ಭಾರತ ವಿರುದ್ಧದ ಮೊದಲ ಟೆಸ್ಟ್‌ಗೆ ಶ್ರೀಲಂಕಾ 16 ಸದಸ್ಯರ ತಂಡವನ್ನು ಪ್ರಕಟಿಸಿದ್ದು, ಗಾಯದ ಕಾರಣ ಪ್ರಮುಖ ಆಟಗಾರರಾದ ಪತುಮ್ ನಿಸ್ಸಂಕ ಮತ್ತು ಕುಸಾಲ್ ಮೆಂಡಿಸ್ ತಂಡದಿಂದ ಹೊರಗುಳಿದಿದ್ದಾರೆ. ಧನಂಜಯ ಡಿ ಸಿಲ್ವ ನಾಯಕತ್ವದ ತಂಡದಲ್ಲಿ ಇಬ್ಬರು ಹೊಸ ಮುಖಗಳಿಗೆ ಅವಕಾಶ ನೀಡಲಾಗಿದ್ದು, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ದೃಷ್ಟಿಯಿಂದ ಈ ಸರಣಿ ಮಹತ್ವದ್ದಾಗಿದೆ.

ಕೊಲಂಬೊ: ಭಾರತ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಶ್ರೀಲಂಕಾ ಕ್ರಿಕೆಟ್ ಮಂಡಳಿ 16 ಸದಸ್ಯರ ತಂಡವನ್ನು ಪ್ರಕಟಿಸಿದೆ. ಆಗಸ್ಟ್ 15, ಶನಿವಾರದಿಂದ ಗಾಲೆ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್ ಶುರುವಾಗಲಿದೆ. ಈ ಪಂದ್ಯದಲ್ಲಿ ಪ್ರಮುಖ ಆಟಗಾರರಾದ ಪತುಮ್‌ ನಿಸ್ಸಂಕ ಮತ್ತು ಕುಸಾಲ್ ಮೆಂಡಿಸ್ ಆಡುತ್ತಿಲ್ಲ. ಗಾಯದ ಸಮಸ್ಯೆಯಿಂದಾಗಿ ಇವರಿಬ್ಬರೂ ತಂಡದಿಂದ ಹೊರಗುಳಿದಿದ್ದಾರೆ.

ಎರಡು ಹೊಸ ಮುಖಗಳಿಗೆ ಅವಕಾಶ!

ಮಣಿಕಟ್ಟಿನ ಗಾಯದಿಂದ ನಿಸ್ಸಂಕ ಇನ್ನೂ ಪೂರ್ತಿಯಾಗಿ ಚೇತರಿಸಿಕೊಂಡಿಲ್ಲ. ಇತ್ತ, ಲಂಕಾ ಪ್ರೀಮಿಯರ್ ಲೀಗ್ ವೇಳೆ ಕುಸಾಲ್ ಮೆಂಡಿಸ್‌ಗೆ ಹ್ಯಾಮ್‌ಸ್ಟ್ರಿಂಗ್ ಇಂಜುರಿ ಆಗಿತ್ತು. ಹೀಗಾಗಿ ಅವರು ಸರಣಿಗೆ ಅಲಭ್ಯರಾಗಿದ್ದಾರೆ. ಮೆಂಡಿಸ್ ಬದಲಿಗೆ 33 ವರ್ಷದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ನಿರೋಷನ್ ಡಿಕ್ವೆಲ್ಲಾ ತಂಡಕ್ಕೆ ವಾಪಸಾಗಿದ್ದಾರೆ. ಡಿಕ್ವೆಲ್ಲಾ ಅವರು 2023ರ ಮಾರ್ಚ್‌ನಲ್ಲಿ ಶ್ರೀಲಂಕಾ ಪರ ಕೊನೆಯ ಟೆಸ್ಟ್ ಪಂದ್ಯ ಆಡಿದ್ದರು. ಈ ಸರಣಿಯಲ್ಲಿ ಧನಂಜಯ ಡಿ ಸಿಲ್ವ ಲಂಕಾ ತಂಡವನ್ನು ಮುನ್ನಡೆಸಲಿದ್ದು, ಆಲ್‌ರೌಂಡರ್ ಕಮಿಂದು ಮೆಂಡಿಸ್‌ಗೆ ಉಪನಾಯಕನ ಜವಾಬ್ದಾರಿ ನೀಡಲಾಗಿದೆ. ಆಫ್ ಸ್ಪಿನ್ನರ್ ಕಸೀರಾ ನುವಾಂತ ಮತ್ತು ಬ್ಯಾಟರ್ ಪಸಿಂದು ಸೂರ್ಯಬಂಡಾರ ತಂಡದಲ್ಲಿರುವ ಹೊಸ ಮುಖಗಳಾಗಿವೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಶ್ರೀಲಂಕಾ ಪರ ಅತಿ ಹೆಚ್ಚು ವಿಕೆಟ್ ಪಡೆದ ಪ್ರಭಾತ್ ಜಯಸೂರ್ಯ ಸ್ಪಿನ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ಗಾಲೆ ಸ್ಟೇಡಿಯಂ ಒಂದರಲ್ಲೇ 80ಕ್ಕೂ ಹೆಚ್ಚು ವಿಕೆಟ್ ಪಡೆದಿರುವ ಜಯಸೂರ್ಯ ಅವರಿಗೆ ರಮೇಶ್ ಮೆಂಡಿಸ್ ಸಾಥ್ ನೀಡಲಿದ್ದಾರೆ. ಲಹಿರು ಕುಮಾರ, ವಿಶ್ವ ಫೆರ್ನಾಂಡೋ, ಅಸಿತ ಫೆರ್ನಾಂಡೋ ಮತ್ತು ದಿಲ್ಶನ್ ಮಧುಶಂಕ ವೇಗದ ಬೌಲಿಂಗ್ ವಿಭಾಗದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಉಭಯ ತಂಡಗಳ ಪಾಲಿಗೆ ಮಹತ್ವದ ಸರಣಿ:

ಇನ್ನು ಭಾರತ ಹಾಗೂ ಶ್ರೀಲಂಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯು ಉಭಯ ತಂಡಗಳ ಪಾಲಿಗೆ ಸಾಕಷ್ಟು ಮಹತ್ವದ್ದೆನಿಸಿಕೊಂಡಿದೆ. ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಆಡಿದ 9 ಪಂದ್ಯಗಳ ಪೈಕಿ 4 ಗೆಲುವು, 4 ಸೋಲು ಹಾಗೂ ಒಂದು ಡ್ರಾ ಪಂದ್ಯ ಸೇರಿದಂತೆ 48.15% ನೊಂದಿಗೆ ಐದನೇ ಸ್ಥಾನದಲ್ಲಿದೆ. ಇನ್ನೊಂದೆಡೆ ಶ್ರೀಲಂಕಾ ತಂಡವು ಆಡಿದ ನಾಲ್ಕು ಪಂದ್ಯಗಳಲ್ಲಿ ತಲಾ ಒಂದು ಗೆಲುವು, ಒಂದು ಸೋಲು ಹಾಗೂ ಎರಡು ಡ್ರಾ ಸಹಿತ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ವಿಶ್ವ ಟೆಸ್ಟ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಕನಸು ಜೀವಂತವಾಗಿಟ್ಟುಕೊಳ್ಳಬೇಕಿದ್ದರೇ ಈ ಸರಣಿ ಗೆಲ್ಲಲೇಬೇಕಾದ ಒತ್ತಡದಲ್ಲಿವೆ ಉಭಯ ತಂಡಗಳು.

ಮೊದಲ ಟೆಸ್ಟ್‌ಗೆ ಶ್ರೀಲಂಕಾ ತಂಡ: 

ಧನಂಜಯ ಡಿ ಸಿಲ್ವ (ನಾಯಕ), ಕಮಿಂದು ಮೆಂಡಿಸ್ (ಉಪನಾಯಕ), ಲಹಿರು ಉದಾರ, ನಿಶಾನ್ ಮಧುಷ್ಕ, ದಿನೇಶ್ ಚಾಂಡಿಮಾಲ್, ಪಸಿಂದು ಸೂರ್ಯಬಂಡಾರ, ಸೋನಾಲ್ ದಿನೂಷ, ನಿರೋಷನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ರಮೇಶ್ ಮೆಂಡಿಸ್, ಪ್ರಭಾತ್ ಜಯಸೂರ್ಯ, ಕಸೀರಾ ನುವಾಂತ, ಮಿಲಾನ್ ರತ್‌ನಾಯಕೆ, ಅಸಿತ ಫೆರ್ನಾಂಡೋ, ಲಹಿರು ಕುಮಾರ, ವಿಶ್ವ ಫೆರ್ನಾಂಡೋ, ದಿಲ್ಶನ್ ಮಧುಶಂಕ.