ಸೂರ್ಯಕುಮಾರ್ ಯಾದವ್ ಚಿಕ್ಕವನಿದ್ದಾಗ ನನ್ನ ಬ್ಯಾಟಿಂಗ್ ನೋಡಿಲ್ಲ ಅನ್ಸತ್ತೆ: ರಾಹುಲ್ ದ್ರಾವಿಡ್
ಲಂಕಾ ಎದುರು ಸ್ಪೋಟಕ ಶತಕ ಚಚ್ಚಿದ ಸೂರ್ಯಕುಮಾರ್ ಯಾದವ್
ಸೂರ್ಯ ಬ್ಯಾಟಿಂಗ್ ಗುಣಗಾನ ಮಾಡಿದ ಹೆಡ್ ಕೋಚ್ ದ್ರಾವಿಡ್
ಲಂಕಾ ಎದುರು ಟಿ20 ಸರಣಿ ಗೆದ್ದು ಬೀಗಿದ ಟೀಂ ಇಂಡಿಯಾ
ರಾಜ್‌ಕೋಟ್(ಜ.08): ಸದ್ಯ ಆಧುನಿಕ ಕ್ರಿಕೆಟ್‌ನಲ್ಲಿ ಚುಟುಕು ಕ್ರಿಕೆಟ್ ಅನ್ನು ಅಕ್ಷರಶಃ ಆಳುತ್ತಿರುವ ಸೂರ್ಯಕುಮಾರ್ ಯಾದವ್, ಇದೀಗ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಮೂರನೇ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಚುಟುಕು ಕ್ರಿಕೆಟ್‌ನಲ್ಲಿ ಲೀಲಾಜಾಲವಾಗಿ ರನ್ ಗಳಿಸುತ್ತಿರುವ ಸೂರ್ಯಕುಮಾರ್ ಯಾದವ್, ಎದುರಾಳಿ ತಂಡದ ಬೌಲಿಂಗ್ ಪಡೆಯನ್ನು ಕನಸಿನಲ್ಲಿಯೂ ಕಾಡುತ್ತಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು.
ರಾಜ್‌ಕೋಟ್‌ನಲ್ಲಿ ಲಂಕಾ ವಿರುದ್ದ ನಡೆದ ಮೂರನೇ ಹಾಗೂ ನಿರ್ಣಾಯಕ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಕೇವಲ 51 ಎಸೆತಗಳಲ್ಲಿ ಅಜೇಯ 112 ರನ್ ಸಿಡಿಸುವ ಮೂಲಕ ಮತ್ತೊಮ್ಮೆ ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದ್ದಾರೆ. ಇದೀಗ ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್, ಮಿಸ್ಟರ್ 360 ಖ್ಯಾತಿಯ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಕುರಿತಂತೆ ಹಾಸ್ಯಮಯವಾಗಿ ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನ ಮಾಡಿದ್ದಾರೆ.
ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಮೂರನೇ ಟಿ20 ಪಂದ್ಯ ಮುಕ್ತಾಯದ ಬಳಿಕ ಸೂರ್ಯಕುಮಾರ್ ಯಾದವ್ ಹಾಗೂ ರಾಹುಲ್ ದ್ರಾವಿಡ್ ಮನಬಿಚ್ಚಿ ಮಾತನಾಡಿದ್ದಾರೆ. ಈ ವಿಡಿಯೋವನ್ನು ಬಿಸಿಸಿಐ ಬಿಡುಗಡೆ ಮಾಡಿದ್ದು, ಆ ವಿಡಿಯೋದಲ್ಲಿ ರಾಹುಲ್ ದ್ರಾವಿಡ್, ಸೂರ್ಯಕುಮಾರ್ ಯಾದವ್ ಅವರನ್ನು ಉದ್ದೇಶಿಸಿ, ನೀವು ಚಿಕ್ಕವರಾಗಿದ್ದಾಗ, ನಾನು ಬ್ಯಾಟಿಂಗ್ ಮಾಡುವ ರೀತಿಯನ್ನು ನೋಡಿಲ್ಲವೇನೋ ಎಂದು ಕಾಲೆಳೆದಿದ್ದಾರೆ. 'ದ ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್, ತಾವು ಕ್ರಿಕೆಟ್ ಆಡುವ ಸಂದರ್ಭದಲ್ಲಿ ರಕ್ಷಣಾತ್ಮಕ ಆಟಕ್ಕೆ ಅನ್ವರ್ಥಕನಾಮ ಎನ್ನುವಂತಿದ್ದರು. ಆದರೆ ಇದೀಗ ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ಇದಕ್ಕೆ ವ್ಯತಿರಿಕ್ತ ಎನ್ನುವಂತಿರುವುದರ ಬಗ್ಗೆ ತಮಾಷೆ ಮಾಡಿದ್ದಾರೆ.
Ind vs SL ಟಿ20ಯಲ್ಲಿ ವೇಗದ 1500 ರನ್: ಸೂರ್ಯಕುಮಾರ್ ಯಾದವ್ ದಾಖಲೆ!
" ನನ್ನ ಜತೆ ಇರುವ ಇವರು, ಚಿಕ್ಕವರಿದ್ದಾಗ ನನ್ನ ಬ್ಯಾಟಿಂಗ್ ನೋಡಿಲ್ಲವೆಂದುಕೊಳ್ಳುತ್ತೇನೆ. ನೀವು ಇಂದು ಅದ್ಭುತವಾಗಿ ಆಡಿದಿರ. ಇದರ ಜತೆಗೆ ಅತ್ಯುತ್ತಮ ಫಾರ್ಮ್ ಅನ್ನು ನೀವು ಹೊಂದಿದ್ದೀರ. ಪ್ರತಿ ಬಾರಿಯು ನಾನು ನನ್ನ ನಿಮ್ಮಿಂದ ಅತ್ಯುತ್ತಮ ಟಿ20 ಇನಿಂಗ್ಸ್‌ಗಳನ್ನು ನೋಡುತ್ತಲೇ ಇದ್ದೇನೆ. ಇಂದು ನೀವು ಮತ್ತೊಮ್ಮೆ ಅದ್ಭುತ ಪ್ರದರ್ಶನವನ್ನು ನೀಡಿದಿರಿ ಎಂದು ರಾಹುಲ್ ದ್ರಾವಿಡ್, ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಗುಣಗಾನ ಮಾಡಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲಿಳಿದ ಭಾರತ ಇಶಾನ್ ಕಿಶನ್ ವಿಕೆಟನ್ನು ಬೇಗನೆ ಕಳೆದುಕೊಂಡಿತು. ಮತ್ತೊಂದೆಡೆ ಗಿಲ್ ಖಾತೆ ತೆರೆಯಲೇ 10 ಎಸೆತ ತೆಗೆದುಕೊಂಡರು. ಆದರೆ 3ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ರಾಹುಲ್ ತ್ರಿಪಾಠಿ ತಂಡ ಪವರ್-ಪ್ಲೇ ಮುಗಿಯುವ ವೇಳೆಗೆ 53 ರನ್ ಗಳಿಸುವಂತೆ ಮಾಡಿದರು. 16 ಎಸೆತದಲ್ಲಿ 35 ರನ್ ಸಿಡಿಸಿದರು. ಸೂರ್ಯಕುಮಾರ್‌ರ ಆಟ ಗಿಲ್‌ರ ನಿಧಾನಗತಿ ಬ್ಯಾಟಿಂಗ್ ತಂಡಕ್ಕೆ ತಲೆನೋವಾಗದಂತೆ ನೋಡಿಕೊಂಡಿತು. 10 ಓವರ್‌ಗೆ 92 ರನ್ ಗಳಿಸಿದ ಭಾರತ, 11ನೇ ಓವರಲ್ಲಿ 100 ರನ್ ದಾಟಿತು.
ಸೂರ್ಯ ಜೊತೆ 111 ರನ್ ಜೊತೆಯಾಟದಲ್ಲಿ ಭಾಗಿಯಾದ ಗಿಲ್(36 ಎಸೆತದಲ್ಲಿ 46 ರನ್) 15ನೇ ಓವರಲ್ಲಿ ಔಟಾದರು. ಪಾಂಡ್ಯ(04), ಹೂಡಾ(04) ದೊಡ್ಡ ಕೊಡುಗೆ ನೀಡದಿದ್ದರೂ ಸೂರ್ಯಗೆ ಅಕ್ಷರ್ ಪಟೇಲ್ ಜೊತೆಯಾದರು. 45 ಎಸೆತದಲ್ಲಿ ಶತಕ ಪೂರೈಸಿದ ಸೂರ್ಯಕುಮಾರ್ ಯಾದವ್ 51 ಎಸೆತದಲ್ಲಿ 7 ಬೌಂಡರಿ, 9 ಸಿಕ್ಸರ್‌ನೊಂದಿಗೆ 112 ರನ್ ಗಳಿಸಿ ಔಟಾಗದೆ ಉಳಿದರು. ಅಕ್ಷರ 9 ಎಸೆತದಲ್ಲಿ 21 ರನ್ ಚಚ್ಚಿದರು.
ಇನ್ನು ಭಾರತ ನೀಡಿದ್ದ 228 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡವು, ಟೀಂ ಇಂಡಿಯಾ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸುವ ಮೂಲಕ ಕೇವಲ 16.4 ಓವರ್‌ಗಳಲ್ಲಿ 137 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಲಂಕಾ ಎದುರು ಟೀಂ ಇಂಡಿಯಾ 91 ರನ್ ಅಂತರದ ಗೆಲುವು ಸಾಧಿಸುವ ಮೂಲಕ 3 ಪಂದ್ಯಗಳ ಟಿ20 ಸರಣಿಯನ್ನು 2-1 ಅಂತರದಲ್ಲಿ ಕೈವಶ ಮಾಡಿಕೊಂಡಿತು.