ಪಾಕಿಸ್ತಾನಕ್ಕೆ ತೆರಳುವ ಬಗ್ಗೆ ಬಿಸಿಸಿಐ ನಿರ್ಧರಿಸಲಿ: ಸಚಿವ ಅನುರಾಗ್ ಠಾಕೂರ್
2023ನೇ ಸಾಲಿನ ಏಷ್ಯಾಕಪ್ ಟೂರ್ನಿಗೆ ಪಾಕಿಸ್ತಾನ ಆತಿಥ್ಯ
ಪಾಕಿಸ್ತಾನಕ್ಕೆ ಪ್ರವಾಸ ಮಾಡಲು ಟೀಂ ಇಂಡಿಯಾ ಹಿಂದೇಟು
ಈ ಕುರಿತಂತೆ ಬಿಸಿಸಿಐ ಮೊದಲು ನಿರ್ಧಾರ ತೆಗೆದುಕೊಳ್ಳಲಿ ಎಂದ ಅನುರಾಗ್ ಠಾಕೂರ್
ನಾಗ್ಪುರ(ಮಾ.21): ಈ ವರ್ಷ ಸೆಪ್ಟೆಂಬರ್‌ನಲ್ಲಿ ನಡೆಯಬೇಕಿರುವ ಏಷ್ಯಾಕಪ್ ಏಕದಿನ ಟೂರ್ನಿಯಲ್ಲಿ ಆಡಲು ಪಾಕಿಸ್ತಾನಕ್ಕೆ ತೆರಳಬೇಕೋ ಬೇಡವೋ ಎನ್ನುವುದನ್ನು ಮೊದಲು ಬಿಸಿಸಿಐ ನಿರ್ಧರಿಸಲಿ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ಸಚಿವರ ಈ ಹೇಳಿಕೆ ಬಿಸಿಸಿಐ ಅನ್ನು ಇಕ್ಕಟ್ಟಿಗೆ ಸಿಲುಕಿಸಬಹುದು ಎನ್ನಲಾಗುತ್ತಿದೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಭಾರತ ತಂಡ ಏಷ್ಯಾಕಪ್‌ನಲ್ಲಿ ಆಡಲು ಪಾಕಿಸ್ತಾನಕ್ಕೆ ಪ್ರಯಾಣಿಸಬೇಕೋ ಬೇಡವೋ ಎನ್ನುವುದನ್ನು ಕೇಂದ್ರ ಗೃಹ ಸಚಿವಾಲಯ ತೀರ್ಮಾನಿಸಲಿದೆ ಎಂದಿದ್ದ ಠಾಕೂರ್, ಭಾನುವಾರ ಸುದ್ದಿಗಾರರ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಲಿಲ್ಲ. ‘ಪಾಕಿಸ್ತಾನಕ್ಕೆ ತಂಡವನ್ನು ಕಳುಹಿಸಬೇಕೋ, ಬೇಡವೋ ಎನ್ನುವ ಬಗ್ಗೆ ಮೊದಲು ಬಿಸಿಸಿಐ ಸ್ಪಷ್ಟತೆ ಕಂಡುಕೊಳ್ಳಲಿ ಆ ಬಳಿಕ ಕೇಂದ್ರ ಕ್ರೀಡಾ ಹಾಗೂ ಗೃಹ ಸಚಿವಾಲಯಗಳು ಅಂತಿಮ ನಿರ್ಧಾರ ಕೈಗೊಳ್ಳಲಿವೆ’ ಎಂದು ಠಾಕೂರ್ ಹೇಳಿದ್ದಾರೆ.
ಈ ವರ್ಷದ ಏಷ್ಯಾಕಪ್ ಆತಿಥ್ಯ ಹಕ್ಕು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಬಳಿ ಇದೆ. ಆತಿಥ್ಯ ಹಕ್ಕು ತನ್ನ ಕೈಜಾರದಂತೆ ನೋಡಿಕೊಳ್ಳಲು ನಿರ್ಧರಿಸಿರುವ ಪಿಸಿಬಿ, ಒಂದು ವೇಳೆ ಭಾರತ ತನ್ನ ದೇಶಕ್ಕೆ ಬರಲು ನಿರಾಕರಿಸಿದರೆ, ಭಾರತದ ಪಂದ್ಯಗಳನ್ನು ಯುಎಇನಲ್ಲಿ ನಡೆಸಲು ಚಿಂತಿಸಿದೆ ಎಂದು ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಏಕದಿನ ವಿಶ್ವಕಪ್‌ಗೆ ಸಿದ್ಧತೆ ದೃಷ್ಟಿಯಿಂದ ಏಷ್ಯಾಕಪ್‌ನ ಮಹತ್ವ ಹೆಚ್ಚಿದೆ.
ಏಷ್ಯಾಕಪ್ ಟೂರ್ನಿ ಈ ಬಾರಿ 50 ಓವರ್ ಮಾದರಿಯಲ್ಲಿ ನಡೆಯಲಿದ್ದು, ಇದೇ ವರ್ಷ ಸೆಪ್ಟಂಬರ್‌ನಲ್ಲ ಆಯೋಜಿಸಲಾಗುವುದು ಎಂದು ಎಸಿಸಿ ತಿಳಿಸಿತ್ತು. ಇದರ ಆತಿಥ್ಯ ಪಾಕ್ ಬಳಿ ಇದ್ದರೂ ಭದ್ರತಾ ಕಾರಣಗಳಿಂದಾಗಿ ತಮ್ಮ ತಂಡವನ್ನು ಅಲ್ಲಿಗೆ ಕಳುಹಿಸುವುದಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಈಗಾಗಲೇ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ತಟಸ್ಥ ಸ್ಥಳದಲ್ಲಿ ಟೂರ್ನಿ ನಡೆಸಿದರೆ ಮಾತ್ರ ಭಾರತ ಆಡಲಿದೆ ಎಂದು ಬಿಸಿಸಿಐ ಈಗಾಗಲೇ ಸ್ಪಷ್ಟಪಡಿಸಿದೆ.
ಸೂರ್ಯನನ್ನು ಬದಿಗಿಟ್ಟು ಸಂಜುಗೆ ಅವಕಾಶ ನೀಡಿ: ವಾಸೀಂ ಜಾಫರ್ ಆಗ್ರಹ
2023ರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಒಟ್ಟು 13 ಪಂದ್ಯಗಳು ಜರುಗಲಿದ್ದು, ಇದರಲ್ಲಿ 6 ಲೀಗ್ ಪಂದ್ಯಗಳು, 6 ಸೂಪರ್ ಸಿಕ್ಸ್ ಪಂದ್ಯಗಳು ನಡೆಯಲಿದೆ. ಸೂಪರ್ 4 ಹಂತದಲ್ಲಿ 6 ಪಂದ್ಯಗಳು ನಡೆಯಲಿದ್ದು, ಸೂಪರ್ 4 ಹಂತದ ವೇಳೆಗೆ ಅಗ್ರ 2 ಸ್ಥಾನ ಪಡೆಯುವ ತಂಡಗಳು ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ.
ಕಳೆದ ವರ್ಷ ಯುಎಇನಲ್ಲಿ ನಡೆದ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದ್ದು ಕಂಡು ಬಂದಿತ್ತು. ಲೀಗ್ ಹಂತದಲ್ಲಿ ಭಾರತ ತಂಡವು ಪಾಕಿಸ್ತಾನ ವಿರುದ್ದ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು. ಇನ್ನು ಸೂಪರ್ 4 ಹಂತದಲ್ಲಿ ಭಾರತ ವಿರುದ್ದ ಪಾಕಿಸ್ತಾನ ವಿರುದ್ದ ಗೆಲುವಿನ ಕೇಕೆ ಹಾಕಿತು. ಪರಿಣಾಮ ಭಾರತ ಸೂಪರ್ 4 ಹಂತದಲ್ಲೇ ತನ್ನ ಅಭಿಯಾನವನ್ನು ಮುಗಿಸಿತ್ತು. ಇನ್ನು ಫೈನಲ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿ ಲಂಕಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಅಮೆರಿಕದ ಟಿ20 ಲೀಗ್‌ನಲ್ಲಿ ಐಪಿಎಲ್‌ನ 4 ಫ್ರಾಂಚೈಸಿ!
ನ್ಯೂಯಾರ್ಕ್: ವಿಶ್ವದ ವಿವಿಧ ಟಿ20 ಲೀಗ್‌ಗಳಲ್ಲಿ ಬಂಡವಾಳ ಹೂಡಿಕೆ ಮಾಡುತ್ತಿರುವ ಐಪಿಎಲ್ ಫ್ರಾಂಚೈಸಿಗಳು, ಇದೀಗ ಅಮೆರಿಕದಲ್ಲಿ ಆರಂಭಗೊಳ್ಳುತ್ತಿರುವ ಮೇಜರ್ ಲೀಗ್ ಕ್ರಿಕೆಟ್(ಎಂಎಲ್‌ಸಿ) ಟಿ20 ಲೀಗ್‌ನಲ್ಲೂ ತಂಡ ಖರೀದಿಸಲು ಯಶಸ್ವಿಯಾಗಿದ್ದಾರೆ. ಟೂರ್ನಿಯ ಚೊಚ್ಚಲ ಆವೃತ್ತಿಯಲ್ಲಿ ಆಡಲಿರುವ 6 ತಂಡಗಳ ಪೈಕಿ 4 ತಂಡಗಳ ಮಾಲಿಕತ್ವ ಐಪಿಎಲ್ ಫ್ರಾಂಚೈಸಿಗಳ ಪಾಲಾಗಿದೆ.
ಲಾಸ್ ಏಂಜಲೀಸ್ ತಂಡವನ್ನು ಕೆಕೆಆರ್ ಫ್ರಾಂಚೈಸಿ ಖರೀದಿಸಿದರೆ, ನ್ಯೂಯಾರ್ಕ್ನ ತಂಡವು ಮುಂಬೈ ಇಂಡಿಯನ್ಸ್ ಪಾಲಾಗಿದೆ. ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಜೊತೆ ಸೇರಿ ಸಿಯಾಟಲ್ ತಂಡದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪಾಲುದಾರಿಕೆ ಪಡೆದರೆ, ಟೆಕ್ಸಾಸ್ ತಂಡಕ್ಕೆ ಚೆನ್ನೈ ಸೂಪರ್ ಕಿಂಗ್‌್ಸ ಫ್ರಾಂಚೈಸಿಯು ಮಾಲಿಕರಾಗಿದ್ದಾರೆ. ಇನ್ನುಳಿದ 2 ತಂಡಗಳಾದ ಸ್ಯಾನ್ ಫ್ರಾನ್ಸಿಸ್ಕೋ, ವಾಷಿಂಗ್ಟನ್‌ಗೂ ಭಾರತೀಯ ಮೂಲದವರೇ ಮಾಲಿಕರಾಗಿದ್ದಾರೆ. ಚೊಚ್ಚಲ ಆವೃತ್ತಿಯು ಈ ವರ್ಷ ಜುಲೈ 13ರಿಂದ ಆರಂಭಗೊಳ್ಳಲಿದೆ. ಕ್ವಿಂಟನ್ ಡಿ ಕಾಕ್, ಆರೋನ್ ಫಿಂಚ್, ವನಿಂದು ಹಸರಂಗ ಸೇರಿ ಅನೇಕ ತಾರಾ ಕ್ರಿಕೆಟಿಗರು ಪಾಲ್ಗೊಳ್ಳಲಿದ್ದಾರೆ.