Asianet Suvarna News Asianet Suvarna News

Asia Cup 2023: ಪಾಕಿಸ್ತಾನದಲ್ಲೇ ಟೂರ್ನಿ, ಆದ್ರೂ ಪಾಕ್‌ಗೆ ಹೋಗದೆ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ ಟೀಂ ಇಂಡಿಯಾ..!

2023ರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಪಾಕಿಸ್ತಾನ ಆತಿಥ್ಯ
ಆದರೂ ಪಾಕ್‌ಗೆ ತೆರಳದೇ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ ಟೀಂ ಇಂಡಿಯಾ
ಭಾರತದ ಪಂದ್ಯಗಳು ತಟಸ್ಥ ಸ್ಥಳದಲ್ಲಿ ಆಯೋಜನೆ

Pakistan To Host Asia Cup 2023 Tournament But India Matches At Neutral Venue Says report kvn
Author
First Published Mar 25, 2023, 10:03 AM IST

ನವದೆಹಲಿ(ಮಾ.25): 2023ರ ಏಷ್ಯಾಕಪ್‌ ಏಕದಿನ ಕ್ರಿಕೆಟ್‌ ಟೂರ್ನಿ ಪೂರ್ವನಿಗದಿಯಂತೆ ಪಾಕಿಸ್ತಾನದಲ್ಲೇ ನಡೆಯಲಿದ್ದು, ಭಾರತದ ಪಂದ್ಯಗಳು ಮಾತ್ರ ತಟಸ್ಥ ಸ್ಥಳದಲ್ಲಿ ಆಯೋಜನೆಗೊಳ್ಳಲಿದೆ ಎಂದು ಪ್ರತಿಷ್ಠಿತ ಕ್ರಿಕೆಟ್‌ ವೆಬ್‌ಸೈಟ್‌ವೊಂದು ವರದಿ ಮಾಡಿದೆ. ಈ ಸಂಬಂಧ ಬಿಸಿಸಿಐ ಹಾಗೂ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) ಒಪ್ಪಂದ ಮಾಡಿಕೊಂಡಿದ್ದು, ಭಾರತದ ಪಂದ್ಯಗಳನ್ನು ಎಲ್ಲಿ ನಡೆಸಬೇಕು ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ.

ಭಾರತ ಹಾಗೂ ಪಾಕಿಸ್ತಾನ ತಂಡಗಳು ಅರ್ಹತಾ ಸುತ್ತಿನಲ್ಲಿ ಗೆಲ್ಲುವ ತಂಡದೊಂದಿಗೆ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ. ಮತ್ತೊಂದು ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಆಫ್ಘಾನಿಸ್ತಾನ ತಂಡಗಳಿವೆ. ಟೂರ್ನಿಯ ಮಾದರಿಯ ಪ್ರಕಾರ, ಗುಂಪು ಹಂತದಲ್ಲಿ ಪ್ರತಿ ತಂಡವು ಉಳಿದ 2 ತಂಡದ ವಿರುದ್ಧ ತಲಾ ಒಮ್ಮೆ ಸೆಣಸಲಿದ್ದು, ಗುಂಪಿನಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಸೂಪರ್‌-4 ಹಂತಕ್ಕೆ ಪ್ರವೇಶಿಸಲಿವೆ. ಅಲ್ಲಿ ಪ್ರತಿ ತಂಡವು ಉಳಿದ 3 ತಂಡಗಳ ವಿರುದ್ಧ ಒಮ್ಮೆ ಆಡಲಿದ್ದು, ಅಗ್ರ-2 ತಂಡಗಳು ಫೈನಲ್‌ಗೇರಲಿವೆ. ಭಾರತ ಹಾಗೂ ಪಾಕಿಸ್ತಾನ ನಡುವೆ ಕನಿಷ್ಠ 2 ಪಂದ್ಯ ನಡೆಯುವುದು ಬಹುತೇಕ ಖಚಿತ, ಎರಡೂ ತಂಡಗಳು ಫೈನಲ್‌ಗೇರಿದರೆ ಮೂರು ಬಾರಿ ಬದ್ಧವೈರಿಗಳ ಮುಖಾಮುಖಿ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ.

ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್‌ ಪಂದ್ಯಗಳು ಸೇರಿ ಭಾರತದ ಉಳಿದ ಪಂದ್ಯಗಳನ್ನು ಆಯೋಜಿಸಲು ಯುಎಇ, ಒಮಾನ್‌, ಶ್ರೀಲಂಕಾ ಹಾಗೂ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಗಳಿಗಳು ಸಹ ಆಸಕ್ತಿ ತೋರಿವೆ ಎನ್ನಲಾಗಿದ್ದು, ಪಂದ್ಯಗಳನ್ನು ಎಲ್ಲಿ ನಡೆಸಬೇಕು ಎನ್ನುವುದನ್ನು ಆತಿಥೇಯ ಪಿಸಿಬಿ ಹಾಗೂ ಏಷ್ಯಾ ಕ್ರಿಕೆಟ್‌ ಸಂಸ್ಥೆ(ಎಸಿಸಿ) ಇನ್ನೂ ನಿರ್ಧರಿಸಿಲ್ಲ.

2023ರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಒಟ್ಟು 13 ಪಂದ್ಯಗಳು ಜರುಗಲಿದ್ದು, ಇದರಲ್ಲಿ 6 ಲೀಗ್ ಪಂದ್ಯಗಳು, 6 ಸೂಪರ್ ಸಿಕ್ಸ್ ಪಂದ್ಯಗಳು ನಡೆಯಲಿದೆ. ಸೂಪರ್ 4 ಹಂತದಲ್ಲಿ 6 ಪಂದ್ಯಗಳು ನಡೆಯಲಿದ್ದು, ಸೂಪರ್ 4 ಹಂತದ ವೇಳೆಗೆ ಅಗ್ರ 2 ಸ್ಥಾನ ಪಡೆಯುವ ತಂಡಗಳು ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ.  

ಪಾಕಿಸ್ತಾನಕ್ಕೆ ತೆರಳುವ ಬಗ್ಗೆ ಬಿಸಿಸಿಐ ನಿರ್ಧರಿಸಲಿ: ಸಚಿವ ಅನುರಾಗ್ ಠಾಕೂರ್

ಕಳೆದ ವರ್ಷ ಯುಎಇನಲ್ಲಿ ನಡೆದ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದ್ದು ಕಂಡು ಬಂದಿತ್ತು. ಲೀಗ್ ಹಂತದಲ್ಲಿ ಭಾರತ ತಂಡವು ಪಾಕಿಸ್ತಾನ ವಿರುದ್ದ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು. ಇನ್ನು ಸೂಪರ್ 4 ಹಂತದಲ್ಲಿ ಭಾರತ ವಿರುದ್ದ ಪಾಕಿಸ್ತಾನ ವಿರುದ್ದ ಗೆಲುವಿನ ಕೇಕೆ ಹಾಕಿತು. ಪರಿಣಾಮ ಭಾರತ ಸೂಪರ್ 4 ಹಂತದಲ್ಲೇ ತನ್ನ ಅಭಿಯಾನವನ್ನು ಮುಗಿಸಿತ್ತು. ಇನ್ನು ಫೈನಲ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿ ಲಂಕಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಇನ್ನು 2013ರ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಕ್ರಿಕೆಟ್ ಸರಣಿ ನಡೆದಿಲ್ಲ. ಉಭಯ ರಾಷ್ಟ್ರಗಳು, ವಿಶ್ವಕಪ್, ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ಏಷ್ಯಾಕಪ್ ಟೂರ್ನಿಗಳಲ್ಲಿ ಮುಖಾಮುಖಿಯಾಗಿದೆ. ಭಾರತ ವಿರುದ್ಧ ದ್ವಿಪಕ್ಷೀಯ ಟೂರ್ನಿಗೆ ಪಾಕಿಸ್ತಾನ ಇನ್ನಿಲ್ಲದ ಪ್ರಯತ್ನ ನಡೆಸಿತ್ತು. ಐಸಿಸಿ ಮಟ್ಟದಲ್ಲಿ ಒತ್ತಡ ಹೇರುವ ಪ್ರಯತ್ನಕ್ಕೂ ಮುಂದಾಗಿತ್ತು. ಆದರೆ ಪಾಕಿಸ್ತಾನದ ಯಾವುದೇ ಪ್ರಯತ್ನಕ್ಕೆ ಬಿಸಿಸಿಐ ಸೊಪ್ಪು ಹಾಕಿಲ್ಲ. ಇದರ ನಡುವೆ ತಟಸ್ಥ ಸ್ಥಳದಲ್ಲಿ ದ್ವಿಪಕ್ಷೀಯ ಟೂರ್ನಿ ನಡೆಸಲು ಪಾಕಿಸ್ತಾನ ಮನವಿ ಮಾಡಿತ್ತು. ಈ ಮನವಿಯನ್ನೂ ಬಿಸಿಸಿಐ ತಿರಸ್ಕರಿಸಿತ್ತು.

Follow Us:
Download App:
  • android
  • ios