ಸರ್ಕಾರ ಒಪ್ಪಿದರಷ್ಟೇ ಏಕದಿನ ವಿಶ್ವಕಪ್ ಆಡಲು ಪಾಕ್ ತಂಡ ಭಾರತಕ್ಕೆ: ಪಿಸಿಬಿ ಹೊಸ ತಗಾದೆ
* ಏಕದಿನ ವಿಶ್ವಕಪ್ ಟೂರ್ನಿಯ ಕುರಿತಾಗಿ ಹೊಸ ತಗಾದೆ ತೆಗೆದ ಪಾಕಿಸ್ತಾನ
* ಪಾಕ್ ಸರ್ಕಾರ ಒಪ್ಪಿಸದರಷ್ಟೇ ನಾವು ಭಾರತ ಪ್ರವಾಸ ಮಾಡುತ್ತೇವೆಂದ ಪಿಸಿಬಿ
* ಇನ್ನೂ ಅಧಿಕೃತವಾಗಿ ಪ್ರಕಟಗೊಳ್ಳದ ಏಕದಿನ ವಿಶ್ವಕಪ್ ವೇಳಾಪಟ್ಟಿ
ಲಾಹೋರ್(ಜೂ.17): ಏಷ್ಯಾಕಪ್ ಹೈಬ್ರಿಡ್ ಮಾದರಿಗೆ ಬಿಸಿಸಿಐ ಒಪ್ಪಿಗೆ ನೀಡಿದ್ದರೂ ಪಾಕಿಸ್ತಾನ ತಂಡ ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಪಾಲ್ಗೊಳ್ಳುವುದು ಇನ್ನೂ ಖಚಿತಗೊಂಡಿಲ್ಲ. ಈ ಬಗ್ಗೆ ಸ್ವತಃ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಅಧ್ಯಕ್ಷ ನಜಂ ಸೇಠಿ ಶುಕ್ರವಾರ ಮಾಹಿತಿ ನೀಡಿದ್ದು, ಸರ್ಕಾರ ಒಪ್ಪಿಗೆ ಸೂಚಿಸಿದರೆ ಮಾತ್ರ ವಿಶ್ವಕಪ್ ಆಡಲು ಭಾರತಕ್ಕೆ ತೆರಳಲಿದ್ದೇವೆ ಎಂದಿದ್ದಾರೆ.
‘ವಿಶ್ವಕಪ್ನ ವೇಳಾಪಟ್ಟಿ (ODI World Cup Schedule) ಪ್ರಕಟಗೊಂಡು, ನಮ್ಮ ಪಂದ್ಯಗಳು ನಿರ್ದಿಷ್ಟ ಕ್ರೀಡಾಂಗಣದಲ್ಲಿ ನಡೆಸಲು ತೀರ್ಮಾನಿಸಿದ್ದರೂ ನಾವು ಭಾರತಕ್ಕೆ ಹೋಗಬೇಕೇ ಬೇಡವೇ ಎಂಬುದನ್ನು ಸರ್ಕಾರವೇ ನಿರ್ಧರಿಸಲಿದೆ. ನಾವು ಅಹಮದಾಬಾದ್‌ನಲ್ಲಿ ಪಂದ್ಯ ಆಡುವುದಕ್ಕೂ ಸರ್ಕಾರ ಒಪ್ಪಿಗೆ ನೀಡಬೇಕು’ ಎಂದಿದ್ದಾರೆ. ಇದೇ ವೇಳೆ 2016ರ ಟಿ20 ವಿಶ್ವಕಪ್ನ ತಮ್ಮ ಪಂದ್ಯವನ್ನು ಧರ್ಮಶಾಲಾದಿಂದ ಕೋಲ್ಕತ್ತಾಕ್ಕೆ ಸ್ಥಳಾಂತರಿಸಿದ್ದನ್ನೂ ಅವರು ಉಲ್ಲೇಖಿಸಿದ್ದಾರೆ.
"ಭಾರತ ಕ್ರಿಕೆಟ್ ತಂಡವು (Indian Cricket Team) ಪಾಕಿಸ್ತಾನ ಪ್ರವಾಸ ಮಾಡುವುದಕ್ಕೆ ಆಗಲಿ, ಅಥವಾ ಪಾಕಿಸ್ತಾನ ಕ್ರಿಕೆಟ್ ತಂಡವು ಭಾರತ ಪ್ರವಾಸ ಮಾಡುವುದಕ್ಕೇ ಆಗಲಿ, ಪಿಸಿಬಿ ಅಥವಾ ಬಿಸಿಸಿಐ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ಇದರ ಬದಲಾಗಿ ಆಯಾ ದೇಶದ ಸರ್ಕಾರಗಳು ಏನು ಮಾಡಬೇಕು ಎನ್ನುವುದರ ಕುರಿತಾಗಿ ತೀರ್ಮಾನ ತೆಗೆದುಕೊಳ್ಳಲಿವೆ" ಎಂದು ಪಿಸಿಬಿ ಅಧ್ಯಕ್ಷ ನಜಂ ಸೇಠಿ ಹೇಳಿದ್ದಾರೆ.
ಅಕ್ಟೋಬರ್ 15ಕ್ಕೆ ಭಾರತ vs ಪಾಕ್ ಏಕದಿನ ವಿಶ್ವಕಪ್ ಕದನ..! ತಾತ್ಕಾಲಿಕ ವೇಳಾಪಟ್ಟಿ ಪ್ರಕಟ
ಭಾರತದ ರೀತಿಯಂತೆ ಪಾಕಿಸ್ತಾನ ತಂಡವು, ಭಾರತ ಪ್ರವಾಸದ ಕುರಿತಂತೆ ಅಂತಿಮವಾಗಿ ಪಾಕಿಸ್ತಾನ ಸರ್ಕಾರವು ತೀರ್ಮಾನ ತೆಗೆದುಕೊಳ್ಳಲಿದೆ. ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನಾವು ಪಾಲ್ಗೊಳ್ಳಬೇಕೇ ಅಥವಾ ಬೇಡವೇ ಎನ್ನುವ ಕುರಿತಂತೆ ಮೊದಲಿಗೆ ಸರ್ಕಾರ ತೀರ್ಮಾನಿಸಲಿದೆ. ಇದಾದ ಬಳಿಕವಷ್ಟೇ ನಾವು ಎಲ್ಲಿ ಆಡಬೇಕು ಅಥವಾ ಆಡಬಾರದು ಎನ್ನುವ ಕುರಿತಂತೆ ನಿರ್ಧರಿಸಲು ಸಾಧ್ಯ. ಹೀಗಾಗಿ ಅಹಮದಾಬಾದ್‌ನಲ್ಲಿ ಪಾಕಿಸ್ತಾನ ತಂಡವು ಕಣಕ್ಕಿಳಿಯಲಿದೆಯೇ ಅಥವಾ ಇಲ್ಲವೇ ಎನ್ನುವುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಅಧ್ಯಕ್ಷ ನಜಂ ಸೇಠಿ ಹೇಳಿದ್ದಾರೆ.
16ನೇ ಆವೃತ್ತಿಯ ಏಷ್ಯಾಕಪ್ ಕ್ರಿಕೆಟ್ ಟೂರ್ನಿ (Asia Cup Cricket Tournament) ಆಗಸ್ಟ್ 31ರಿಂದ ಸೆಪ್ಟೆಂಬರ್ 17ರ ವರೆಗೆ ನಡೆಯಲಿದ್ದು, ಪಾಕಿಸ್ತಾನ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯ ವಹಿಸಲಿವೆ. ಟೂರ್ನಿಯ ಹಕ್ಕು ಪಾಕಿಸ್ತಾನ ಬಳಿ ಇದ್ದರೂ ಭಾರತ ತಂಡ ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಏಷ್ಯಾ ಕ್ರಿಕೆಟ್ ಸಮಿತಿ(ಎಸಿಸಿ) ನಿರ್ಧರಿಸಿದೆ.
ಭಾರತ-ಪಾಕಿಸ್ತಾನ ನಡುವೆ 3 ಪಂದ್ಯ?
ಬದ್ಧವೈರಿಗಳಾದ ಭಾರತ, ಪಾಕಿಸ್ತಾನ ನಡುವೆ 3 ಪಂದ್ಯಗಳು ನಡೆಯುವ ಸಾಧ್ಯತೆಯಿದೆ. ಎರಡೂ ತಂಡಗಳು ಫೈನಲ್ ಪ್ರವೇಶಿಸಿದರೆ ಮಾತ್ರ ಇದು ಸಾಧ್ಯವಾಗಲಿದೆ. ಗುಂಪು ಹಂತದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿದ್ದು, ಸೂಪರ್-4 ಹಂತ ಪ್ರವೇಶಿಸಿದರೆ ಅಲ್ಲೂ ಪರಸ್ಪರ ಸೆಣಸಾಡಲಿದೆ. ಬಳಿಕ ಫೈನಲ್ಗೇರಿ ಮತ್ತೊಮ್ಮೆ ಮುಖಾಮುಖಿಯಾಗುವ ನಿರೀಕ್ಷೆಯಿದೆ.
ಇನ್ನು ಬಿಸಿಸಿಐ ಈಗಾಗಲೇ ಟೂರ್ನಿಯ ತಾತ್ಕಾಲಿಕ ವೇಳಾಪಟ್ಟಿ ಸಿದ್ಧಪಡಿಸಿ ಐಸಿಸಿಗೆ ನೀಡಿದೆ ಎನ್ನಲಾಗಿದ್ದು, ಶೀಘ್ರವೇ ಅಧಿಕೃವಾಗಿ ಪ್ರಕಟಗೊಳ್ಳುವ ನಿರೀಕ್ಷೆಯಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಅಕ್ಟೋಬರ್ 05ರಂದು ಏಕದಿನ ವಿಶ್ವಕಪ್ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ. ನವೆಂಬರ್ 15 ಮತ್ತು 16ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ಮುಂಬೈನ ವಾಂಖೇಡೆ ಹಾಗೂ ಚೆನ್ನೈನ ಚೆಪಾಕ್ ಕ್ರೀಡಾಂಗಣ ಆತಿಥ್ಯ ವಹಿಸಲಿವೆ. ಫೈನಲ್ ಪಂದ್ಯ ನವೆಂಬರ್ 19ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ. ಟೂರ್ನಿಯಲ್ಲಿ 10 ತಂಡಗಳು ಪಾಲ್ಗೊಳ್ಳಲಿದ್ದು, ಭಾರತ ಸೇರಿದಂತೆ 8 ತಂಡಗಳು ನೇರ ಅರ್ಹತೆ ಗಿಟ್ಟಿಸಿಕೊಂಡಿದೆ. ಇನ್ನೆರಡು ತಂಡಗಳು ಅರ್ಹತಾ ಸುತ್ತಿನ ಮೂಲಕ ಪ್ರಧಾನ ಸುತ್ತಿಗೇರಲಿವೆ.