Asianet Suvarna News Asianet Suvarna News

ಪಾಕ್‌ ಮಾಜಿ ನಾಯಕ ಶಾಹಿದ್ ಅಫ್ರಿದಿ ಮಗಳ ಕೈಹಿಡಿದ ಶಾಹೀನ್ ಅಫ್ರಿದಿ..! ವಿಡಿಯೋ ವೈರಲ್‌

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪಾಕ್ ವೇಗಿ ಶಾಹೀನ್ ಅಫ್ರಿದಿ
ಶಾಹಿದ್ ಅಫ್ರಿದಿ ಮಗಳೊಂದಿಗೆ ವಿವಾಹವಾದ 22 ವರ್ಷದ ಶಾಹೀನ್ ಅಫ್ರಿದಿ
ವಿವಾಹದಲ್ಲಿ ಪಾಕ್‌ನ ಹಲವು ತಾರಾ ಕ್ರಿಕೆಟಿಗರು ಭಾಗಿ

Pakistan Pacer Shaheen Afridi Gets Married To Shahid Afridi Daughter Ansha In Karachi video goes viral kvn
Author
First Published Feb 4, 2023, 9:44 AM IST

ಕರಾಚಿ(ಫೆ.04): ಪಾಕಿಸ್ತಾನ ಕ್ರಿಕೆಟ್ ತಂಡದ ಮಾರಕ ವೇಗಿ ಶಾಹೀನ್ ಅಫ್ರಿದಿ, ಶುಕ್ರವಾರ ಪಾಕ್ ಮಾಜಿ ನಾಯಕ ಶಾಹಿದ್ ಅಫ್ರಿದಿ ಪುತ್ರಿ ಅನ್ಷಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಕರಾಚಿಯಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಶಾಹೀನ್ ಅಫ್ರಿದಿ, ತಮ್ಮ ಸಂಬಂಧಿ ಅನ್ಷಾ ಅವರನ್ನು ವಿವಾಹವಾಗಿದ್ದಾರೆ. ಈ ಸಂದರ್ಭದಲ್ಲಿ ಪಾಕಿಸ್ತಾನ ನಾಯಕ ಬಾಬರ್ ಅಜಂ ಸೇರಿದಂತೆ ಹಲವು ಪಾಕಿಸ್ತಾನ ಕ್ರಿಕೆಟಿಗರು ಪಾಲ್ಗೊಂಡಿದ್ದರು.

ಶಾಹೀನ್ ಅಫ್ರಿದಿ ಕಳೆದ ವರ್ಷವಷ್ಟೇ, ಶಾಹಿದ್ ಅಫ್ರಿದಿ ಪುತ್ರಿ ಅನ್ಷಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಪಾಕಿಸ್ತಾನ ಸೂಪರ್ ಲೀಗ್(ಪಿಎಸ್‌ಎಲ್) ಟೂರ್ನಿಯ ಲಾಹೋರ್ ಖಲಂದರ್ ಫ್ರಾಂಚೈಸಿಯು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶಾಹೀನ್ ಅಫ್ರಿದಿ ಅವರ ವಿವಾಹದ ಫೋಟೋಗಳನ್ನು ಹಂಚಿಕೊಂಡಿದ್ದು, ಶಾಹೀನ್ ಅಫ್ರಿದಿಯ ಮದುವೆಯ ಫೋಟೋಗಳು ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿವೆ. ಶಾಹೀನ್ ಅಫ್ರಿದಿ ಮದುವೆಯಲ್ಲಿ ನಾಯಕ ಬಾಬರ್ ಅಜಂ ಮಾತ್ರವಲ್ಲದೇ, ಮಾಜಿ ನಾಯಕ ಸರ್ಫರಾಜ್ ಖಾನ್, ಶಾದಾಬ್ ಖಾನ್ ಹಾಗೂ ನಸೀಮ್ ಶಾ ಕೂಡಾ ಪಾಲ್ಗೊಂಡಿದ್ದರು.

ಲಾಹೋರ್ ಖಲಂದರ್ ಫ್ರಾಂಚೈಸಿಯು, ತಂಡದ ನಾಯಕ ಶಾಹೀನ್ ಅಫ್ರಿದಿಗೆ ಎಂದೆಂದಿಗೂ ನಿಮ್ಮ ದಾಂಪತ್ಯ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿ ಟ್ವೀಟ್ ಮಾಡಿದೆ. ಇನ್ನು ಮತ್ತೊಂದು ಟ್ವೀಟ್‌ನಲ್ಲಿ ಲಾಹೋರ್ ಖಲಂದರ್ ಫ್ರಾಂಚೈಸಿಯು ವಿಡಿಯೋವೊಂದನ್ನು ಹಂಚಿಕೊಂಡಿದ್ದು, ವಿವಾಹಕ್ಕೆ ಶಾಹೀನ್ ಅಫ್ರಿದಿ ತಮ್ಮ ಒಪ್ಪಿಗೆ ಸೂಚಿಸುವ ದೃಶ್ಯಾವಳಿಗಳು ಕಂಡು ಬಂದಿವೆ.

ಶಾಹೀನ್ ಅಫ್ರಿದಿ, ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಕೊನೆಯ ಬಾರಿಗೆ ಮೈದಾನದಲ್ಲಿ ಕಾಣಿಸಿಕೊಂಡಿದ್ದರು. ಫೈನಲ್‌ ವೇಳೆಯಲ್ಲಿಯೇ ಮೊಣಕಾಲಿನ ಗಾಯಕ್ಕೊಳಗಾಗಿದ್ದ ಶಾಹೀದ್ ಅಫ್ರಿದಿ, ಕಳೆದ ಕೆಲ ತಿಂಗಳುಗಳಿಂದ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದಾರೆ. ಇದೀಗ ಶಾಹೀನ್ ಅಫ್ರಿದಿ, ತಮ್ಮ ಮದುವೆಗೂ ಮುನ್ನ ಸಂಪೂರ್ಣ ಫಿಟ್ನೆಸ್ ಸಾಧಿಸಿದ್ದು, 8ನೇ ಆವೃತ್ತಿಯ ಪಾಕಿಸ್ತಾನ ಸೂಪರ್‌ ಲೀಗ್ ಟೂರ್ನಿಗೂ ಮುನ್ನ ನೆಟ್ಸ್‌ನಲ್ಲಿ ಬೆವರು ಹರಿಸಿರುವ ವಿಡಿಯೋಗಳು ಸಾಕಷ್ಟು ಗಮನ ಸೆಳೆದಿವೆ.

'ಪಾಕಿಸ್ತಾನವನ್ನು ನೋಡಿ ಭಾರತ ತನ್ನ ಬೌಲಿಂಗ್ ಪಡೆಯನ್ನು ಸಜ್ಜುಗೊಳಿಸಿದೆ'

ಎಂಟನೇ ಆವೃತ್ತಿಯ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯು ಫೆಬ್ರವರಿ 13ರಿಂದ ಆರಂಭವಾಗಲಿದ್ದು, ಹಾಲಿ ಚಾಂಪಿಯನ್‌ ಲಾಹೋರ್ ಖಲಂದರ್ಸ್‌ ತಂಡವು ಮುಲ್ತಾನ್ ಸುಲ್ತಾನ್ಸ್ ಎದುರು ಮೊದಲ ಪಂದ್ಯವನ್ನಾಡಲಿದೆ. ಏಳನೇ ಆವೃತ್ತಿಯ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ ಶಾಹೀನ್ ಅಫ್ರಿದಿ ನೇತೃತ್ವದ ಲಾಹೋರ್ ಖಲಂದರ್ಸ್‌ ತಂಡವು ಚೊಚ್ಚಲ ಬಾರಿಗೆ ಪಿಎಸ್‌ಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಟೂರ್ನಿಯಲ್ಲಿ ಶಾಹೀನ್ ಅಫ್ರಿದಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಿನ ಪ್ರದರ್ಶನ ತೋರುವ ಮೂಲಕ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದರು.

 

Follow Us:
Download App:
  • android
  • ios