ಬಾಬರ್ ಅಜಂ ರಾಜೀನಾಮೆ ಬೆನ್ನಲ್ಲೇ, ಟಿ20, ಟೆಸ್ಟ್‌ಗೆ ಹೊಸ ನಾಯಕನ ಘೋಷಣೆ ಮಾಡಿದ ಪಾಕಿಸ್ತಾನ
ಕ್ರಿಕೆಟ್‌ನ ಮೂರೂ ಮಾದರಿಯ ತಂಡದ ನಾಯಕತ್ವಕ್ಕೆ ಬಾಬರ್ ಅಜಂ ರಾಜೀನಾಮೆ ನೀಡಿದ ಬೆನ್ನಲ್ಲಿಯೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಟೆಸ್ಟ್ ಹಾಗೂ ಟಿ20 ತಂಡಕ್ಕೆ ಹೊಸ ನಾಯಕನನ್ನು ಘೋಷಣೆ ಮಾಡಿದೆ.
ನವದೆಹಲಿ (ನ.15): ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ತಂಡದ ಹೀನಾಯ ನಿರ್ವಹಣೆಯ ಬೆನ್ನಲ್ಲಿಯೇ ನೈತಿಕ ಹೊಣೆ ಹೊತ್ತು ಪಾಕಿಸ್ತಾನ ತಂಡದ ಮೂರೂ ಮಾದರಿಯ ನಾಯಕತ್ವಕ್ಕೆ ಬಾಬರ್ ಅಜಮ್ ಬುಧವಾರ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲಿಯೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ಟೆಸ್ಟ್ ಹಾಗೂ ಟಿ20 ತಂಡಕ್ಕೆ ಹೊಸ ನಾಯಕನನ್ನು ಘೋಷಣೆ ಮಾಡಿದೆ. ಟೆಸ್ಟ್ ತಂಡಕ್ಕೆ ಶಾನ್ ಮಸೂದ್ ನೂತನ ನಾಯಕರಾಗಿರಲಿದ್ದರೆ, ಟಿ20 ತಂಡಕ್ಕೆ ಶಾಹಿದ್ ಅಫ್ರಿದಿ ಅಳಿಯ ಶಹೀನ್ ಶಾ ಅಫ್ರಿದಿ ನಾಯಕರಾಗಿ ನೇಮಕವಾಗಿದ್ದಾರೆ. ಸದ್ಯ ಯಾವುದೇ ಏಕದಿನ ಸರಣಿಯ ತಂಡದ ಲಿಸ್ಟ್‌ನಲ್ಲಿ ಇಲ್ಲದ ಕಾರಣ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಏಕದಿನ ತಂಡಕ್ಕೆ ನಾಯಕನನ್ನು ಘೋಷಣೆ ಮಾಡಿಲ್ಲ. ಪಾಕಿಸ್ತಾನ ಕ್ರಿಕೆಟ್‌ನ ಮೂರೂ ಮಾದರಿಯ ನಾಯಕ ಸ್ಥಾನದಿಂದ ಕೆಳಗಿಳಿಯುವುದಾಗಿ ಬಾಬರ್ ಅಜಂ ಘೋಷಣೆ ಮಾಡಿದ ಕೆಲವೇ ಗಂಟೆಗಳಲ್ಲಿ ಪಿಸಿಬಿ ತನ್ನ ಹೊಸ ನಾಯಕನನ್ನು ಪ್ರಕಟಿಸಿದೆ. 2019ರ ಅಕ್ಟೋಬರ್‌ನಿಂದ ಬಾಬರ್ ಅಜಂ ಪಾಕಿಸ್ತಾನ ತಂಡದ ಮೂರೂ ಮಾದರಿಯ ಕ್ರಿಕೆಟ್‌ನ ನಾಯಕರಾಗಿದ್ದರು. ಈ ವರ್ಷದ ಮೇ ತಿಂಗಳಲ್ಲಿ ಪಾಕಿಸ್ತಾನ ತಂಡವನ್ನು ಏಕದಿನ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿಸಿದ್ದು ಅವರ ಶ್ರೇಷ್ಠ ಸಾಧನೆ ಎನಿಸಿತ್ತು.
ಮೊಹಮ್ಮದ್ ಹಫೀಜ್, ಯೂನಿಸ್ ಖಾನ್, ಸೊಹೈಲ್ ತನ್ವೀರ್, ವಹಾಬ್ ರಿಯಾಜ್, ಶಾಹಿದ್ ಅಫ್ರಿದಿ ಸೇರಿದಂತೆ ಹಲವಾರು ಮಾಜಿ ಕ್ರಿಕೆಟಿಗರ ಜೊಯೆ ಪಿಸಿಬಿ ಅಧ್ಯಕ್ಷ ಝಾಕಾ ಅಶ್ರಫ್ ಸಮಾಲೋಚಿಸಿದ ನಂತರ ಪಿಸಿಬಿ ಈ ಘೋಷಣೆ ಮಾಡಿದೆ. ವಿಶ್ವಕಪ್‌ನಿಂದ ತನ್ನ ತಂಡ ಹೊರಬಿದ್ದ ನಾಲ್ಕು ದಿನಗಳ ನಂತರ ಬಾಬರ್ ಅಜಮ್ ಎಲ್ಲಾ ಮಾದರಿಯಲ್ಲಿ ಪಾಕಿಸ್ತಾನದ ನಾಯಕತ್ವಕ್ಕೆ ರಾಜೀನಾಮೆ ನೀಡಿದರು. ಪಾಕಿಸ್ತಾನವು ತನ್ನ ಒಂಬತ್ತು ಪಂದ್ಯಗಳಲ್ಲಿ ಐದರಲ್ಲಿ ಸೋಲು ಕಂಡಿತ್ತು. ಅಫ್ಘಾನಿಸ್ತಾನಕ್ಕೆ ಆಘಾತಕಾರಿ ಸೋಲು ಕಂಡಿದ್ದು, ಬಾಬರ್‌ನ ನಾಯಕತ್ವದ ಮೇಲೆ ಅನುಮಾನವನ್ನು ಉಂಟುಮಾಡಿತು.