ಪಾಕಿಸ್ತಾನದ ಮೂವರು ಸ್ಟಾರ್ ಕ್ರಿಕೆಟಿಗರಿಗೆ ಕೊರೋನಾ ಅಟ್ಯಾಕ್..!
ಮಾಜಿ ನಾಯಕ ಶಾಹಿದ್ ಅಫ್ರಿದಿಗೆ ಕೊರೋನಾ ಸೋಂಕು ದೃಢಪಟ್ಟ ಘಟನೆ ಮಾಸುವ ಮುನ್ನವೇ ಮತ್ತೆ ಮೂವರು ಪಾಕಿಸ್ತಾನ ಕ್ರಿಕೆಟಿಗರಿಗೆ ಕೋವಿಡ್ 19 ಸೋಂಕು ಅಂಟಿದೆ. ಯಾರವರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಕರಾಚಿ(ಜೂ.23): ಕೊರೋನಾ ಎನ್ನುವ ಹೆಮ್ಮಾರಿ ವೈರಸ್ ಇದೀಗ ಜಾಗತಿಕ ಪಿಡುಗಾಗಿ ಪರಿಣಮಿಸಿದೆ. ಕೊರೋನಾ ಜನಜೀವನವನ್ನು ಮಾತ್ರವಲ್ಲ ಕ್ರೀಡಾಜಗತ್ತಿನ ಮೇಲೂ ತನ್ನ ವಕ್ರದೃಷ್ಠಿ ಹಾಯಿಸಿದೆ.
ಹೌದು, ಇದೇ ಜೂನ್ 28ರಂದು ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲು ಸಜ್ಜಾಗುತ್ತಿರುವ ಪಾಕಿಸ್ತಾನ ತಂಡಕ್ಕೆ ಆಘಾತವೊಂದು ಎದುರಾಗಿದ್ದು, ತಂಡದ ಮೂವರು ತಾರಾ ಆಟಗಾರರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಪಾಕ್ ತಂಡದ ಪ್ರಮುಖ ಆಟಗಾರರಾದ ಶದಾಬ್ ಖಾನ್, ಹ್ಯಾರಿಸ್ ರೌಫ್ ಮತ್ತು ಹೈದರ್ ಅಲಿಗೆ ಕೊರೋನಾ ಸೋಂಕು ತಗುಲಿದೆ. ಈ ವಿಚಾರವನ್ನು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಖಚಿತಪಡಿಸಿದೆ.
ಈ ಮೂವರು ಆಟಗಾರರಲ್ಲಿ ಯಾವುದೇ ರೋಗದ ಲಕ್ಷಣ ಕಂಡುಬಂದಿರಲಿಲ್ಲ, ಭಾನುವಾರ ಪರೀಕ್ಷೆಗೊಳಪಡಿಸಿದಾಗ ಸೋಂಕು ಖಚಿತವಾಗಿದ್ದು, ಐಸೋಲೇಷನ್‌ನಲ್ಲಿಸಲಾಗಿದೆ. ಇನ್ನು ಇಮಾದ್ ವಾಸೀಂ ಹಾಗೂ ಉಸ್ಮಾನ್ ಶೆನ್ವಾರಿಯವರನ್ನು ಕೊರೋನಾ ಟೆಸ್ಟ್‌ಗೆ ಒಳಪಡಿಸಲಾಗಿತ್ತು. ಆದರೆ ಅವರ ರಿಪೋರ್ಟ್ ನೆಗೆಟಿವ್ ಬಂದಿದೆ. ಕೆಲವು ದಿನಗಳ ಹಿಂದಷ್ಟೇ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿಗೂ ಕೊರೋನಾ ಸೋಂಕು ತಗುಲಿರುವ ವಿಚಾರ ಬಯಲಾಗಿತ್ತು.
Breaking: ಪಾಕ್ ಮಾಜಿ ನಾಯಕ ಶಾಹಿದ್ ಅಫ್ರಿದಿ ಕೊರೋನಾ ಪಾಸಿಟಿವ್..!
ಪಾಕಿಸ್ತಾನ ತಂಡವು 3 ಟೆಸ್ಟ್ ಹಾಗೂ 3 ಟಿ20 ಪಂದ್ಯವನ್ನಾಡಲು ಇಂಗ್ಲೆಂಡ್ ಪ್ರವಾಸವನ್ನು ಕೈಗೊಳ್ಳಲಿದೆ. ಕಳೆದ ವಾರವಷ್ಟೇ ಹ್ಯಾರಿಸ್ ಸೋಹೆಲ್ ಹಾಗೂ ಅಮೀರ್ ಸೋಹೆಲ್ ಇಂಗ್ಲೆಂಡ್ ಪ್ರವಾಸದಿಂದ ಹಿಂದೆ ಸರಿದಿದ್ದರು. ಇದೀಗ ಮತ್ತೆ ಮೂವರು ಕ್ರಿಕೆಟಿಗರು ಕೊರೋನಾ ಸೋಂಕಿಗೆ ತುತ್ತಾಗಿರುವುದು ಪಾಕಿಸ್ತಾನ ತಂಡಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.