ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಪಾಕಿಸ್ತಾನದ ಮಾಜಿ ಲೆಗ್ ಸ್ಪಿನ್ನರ್ ದಾನಿಶ್ ಕನೇರಿಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಗೆ ಬೆಂಬಲ ಸೂಚಿಸಿರುವ ಅವರು, ಭಾರತದಲ್ಲಿ ನಡೆಯುವ ಪ್ರತಿಭಟನೆಗಳ ಹಿಂದೆ ಒಂದು ನಿರ್ದಿಷ್ಟ ಸ್ಕ್ರಿಪ್ಟ್ ಕೆಲಸ ಮಾಡುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಪಾಕಿಸ್ತಾನದ ಮಾಜಿ ಲೆಗ್ ಸ್ಪಿನ್ನರ್ ದಾನಿಶ್ ಕನೇರಿಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಗೆ ಬೆಂಬಲ ಸೂಚಿಸಿರುವ ಅವರು, ಭಾರತದಲ್ಲಿ ನಡೆಯುವ ಪ್ರತಿಭಟನೆಗಳ ಹಿಂದೆ ಒಂದು ನಿರ್ದಿಷ್ಟ ಸ್ಕ್ರಿಪ್ಟ್ ಕೆಲಸ ಮಾಡುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಪ್ರತಿಭಟನೆಗೆ 6 ಕಾರಣ ಕೊಟ್ಟ ಕನೇರಿಯಾ
ಈ ಕುರಿತು 'X' (ಟ್ವಿಟರ್)ನಲ್ಲಿ ಪೋಸ್ಟ್ ಮಾಡಿರುವ 45 ವರ್ಷದ ಕನೇರಿಯಾ, ಭಾರತದಲ್ಲಿ ನಡೆಯುವ ಪ್ರತಿಭಟನೆಗಳು ಒಂದು ಸಿದ್ಧ ಮಾದರಿಯನ್ನು ಅನುಸರಿಸುತ್ತಿವೆ ಎಂದು ಟೀಕಿಸಿದ್ದಾರೆ. ಅವರ ಪ್ರಕಾರ ಪ್ರತಿಭಟನೆಯ ಸ್ಕ್ರಿಪ್ಟ್ ಹೀಗಿದೆ.
- ಶ್ರೀರಾಮನನ್ನು ನಿಂದಿಸುವುದು
- ಭಾರತ ಮಾತೆಯನ್ನು ನಿಂದಿಸುವುದು
- ಪ್ರಧಾನಿ ಮೋದಿಯನ್ನು ಅವಾಚ್ಯ ಶಬ್ದಗಳಿಂದ ಬೈಯುವುದು
- ಮೋದಿಯವರ ದಿವಂಗತ ತಾಯಿಯನ್ನು ನಿಂದಿಸುವುದು
- ಬ್ರಾಹ್ಮಣರನ್ನು ಗುರಿಯಾಗಿಸಿ ಟೀಕಿಸುವುದು
- ಹಿಂದುತ್ವವನ್ನು ನಿಂದಿಸುವುದು
ನೇಪಾಳ ಮಾದರಿಯ ಅಸ್ಥಿರತೆಯ ಹಗಲುಗನಸು
ಯಾವುದೇ ಚರ್ಚೆ ಇಲ್ಲ, ಪರಿಹಾರಗಳೂ ಇಲ್ಲ. ಕೇವಲ ಘೋಷಣೆಗಳು, ನಿಂದನೆ ಮತ್ತು ಗದ್ದಲ ಮಾತ್ರ ನಡೆಯುತ್ತಿದೆ. ಒಂದು ದಿನ ಭಾರತದಲ್ಲಿ ನೇಪಾಳದಂತಹ ರಾಜಕೀಯ ಅಸ್ಥಿರತೆಯನ್ನು ನಿರ್ಮಿಸಬಹುದು ಎಂಬ ಭ್ರಮೆಯಲ್ಲಿ ವಿರೋಧ ಪಕ್ಷಗಳು ಬದುಕುತ್ತಿರುವಂತಿದೆ ಎಂದು ಕನೇರಿಯಾ ಕಿಡಿಕಾರಿದ್ದಾರೆ. ದೇಶದ ಪ್ರಗತಿಗೆ ಅಡ್ಡಿಪಡಿಸುವ ಉದ್ದೇಶದಿಂದಲೇ ಇಂತಹ ಕೃತ್ಯಗಳು ನಡೆಯುತ್ತಿವೆ ಎಂದು ಅವರು ಎಚ್ಚರಿಸಿದ್ದಾರೆ.
ಇತ್ತ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗಳು ಜೋರಾಗಿರುವಾಗಲೇ, ಪೇಪರ್ ಲೀಕ್ ಹಗರಣದ ವಿರುದ್ಧ ಪ್ರಧಾನಿ ಮೋದಿ ಸಮರ ಸಾರಿದ್ದಾರೆ. ಪೇಪರ್ ಲೀಕ್ ಪ್ರಕರಣಗಳ ವಿಚಾರಣೆ ನಡೆಸಿ ದೋಷಿಗಳಿಗೆ ಶೀಘ್ರ ಶಿಕ್ಷೆ ವಿಧಿಸಲು ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸುವುದಾಗಿ ಅವರು ಘೋಷಿಸಿದ್ದಾರೆ. ನಮ್ಮ ಯುವಕರ ಭವಿಷ್ಯಕ್ಕಿಂತ ನಮಗೆ ಬೇರೆ ಯಾವುದೂ ಮುಖ್ಯವಲ್ಲ. ಪೇಪರ್ ಲೀಕ್‌ನಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ಖಚಿತಪಡಿಸಲು ನಾವು ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳನ್ನು ರಚಿಸುತ್ತಿದ್ದೇವೆ. ವಿದ್ಯಾರ್ಥಿಗಳ ಹಿತರಕ್ಷಣೆ ನಮ್ಮ ಜವಾಬ್ದಾರಿ ಎಂದು ಮೋದಿ ಭರವಸೆ ನೀಡಿದ್ದಾರೆ. ಒಟ್ಟಿನಲ್ಲಿ, ಭಾರತದ ಆಂತರಿಕ ವಿಚಾರಗಳಲ್ಲಿ ಪ್ರತಿಭಟನಾಕಾರರ ನಡೆಯನ್ನು ಕಟುವಾಗಿ ಟೀಕಿಸಿರುವ ದಾನಿಶ್ ಕನೇರಿಯಾ, ನೇರವಾಗಿ ಪ್ರಧಾನಿ ಮೋದಿ ಅವರ ಬೆಂಬಲಕ್ಕೆ ನಿಂತಿರುವುದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.


