ಅಕ್ಟೋಬರ್ 05ರಿಂದ ಐಸಿಸಿ ಏಕದಿನ ವಿಶ್ವಕಪ್ ಆರಂಭ2023ರ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯಬಿಸಿ​ಸಿ​ಐಗೆ ಒಂದು ಷರತ್ತು ಹಾಕಿದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್2025ರಲ್ಲಿ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕ್‌ಗೆ ಬರುವಂತೆ ಒತ್ತಾಯ

ಕರಾ​ಚಿ(ಮೇ.08): ವರ್ಷಾಂತ್ಯ​ದಲ್ಲಿ ಭಾರ​ತ​ದಲ್ಲಿ ನಡೆ​ಯ​ಲಿ​ರುವ ಐಸಿಸಿ ಏಕ​ದಿನ ವಿಶ್ವ​ಕ​ಪ್‌​ನಲ್ಲಿ ಪಾಕಿ​ಸ್ತಾನ ತಂಡ ಪಾಲ್ಗೊ​ಳ್ಳ​ಬೇ​ಕಾ​ದರೆ ತನ್ನ ಷರತ್ತನ್ನು ಒಪ್ಪಬೇಕು ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡ​ಳಿ​(​ಪಿ​ಸಿ​ಬಿ) ಒತ್ತಾಯಿಸಿದೆ. 2025ರಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿಗೆ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುವುದಾಗಿ ಬಿಸಿಸಿಐ ಲಿಖಿತ ಭರವಸೆ ನೀಡಿದರಷ್ಟೇ ವಿಶ್ವಕಪ್‌ ಆಡಲು ಭಾರತಕ್ಕೆ ಆಗಮಿಸುವುದಾಗಿ ಪಿಸಿಬಿ ಅಧ್ಯಕ್ಷ ನಜಂ ಸೇಠಿ ಹೇಳಿದ್ದಾರೆ.

ಸದ್ಯ ಏಷ್ಯಾ​ಕಪ್‌ ಕ್ರಿಕೆ​ಟ್‌ ಆತಿಥ್ಯ ಹಕ್ಕು ಗೊಂದಲ ಇನ್ನೂ ಮುಂದು​ವ​ರಿ​ದಿದ್ದು, ಭಾರತ ತಂಡ ಪಾಕಿಸ್ತಾನಕ್ಕೆ ತೆರ​ಳು​ವು​ದಿಲ್ಲ ಎಂದು ಖಚಿ​ತ​ಪ​ಡಿ​ಸಿದೆ. ಈ ನಡುವೆ ಟೂರ್ನಿಯ ಆತಿ​ಥ್ಯ ಹಕ್ಕು ಪಾಕ್‌​ ಕೈತ​ಪ್ಪುವ ಸಾಧ್ಯತೆಯಿದೆ ಎನ್ನ​ಲಾ​ಗು​ತ್ತಿದೆ. ಸದ್ಯದ ಬೆಳ​ವ​ಣಿಗೆ ಗಮ​ನಿ​ಸಿ​ದರೆ ಭಾರತ 2025ರ ಚಾಂಪಿ​ಯನ್ಸ್‌ ಟ್ರೋಫಿ ಆಡಲು ಪಾಕಿ​ಸ್ತಾ​ನಕ್ಕೆ ಹೋಗುವ ಸಾಧ್ಯ​ತೆ​ಯಿಲ್ಲ. ಹೀಗಾಗಿ ನಜಂ ಸೇಠಿ ಬಿಸಿ​ಸಿ​ಐಗೆ ಷರತ್ತು ಹಾಕಿದ್ದಾರೆ. ತಮ್ಮ ನಿಲು​ವನ್ನು ಬೆಂಬ​ಲಿ​ಸು​ವಂತೆ ಸೇಠಿ ಮೇ 8ರ ಎಸಿಸಿ ಹಾಗೂ ಐಸಿಸಿ ಸಭೆ​ಯಲ್ಲಿ ಮನವಿ ಮಾಡುವ ಸಾಧ್ಯತೆಯಿದೆ ಎನ್ನ​ಲಾ​ಗಿ​ದೆ.

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮುಕ್ತಾಯವಾದ ಬಳಿಕವಷ್ಟೇ ಬಿಸಿಸಿಐ, ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟಿಸಲಿದೆ ಎನ್ನಲಾಗುತ್ತಿದೆ. 2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮೇ 28ರಂದು ಮುಕ್ತಾಯವಾಗಲಿದೆ. 

IPL 2023 ಈ ಬಾರಿ ಕಪ್ ಗೆಲ್ಲುವ ತಂಡ ಯಾವುದು? ರವಿಶಾಸ್ತ್ರಿ ಭವಿಷ್ಯ ನಿಜವಾಗುತ್ತಾ?

ಸದ್ಯ ಈಗಿರುವ ವರದಿಗಳ ಪ್ರಕಾರ, ಮುಂಬರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಕಾದಾಟಕ್ಕೆ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ ವಹಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಒಂದು ಲಕ್ಷಕ್ಕೂ ಅಧಿಕ ಮಂದಿ ಏಕಕಾಲದಲ್ಲಿ ಕ್ರಿಕೆಟ್‌ ಪಂದ್ಯವನ್ನು ವೀಕ್ಷಿಸುವ ಸಾಮರ್ಥ್ಯ ಹೊಂದಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಹೈವೋಲ್ಟೇಜ್ ಪಂದ್ಯವನ್ನು ಆಯೋಜಿಸಲು ಬಿಸಿಸಿಐ ತೀರ್ಮಾನ ಮಾಡುತ್ತಿದೆ ಎಂದು ದ ಇಂಡಿಯನ್‌ ಎಕ್ಸ್‌ಪ್ರೆಸ್‌ ವೆಬ್‌ಸೈಟ್ ವರದಿ ಮಾಡಿದೆ. ಇಂಡೋ-ಪಾಕಿಸ್ತಾನ ನಡುವಿನ ಪಂದ್ಯವನ್ನು ಮೈದಾನದಲ್ಲೇ ಕಣ್ತುಂಬಿಕೊಳ್ಳಲು ಕ್ರಿಕೆಟ್ ಜಗತ್ತಿನ ಮೂಲೆಮೂಲೆಗಳಿಂದ ಪ್ರೇಕ್ಷಕರು ದೊಡ್ಡ ಸಂಖ್ಯೆಯಲ್ಲಿ ಬರುವುದರಿಂದಾಗಿ ಜಗತ್ತಿನ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನಿಸಿಕೊಂಡಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಪಂದ್ಯ ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ.

ಎಲ್ಲವೂ ಅಂದುಕೊಂಡಂತೆ ಆದರೆ ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 05ರಿಂದ ಆರಂಭವಾಗಲಿದ್ದು, ನಾಗ್ಪುರ, ಬೆಂಗಳೂರು, ತಿರುವನಂತಪುರಂ, ಮುಂಬೈ, ಡೆಲ್ಲಿ, ಲಖನೌ, ಗುವಾಹಟಿ, ಹೈದರಾಬಾದ್, ಕೋಲ್ಕತಾ, ರಾಜ್‌ಕೋಟ್, ಇಂದೋರ್ ಹಾಗೂ ಧರ್ಮಶಾಲಾದಲ್ಲಿ ವಿಶ್ವಕಪ್‌ ಚಾಂಪಿಯನ್ ಪಟ್ಟಕ್ಕಾಗಿ ತಂಡಗಳು ಕಾದಾಡಲಿವೆ.

ಈ ಎಲ್ಲಾ ನಗರಗಳ ಪೈಕಿ ಕೇವಲ 7 ನಗರಗಳ ಸ್ಟೇಡಿಯಂಗಳಲ್ಲಿ ಮಾತ್ರ ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯಗಳನ್ನು ಆಡಲಿದೆ. ಅಹಮದಾಬಾದ್‌ನಲ್ಲಿ ಭಾರತ ತಂಡವು ಎರಡು ಪಂದ್ಯಗಳನ್ನಾಡುವ ಸಾಧ್ಯತೆಯಿದೆ.

ಪಾಕ್‌ ಬಹುತೇಕ ಪಂದ್ಯಗಳಿಗೆ ಬೆಂಗಳೂರು-ಚೆನ್ನೈ ಆತಿಥ್ಯ?:

ಹೌದು, ವರದಿಯಲ್ಲಿ ಉಲ್ಲೇಖಿಸಿರುವಂತೆ ಭದ್ರತೆಯ ಕಾರಣದಿಂದಾಗಿ ಪಾಕಿಸ್ತಾನ ತಂಡವು ಆಡಲಿರುವ ಬಹುತೇಕ ಪಂದ್ಯಗಳಿಗೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಹಾಗೂ ಚೆನ್ನೈನ ಚೆಪಾಕ್ ಸ್ಟೇಡಿಯಂ ಆತಿಥ್ಯವನ್ನು ವಹಿಸುವ ಸಾಧ್ಯತೆಯಿದೆ. ಇನ್ನು ಮತ್ತೊಂದು ನೆರೆಯ ರಾಷ್ಟ್ರವಾದ ಬಾಂಗ್ಲಾದೇಶ ತಂಡವು ತನ್ನ ಪಾಲಿನ ಬಹುತೇಕ ಪಂದ್ಯಗಳನ್ನು ಕೋಲ್ಕತಾದ ಈಡನ್‌ ಗಾರ್ಡನ್ಸ್ ಹಾಗೂ ಅಸ್ಸಾಂನ ಗುವಾಹಟಿಯಲ್ಲಿ ಆಡುವ ಸಾಧ್ಯತೆಯಿದೆ. ಬಾಂಗ್ಲಾದೇಶದ ಅಭಿಮಾನಿಗಳಿಗೆ ಈ ಎರಡು ಸ್ಟೇಡಿಯಂ ಹತ್ತಿರದಲ್ಲಿರುವುದರಿಂದ ಈ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.