ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್ ಅಮೀರ್, ಮುಂದಿನ ವರ್ಷ ಬ್ರಿಟನ್ ಪೌರತ್ವ ಪಡೆದು ಐಪಿಎಲ್ ಆಡುವ ಗುರಿ ಹೊಂದಿದ್ದಾರೆ. ಆರ್​ಸಿಬಿ ಪರ ಆಡಲು ಇಚ್ಛಿಸಿದ್ದಾರೆ. ಮತ್ತೊಂದೆಡೆ, ಮುಂಬೈ ಇಂಡಿಯನ್ಸ್‌ನ ಜಸ್‌ಪ್ರೀತ್‌ ಬುಮ್ರಾ ಬೆನ್ನು ನೋವಿನಿಂದಾಗಿ ಐಪಿಎಲ್‌ನ ಆರಂಭಿಕ ಎರಡು ವಾರಗಳ ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆಯಿದೆ. ಅವರು ಏಪ್ರಿಲ್‌ನಲ್ಲಿ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಿದೆ.

ಕರಾಚಿ: ಮುಂದಿನ ವರ್ಷ ಐಪಿಎಲ್‌ನಲ್ಲಿ ಆಡುವ ಗುರಿ ಇಟ್ಟುಕೊಂಡಿದ್ದೇನೆ ಎಂದು ಪಾಕಿಸ್ತಾನದ ಮಾಜಿ ವೇಗಿ ಮೊಹಮದ್‌ ಅಮೀರ್‌ ಹೇಳಿಕೊಂಡಿದ್ದಾರೆ. ಅಮೀರ್‌ರ ಪತ್ನಿ ನರ್ಜಿಸ್‌ ಬ್ರಿಟನ್‌ ಪ್ರಜೆ. ಹೀಗಾಗಿ, ಮುಂದಿನ ವರ್ಷ ಅಮೀರ್‌ ಕೂಡ ಬ್ರಿಟನ್‌ ಪೌರತ್ವ ಗಳಿಸುವ ನಿರೀಕ್ಷೆ ಇಟ್ಟುಕೊಂಡಿದ್ದು, ಆ ಮೂಲಕ ಐಪಿಎಲ್‌ನಲ್ಲಿ ಅವಕಾಶಕ್ಕಾಗಿ ಪ್ರಯತ್ನಿಸುತ್ತೇನೆ ಎಂದಿದ್ದಾರೆ.

ಯುಟ್ಯೂಬ್ ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಅಮೀರ್‌, ‘ ಮುಂದಿನ ವರ್ಷದ ಹೊತ್ತಿಗೆ ನನಗೆ ಐಪಿಎಲ್‌ನಲ್ಲಿ ಆಡಲು ಅವಕಾಶ ಸಿಗುತ್ತದೆ. ಅವಕಾಶ ಸಿಕ್ಕರೆ ಏಕೆ ಬೇಡ ಎನ್ನಲಿ. ಪಾಕಿಸ್ತಾನಿ ಕ್ರಿಕೆಟಿಗರನ್ನು ಐಪಿಎಲ್‌ನಲ್ಲಿ ನಿಷೇಧಿಸಲಾಗಿತ್ತು. ಆದರೆ ನಮ್ಮ ಮಾಜಿ ಕ್ರಿಕೆಟಿಗರು ವೀಕ್ಷಕ ವಿವರಣೆ ನೀಡುತ್ತಿದ್ದರು. ಫ್ರಾಂಚೈಸಿಯ ತರಬೇತುದಾರರು ಆಗಿದ್ದರು’ ಎಂದಿದ್ದಾರೆ. 

ಇದೇ ಅಮೀರ್‌ ರಾಯಲ್ ಚಾಲೆಂಜರ್ಸ್‌ ಬೆಂಗಳೂರು(ಆರ್‌ಸಿಬಿ) ಪರ ಆಡಲು ಇಷ್ಟಪಡುತ್ತೇನೆ ಎಂದಿದ್ದಾರೆ. 2008ರಲ್ಲಿ ಪಾಕಿಸ್ತಾನದ ಆಟಗಾರರು ಐಪಿಎಲ್‌ನಲ್ಲಿ ಆಡುವುದಕ್ಕೆ ನಿಷೇಧವಿದೆ. ಅಮೀರ್‌ ಪತ್ನಿ ಬ್ರಿಟನ್ ಪ್ರಜೆಯಾಗಿದ್ದು, ಅವರು ಶೀಘ್ರದಲ್ಲೇ ಆ ದೇಶದ ಪಾಸ್ಪೋರ್ಟ್‌ ಪಡೆಯಲಿದ್ದು, ಹೀಗಾಗಿ ಐಪಿಎಲ್‌ನಲ್ಲಿ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಐಪಿಎಲ್‌: ಮೊದಲೆರಡು ವಾರ ಬುಮ್ರಾ ಅಲಭ್ಯ?

ನವದೆಹಲಿ: ಮುಂಬೈ ಇಂಡಿಯನ್ಸ್‌ನ ತಾರಾ ವೇಗಿ ಜಸ್‌ಪ್ರೀತ್‌ ಬುಮ್ರಾ ಐಪಿಎಲ್‌ 18ನೇ ಆವೃತ್ತಿಯ ಮೊದಲೆರೆಡು ವಾರಗಳಿಗೆ ಅಲಭ್ಯರಾಗುವ ಸಾಧ್ಯತೆ ಇದೆ. ಬೆನ್ನು ನೋವಿನಿಂದ ಚೇತರಿಸಿಕೊಳ್ಳುತ್ತಿರುವ ಬುಮ್ರಾ, ಬೆಂಗಳೂರಿನ ಎನ್‌ಸಿಎನಲ್ಲಿ ಬೌಲಿಂಗ್ ಅಭ್ಯಾಸ ಆರಂಭಿಸಿದ್ದಾರಾದರೂ, ಸಂಪೂರ್ಣವಾಗಿ ಫಿಟ್‌ ಆಗಲು ಇನ್ನೂ ಕೆಲ ಸಮಯ ಬೇಕಾಗಬಹುದು ಎನ್ನಲಾಗಿದೆ. 

ಮಾರ್ಚ್ 22ರಿಂದ ಐಪಿಎಲ್‌ ಆರಂಭಗೊಳ್ಳಲಿದ್ದು, ಬುಮ್ರಾ ಏಪ್ರಿಲ್‌ನಲ್ಲಿ ಕಣಕ್ಕಿಳಿಯಬಹುದು ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.