ರಮೀಜ್ ರಾಜಾಗೆ ಜೀವ ಭಯ: ಬುಲೆಟ್‌ಪ್ರೂಫ್ ವಾಹನದಲ್ಲಿ ಓಡಾಟ..!
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ರಮೀಜ್ ರಾಜಾಗೆ ಜೀವಭಯ
ಬುಲೆಟ್ ಕಾರ್‌ನಲ್ಲಿ ಓಡಾಡುತ್ತಿರುವ ಪಾಕ್ ಮಾಜಿ ಕ್ರಿಕೆಟಿಗ
2021ರ ಸೆಪ್ಟೆಂಬರ್‌ನಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ರಾಜಾ
ಲಾಹೋರ್(ಜು.05): ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ರಮೀಜ್ ರಾಜಾ ತಮಗೆ ಜೀವ ಭಯವಿದ್ದು, ಬುಲೆಟ್ ಪ್ರೂಫ್ ವಾಹನದಲ್ಲಿ ಓಡಾಡುತ್ತಿರುವುದಾಗಿ ಸರ್ಕಾರದ ಸಮಿತಿಗೆ ಮಾಹಿತಿ ನೀಡಿದ್ದಾರೆ. ಸರ್ಕಾರದ ಸೌಲಭ್ಯಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದಾಗಿ ತಮ್ಮ ವಿರುದ್ದ ಕೇಳಿ ಬಂದಿದ್ದ ಆರೋಪಗಳಿಗೆ ಉತ್ತರಿಸಲು ಅವರು ಸಮಿತಿ ಮುಂದೆ ವಿಚಾರಣೆಗೆ ಹಾಜರಾಗಿ ವಿವರಣೆ ನೀಡಿದರು. ರಮೀಜ್ ರಾಜಾ ಬುಲೆಟ್ ಪ್ರೂಫ್ ವಾಹನ ಬಳಸುತ್ತಿರುವ ವಿಷಯ ಕೇಳಿ ಅಧಿಕಾರಿಗಳು ಬೇಸ್ತುಬಿದ್ದರು ಎಂದು ತಿಳಿದು ಬಂದಿದೆ.
ಸುಮಾರು ಎರಡು ಗಂಟೆಗಳ ಕಾಲ ನಡೆದ ದೀರ್ಘ ವಿಚಾರಣೆ ವೇಳೆ ರಮೀಜ್ ರಾಜಾ (Ramiz Raja), ತಾವು ಸರ್ವೀಸ್ ರೂಲ್ಸ್ ಪ್ರಕಾರ ದಿನಭತ್ಯೆ ಹಾಗೂ ಪ್ರಯಾಣ ಭತ್ಯೆಯನ್ನು ಮಾತ್ರ ಬಳಸುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ರವೀಜ್ ರಾಜಾ 2021ರ ಸೆಪ್ಟೆಂಬರ್‌ನಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (Pakistan Cricket Board) ಅಧ್ಯಕ್ಷರಾಗಿ ಕರ್ತವ್ಯ ನಿಭಾಯಿಸುತ್ತಿದ್ದು, ರಾಜಾ ಅವರ ಉತ್ತರದಿಂದ ವಿಚಾರಣ ಸಮಿತಿ ಸಂತೃಪ್ತರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಚಾರಣ ಸಮಿತಿಯು, ರಮೀಜ್ ರಾಜಾ ಅವರ ಕಾರ್ಯವೈಖರಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದೆ. ಇದರ ಜತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು (Pakistan Cricket Team) ತೋರುತ್ತಿರುವ ಪ್ರದರ್ಶನದ ಬಗ್ಗೆ ಸಮಿತಿಯು ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ. ಸದ್ಯ ಪಾಕಿಸ್ತಾನ ಕ್ರಿಕೆಟ್ ತಂಡವು ಐಸಿಸಿ ಟಿ20 ಹಾಗೂ ಏಕದಿನ ಶ್ರೇಯಾಂಕದಲ್ಲಿ ಮೂರನೇ ಸ್ಥಾನದಲ್ಲಿದೆ. ಇನ್ನು ಟೆಸ್ಟ್ ಶ್ರೇಯಾಂಕದಲ್ಲಿ ಪಾಕಿಸ್ತಾನ ತಂಡವು 5ನೇ ಸ್ಥಾನದಲ್ಲಿದೆ. ಇದಷ್ಟೇ ಅಲ್ಲದೇ ಕಳೆದ ವರ್ಷ ಯುಎಇನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡವು ಸೆಮಿಫೈನಲ್ ಪ್ರವೇಶಿಸಿತ್ತಾದರೂ, ಸೆಮೀಸ್‌ನಲ್ಲಿ ಆಸ್ಟ್ರೇಲಿಯಾ ಎದುರು ರೋಚಕ ಸೋಲು ಕಂಡು ನಿರಾಸೆ ಅನುಭವಿಸಿತ್ತು.
ಐಪಿಎಲ್‌ಗೆ ಐಸಿಸಿ ಬಿಡುವು: ಪಾಕಿಸ್ತಾನ ತೀವ್ರ ವಿರೋಧ
ಕರಾಚಿ: ಐಪಿಎಲ್‌ಗಾಗಿ ಐಸಿಸಿ ಎರಡೂವರೆ ತಿಂಗಳ ಕಾಲ ಬಿಡುವು ಕೊಡಲಿದೆ ಎಂಬ ಬಿಸಿಸಿಐ ಕಾರ‍್ಯದರ್ಶಿ ಜಯ್ ಶಾ ಹೇಳಿಕೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಮತ್ತೊಮ್ಮೆ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಬಗ್ಗೆ ಐಸಿಸಿ ಸಭೆಯಲ್ಲಿ ಪ್ರಶ್ನಿಸುತ್ತೇವೆ ಎಂದು ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ತಿಳಿಸಿದ್ದರು.
Birmingham Test ಭಾರತೀಯರ ಮೇಲೆ ಇಂಗ್ಲೆಂಡ್ ಫ್ಯಾನ್ಸ್ ಜನಾಂಗೀಯ ನಿಂದನೆ..!
‘ಐಪಿಎಲ್‌ಗೆ ಬಿಡುವು ಕೊಡುವ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ. ಆದರೂ ಈ ಬಗ್ಗೆ ಐಸಿಸಿಗೆ ನಮ್ಮ ನಿರ್ಧಾರ ತಿಳಿಸುತ್ತೇವೆ. ಈ ಪ್ರಸ್ತಾಪವನ್ನು ನಾವು ಶಕ್ತವಾಗಿ ವಿರೋಧಿಸುತ್ತೇವೆ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಮೇಲೆ ಪರಿಣಾಮ ಬೀರುವ ನಿರ್ಧಾರ ಕೈಗೊಳ್ಳದಂತೆ ತಡೆಯುತ್ತೇವೆ’ ಎಂದಿದ್ದರು. ಭಾರತ ಹಾಗೂ ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಪಾಕಿಸ್ತಾನ ಕ್ರಿಕೆಟ್ ಆಟಗಾರರಿಗೆ ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಬಿಸಿಸಿಐ ಅವಕಾಶವನ್ನು ನೀಡಿಲ್ಲ ಎನ್ನುವುದನ್ನು ಸ್ಮರಿಸಬಹುದಾಗಿದೆ.