ಕರಾಚಿ(ಮೇ.08): ಕೋವಿಡ್ ಎರಡನೇ ಅಲೆಗೆ ಭಾರತ ಅಕ್ಷರಶಃ ನಲುಗಿ ಹೋಗಿದೆ. ಪ್ರತಿನಿತ್ಯ ಸುಮಾರು 4 ಲಕ್ಷಕ್ಕೂ ಅಧಿಕ ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗುತ್ತಿದ್ದು, ಸಾವಿರಾರು ಸಾವು-ನೋವುಗಳು ಸಂಭವಿಸುತ್ತಿವೆ. ಇಂತಹ ಸಂದರ್ಭದಲ್ಲಿ ಸಾಕಷ್ಟು ಭಾರತೀಯ ಹಾಗೂ ವಿದೇಶಿ ಆಟಗಾರರು ಭಾರತ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಇದರ ಜತೆಗೆ ಕೈಲಾದ ಆರ್ಥಿಕ ನೆರವನ್ನು ನೀಡುತ್ತಿದ್ದಾರೆ.

ಇದೀಗ ನೆರೆರಾಷ್ಟ್ರ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಮೊಹಮ್ಮದ್ ಆಮೀರ್ ಕೂಡಾ ಭಾರತದ ಮೇಲೆ ಕಾಳಜಿ ತೋರಿದ್ದಾರೆ. ಟ್ವೀಟ್‌ ಮೂಲಕ ವಿಡಿಯೋ ಸಂದೇಶ ರವಾನಿಸಿರುವ ಆಮೀರ್, ನೆರೆರಾಷ್ಟ್ರ ಭಾರತಕ್ಕಿದು ಪರೀಕ್ಷೆಯ ಕಾಲ. ಈ ಸಂಕಷ್ಟದಿಂದ ಆದಷ್ಟು ಬೇಗ ಭಾರತ ಪಾರಾಗಲಿ ಎಂದು ಪ್ರಾರ್ಥಿಸುತ್ತೇನೆಂದು ಆಮೀರ್ ಟ್ವೀಟ್ ಮಾಡಿದ್ದಾರೆ.

ನನ್ನ ಪ್ರಾರ್ಥನೆ ಭಾರತದ ಜತೆಗಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ನಾವೆಲ್ಲರೂ ನಿಮ್ಮ ಜತೆ ಇದ್ದೇವೆ. ಅಲ್ಲಾ ನಮ್ಮೆಲ್ಲರ ಮೇಲೆ ಕರುಣೆ ತೋರಲಿ ಎಂದು ಟ್ವೀಟ್ ಮಾಡಿದ್ದಾರೆ.

ಐಪಿಎಲ್ 2021: ಕೆಕೆಆರ್‌ ವಿಕೆಟ್ ಕೀಪರ್ ಟಿಮ್‌ ಸೈಫರ್ಟ್‌ಗೆ ಕೊರೋನಾ ಪಾಸಿಟಿವ್..!

ಈ ಮೊದಲು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಸಹಾ ಭಾರತದ ಸಂಕಷ್ಟ ಆದಷ್ಟು ಬೇಗ ಪರಿಹಾರವಾಗಲಿ. ಎಲ್ಲರೂ ಕಟ್ಟುನಿಟ್ಟಿನ ಸೂಚನೆಗಳನ್ನು ಪಾಲಿಸುವ ಮೂಲಕ ಕೊರೋನಾದಿಂದ ಪಾರಾಗೋಣ ಎಂದು ಟ್ವೀಟ್‌ ಮಾಡಿದ್ದರು. ಒಟ್ಟಿನಲ್ಲಿ ಪಾಕಿಸ್ತಾನದ ಕ್ರಿಕೆಟಿಗರು ಭಾರತದ ಮೇಲೆ ತೋರಿಸುತ್ತಿರುವ ಪ್ರೀತಿ-ಕಾಳಜಿಗಳು ಉಭಯ ದೇಶಗಳ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona