Birmingham Test ಭಾರತೀಯರ ಮೇಲೆ ಇಂಗ್ಲೆಂಡ್ ಫ್ಯಾನ್ಸ್ ಜನಾಂಗೀಯ ನಿಂದನೆ..!
* ನಿರ್ಣಾಯಕ ಹಂತ ತಲುಪಿದ ಭಾರತ-ಇಂಗ್ಲೆಂಡ್ ನಡುವಿನ ಬರ್ಮಿಂಗ್‌ಹ್ಯಾಮ್ ಟೆಸ್ಟ್
* ಭಾರತೀಯ ಅಭಿಮಾನಿಗಳ ಮೇಲೆ ಜನಾಂಗೀಯ ನಿಂದನೆ ಮಾಡಿದ ಇಂಗ್ಲೆಂಡ್ ವೀಕ್ಷಕರು
* ತಮಗಾದ ಅವಮಾನ ಹಾಗೂ ಭಯವನ್ನು ಟ್ವೀಟ್ ಮೂಲಕ ಬಹಿರಂಗ ಪಡಿಸಿದ ನೆಟ್ಟಿಗ
ಬರ್ಮಿಂಗ್‌ಹ್ಯಾಮ್(ಜು.05): ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ 5 ಟೆಸ್ಟ್ ಪಂದ್ಯವು ರೋಚಕಘಟ್ಟ ತಲುಪಿದೆ. ಇಲ್ಲಿನ ಎಜ್‌ಬಾಸ್ಟನ್ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದ ವೇಳೆ ಇಂಗ್ಲೆಂಡ್ ಪ್ರೇಕ್ಷಕರು, ಭಾರತ ಕ್ರಿಕೆಟ್ ಅಭಿಮಾನಿಗಳನ್ನು ಜನಾಂಗೀಯವಾಗಿ ನಿಂದಿಸಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಪಂದ್ಯ ವೀಕ್ಷಿಸಲು ಆಗಮಿಸಿದ್ದ ಟೀಂ ಇಂಡಿಯಾ ಅಭಿಮಾನಿಗಳ ಎದುರು ಆಂಗ್ಲರು ಕುಕೃತ್ಯ ಮೆರೆದಿದ್ದಾರೆ. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೆಂಡ್ ಆಗುತ್ತಿದೆ.
ಈ ಮೊದಲು ಯಾರ್ಕ್‌ಶೈರ್ ಕ್ರಿಕೆಟಿಗ ಅಝೀಮ್ ರಫಿಕ್, ಇಂಗ್ಲೆಂಡ್‌ನಲ್ಲಿ ತಾವು ಎದುರಿಸಿದ್ದ ಜನಾಂಗೀಯ ನಿಂದನೆಯ ಬಗ್ಗೆ ತುಟಿಬಿಚ್ಚಿದ್ದರು. ಈ ಕುರಿತಂತೆ ಅಝೀಮ್ ರಫಿಕ್ ಸರಣಿ ಟ್ವೀಟ್ ಮೂಲಕ ತಮಗಾದ ಜನಾಂಗೀಯ ನಿಂದನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು. ಇದರ ಬೆನ್ನಲ್ಲೇ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ಒಂದು ವಿಶೇಷ ತನಿಖಾ ತಂಡವನ್ನು ರಚಿಸಿ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಇದೀಗ ಮತ್ತೊಮ್ಮೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಎಜ್‌ಬಾಸ್ಟನ್‌ನಲ್ಲಿ ತಾವೆದುರಿಸಿದ ಜನಾಂಗೀಯ ನಿಂದನೆಯನ್ನು ಟ್ವೀಟ್ ಮೂಲಕ ಜಗತ್ತಿನ ಮುಂದೆ ಅನಾವರಣ ಮಾಡಿದ್ದಾರೆ.
ನಾವು ಅಪರಾಧಿಗಳನ್ನು ತೋರಿಸಿದ್ರೂ ಏನೂ ಕ್ರಮ ಕೈಗೊಳ್ಳಲಿಲ್ಲ:
ಓರ್ವ ನೆಟ್ಟಿಗ ತಾವು ಎಜ್‌ಬಾಸ್ಟನ್‌ನಲ್ಲಿ ಎದುರಿಸಿದ ಜನಾಂಗೀಯ ನಿಂದನೆಯ ಬಗ್ಗೆ ಟ್ಟಿಟರ್‌ನಲ್ಲಿ ಬರೆದುಕೊಂಡಿದ್ದರು. ಈ ಟ್ವೀಟ್ ಅನ್ನು ಯಾರ್ಕ್‌ಶೈರ್ ತಂಡದ ಕ್ರಿಕೆಟಿಗ ರಫಿಕ್ ರಿಟ್ವೀಟ್ ಮಾಡಿದ್ದಾರೆ. ಈ ಬಳಿಕ ಈ ವಿಚಾರ ಹೆಚ್ಚು ಗಮನ ಸೆಳೆದಿದೆ. ಎಜ್‌ಬಾಸ್ಟನ್‌ನ 22ನೇ ಬ್ಲಾಕ್‌ನ ಎರಿಕ್ ಹೋಲಿಸ್‌ನಲ್ಲಿ ಭಾರತೀಯ ಅಭಿಮಾನಿಗಳ ಮೇಲೆ ಜನಾಂಗೀಯ ನಿಂದನೆಗಳನ್ನು ಮಾಡಿದ್ದಾರೆ. ನಮ್ಮನ್ನು ಅಶ್ಲೀಲ ಪದಗಳಿಂದ ನಿಂದಿಸಿದರು. ನಾವಾಗ ಸ್ಥಳೀಯ ಸಿಬ್ಬಂದಿಯ ಬಳಿ ಹೋಗಿ ಕನಿಷ್ಠ 10 ಬಾರಿ ಇವರೇ ನೋಡಿ ಈ ರೀತಿ ಜನಾಂಗೀಯ ನಿಂದನೆ ಮಾಡುತ್ತಿದ್ದಾರೆ ಎಂದು ತಿಳಿಸಿದರೂ ಸಹಾ ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ತಮ್ಮ ಬೇಸರವನ್ನು ಹೊರಹಾಕಿದ್ದಾರೆ.
ಇನ್ನು ಮುಂದುವರೆದು, ನಾವು ನಮ್ಮ ಮಹಿಳೆಯರು ಹಾಗೂ ಮಕ್ಕಳ ಬಗ್ಗೆ ಸಾಕಷ್ಟು ಆತಂಕಕ್ಕೆ ಒಳಗಾಗಿದ್ದೆವು. ಅದರೆ ಅವರು ನಮಗ್ಯಾವ ಸಹಾಯವನ್ನು ಮಾಡಲಿಲ್ಲ. ಇಂದಿನ ಸಮಾಜದಲ್ಲಿ ಇಂತಹ ಘಟನೆಗಳನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಬರ್ಮಿಂಗ್‌ಹ್ಯಾಮ್ ಟೆಸ್ಟ್ ಗೆಲುವಿನತ್ತ ಇಂಗ್ಲೆಂಡ್
ಇನ್ನು ಭಾರತ ಹಾಗೂ ಇಂಗ್ಲೆಂಡ್ (India vs England) ತಂಡಗಳ ನಡುವಿನ ಬರ್ಮಿಂಗ್‌ಹ್ಯಾಮ್ ಟೆಸ್ಟ್ ಪಂದ್ಯದ ಬಗ್ಗೆ ಮಾತನಾಡುವುದಾದರೇ, ಆತಿಥೇಯ ಇಂಗ್ಲೆಂಡ್ ತಂಡವು ಸದ್ಯ ಗೆಲುವಿನತ್ತ ದಾಪುಗಾಲಿಡಲಾರಂಭಿಸಿದೆ. ಮೊದಲ ಮೂರು ದಿನಗಳ ಕಾಲ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಟೀಂ ಇಂಡಿಯಾಗೆ (Team India) ತಿರುಗೇಟು ನೀಡುವತ್ತ ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ತಂಡವು ದಿಟ್ಟ ಹೆಜ್ಜೆಯಿಡಲಾರಂಭಿಸಿದೆ.
153 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ನಾಲ್ಕನೇ ದಿನದಾಟವನ್ನು ಆರಂಭಿಸಿದ್ದ ಭಾರತ ತಂಡವು ಎರಡನೇ ಇನಿಂಗ್ಸ್‌ನಲ್ಲಿ 245 ರನ್ ಗಳಿಸುವಷ್ಟರಲ್ಲೇ ಸರ್ವಪತನ ಕಂಡಿತು. ಈ ಮೂಲಕ ಇಂಗ್ಲೆಂಡ್ ತಂಡವು ಬರ್ಮಿಂಗ್‌ಹ್ಯಾಮ್ ಟೆಸ್ಟ್ ಪಂದ್ಯವನ್ನು ಗೆಲ್ಲಲು 378 ರನ್‌ಗಳ ಸವಾಲಿನ ಗುರಿ ನೀಡಿದೆ. ಇನ್ನು ಎರಡನೇ ಇನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ತಂಡವು ನಾಲ್ಕನೇ ದಿನದಾಟದಂತ್ಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 259 ರನ್ ಗಳಿಸಿದೆ. ಕೊನೆಯ ದಿನದಲ್ಲಿ ಬರ್ಮಿಂಗ್‌ಹ್ಯಾಮ್ ಟೆಸ್ಟ್ ಗೆಲ್ಲಲು ಇಂಗ್ಲೆಂಡ್‌ಗೆ ಇನ್ನೂ 119 ರನ್‌ಗಳ ಅಗತ್ಯವಿದೆ. ಮಾಜಿ ನಾಯಕ ಜೋ ರೂಟ್ 76 ಹಾಗೂ ಜಾನಿ ಬೇರ್‌ಸ್ಟೋವ್ 72 ಕೊನೆಯ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.