂಡುಲ್ಕರ್ ಟೆಸ್ಟ್ ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ ಮೂರು ಟೆಸ್ಟ್ ಪಂದ್ಯಗಳನ್ನಷ್ಟೇ ಆಡಿ 14 ವಿಕೆಟ್ ಕಬಳಿಸಿದ್ದರು. ಈ ಮೂರು ಟೆಸ್ಟ್‌ನಲ್ಲಿ ಭಾರತ ಎರಡು ಪಂದ್ಯ ಸೋತರೇ ಇನ್ನೊಂದು ಪಂದ್ಯ ಡ್ರಾ ಮಾಡಿಕೊಂಡಿತ್ತು.
ಇನ್ನು ಬುಮ್ರಾ ವಿಶ್ರಾಂತಿ ಪಡೆದ ಎರಡು ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಇದರ ಬೆನ್ನಲ್ಲೇ ನೆಟ್ಟಿಗರು ಬುಮ್ರಾ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾರಂಭಿಸಿದ್ದರು.
ಈ ಬಗ್ಗೆ ಮಾತನಾಡಿರುವ ಅವರು, ‘ಬುಮ್ರಾ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. 2 ಬಾರಿ 5 ವಿಕೆಟ್ ಗೊಂಚಲು ಪಡೆದಿದ್ದಾರೆ. ಜನರು ಈಗ ಭಾರತದ ಗೆಲುವಿನ ಬಗ್ಗೆ ಚರ್ಚಿಸುತ್ತಿದ್ದಾರೆ. ಆದರೆ ಬುಮ್ರಾ ಆಡದ 2 ಪಂದ್ಯಗಳಲ್ಲಿ ಭಾರತ ಗೆದ್ದಿದ್ದು ಕಾಕತಾಳೀಯವಷ್ಟೇ.
ಭಾರತ ತಂಡಕ್ಕಾಗಿ ಜಸ್ಪ್ರೀತ್ ಬುಮ್ರಾ ಅವರ ಸಾಧನೆ ಅಸಾಧಾರಣ ಹಾಗೂ ನಂಬಲಸಾಧ್ಯ. ಅವರಿಗೆ ನಾನು ಎಲ್ಲರಿಗಿಂತ ಮೇಲಿನ ಸ್ಥಾನ ಕೊಡುತ್ತೇನೆ ಎಂದು ಸಚಿನ್ ತೆಂಡುಲ್ಕರ್ ಹೇಳಿದ್ದಾರೆ.
ಬುಮ್ರಾ ಅವನುಪಸ್ಥಿತಿಯಲ್ಲಿ ಎಜ್‌ಬಾಸ್ಟನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆಕಾಶ್‌ದೀಪ್ 10 ವಿಕೆಟ್ ಕಬಳಿಸಿದರೆ, ವೇಗಿ ಸಿರಾಜ್ ಕೂಡಾ ಮಾರಕ ದಾಳಿ ನಡೆಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇನ್ನು ಸರಣಿಯ ಕೊನೆಯ ಪಂದ್ಯಕ್ಕೂ ಮುನ್ನ ಭಾರತ 1-2ರ ಹಿನ್ನಡೆಯಲ್ಲಿತ್ತು. ಬುಮ್ರಾ ಓವಲ್ ಟೆಸ್ಟ್‌ನಿಂದ ವಿಶ್ರಾಂತಿ ಪಡೆದಿದ್ದರು. ಈ ಟೆಸ್ಟ್‌ನಲ್ಲೂ ಸಿರಾಜ್ ನೇತೃತ್ವದ ಬೌಲಿಂಗ್ ಪಡೆ ಇಂಗ್ಲೆಂಡ್ ಎದುರು ಆರು ರನ್ ರೋಚಕ ಜಯ ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿತ್ತು.