ಪಾಕಿಸ್ತಾನ ಸೋಲಿಗೆ ಬೌಲಿಂಗ್ ಕೋಚ್ ತಲೆದಂಡ, ಮತ್ತಷ್ಟು ರಾಜೀನಾಮೆ ಶೀಘ್ರದಲ್ಲೇ ಎಂದ ಫ್ಯಾನ್ಸ್!
ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಲೀಗ್ ಹಂತದಿಂದ ಹೊರಬಿದ್ದಿದೆ. ಸೋಲಿಗೆ ಒಬ್ಬೊಬ್ಬರನ್ನೇ ಹೊಣೆ ಮಾಡಲಾಗುತ್ತಿದೆ. ಈ ಬೆಳವಣಿಗೆ ಬೆನ್ನಲ್ಲೇ ಪಾಕ್ ಸೋಲಿಗೆ ಮೊದಲ ತಲೆ ದಂಡವಾಗಿದೆ. ಪಾಕ್ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ರಾಜೀನಾಮೆ ನೀಡಿದ್ದಾರೆ. ಇದೀಗ ಅಭಿಮಾನಿಗಳು ಮತ್ತಷ್ಟು ರಾಜೀನಾಮೆ ಶೀಘ್ರದಲ್ಲೇ ಎಂದು ಟ್ರೋಲ್ ಮಾಡುತ್ತಿದ್ದಾರೆ.
ಇಸ್ಲಾಮಾಬಾದ್(ನ.13) ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಲೀಗ್ ಹಂತದಿಂದ ಹೊರಬಿದ್ದಿದೆ. ಅಂತಿಮ ಲೀಗ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋತು ಸೋಲಿನೊಂದಿಗೆ ಟೂರ್ನಿಗೆ ವಿದಾಯ ಹೇಳಿದೆ. ಪಾಕಿಸ್ತಾನದ ಸೋಲಿಗೆ ಪಾಕ್ ಅಭಿಮಾನಿಗಳೇ ಆಕ್ರೋಶ ಹೊರಹಾಕುತ್ತಿದ್ದಾರೆ. ತಂಡವನ್ನು ಟ್ರೋಲ್ ಮಾಡಲಾಗುತ್ತಿದೆ. ನಾಯಕ ಬಾಬರ್ ಅಜಮ್ ನಾಯಕತ್ವದಿಂದ ವಜಾಗೆ ಆಗ್ರಹಗಳು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನಕ್ಕೆ ಮೊದಲ ತಲೆದಂಡವಾಗಿದೆ. ಪಾಕಿಸ್ತಾನ ಬೌಲಿಂಗ್ ಕೋಟ್, ಮಾರ್ನೆ ಮಾರ್ಕೆಲ್ ರಾಜೀನಾಮೆ ನೀಡಿದ್ದಾರೆ. ಇದೀಗ ಫ್ಯಾನ್ಸ್, ಮತ್ತಷ್ಟು ರಾಜೀನಾಮೆ ಶೀಘ್ರದಲ್ಲೇ ಎಂದು ಟ್ರೋಲ್ ಮಾಡಿದ್ದಾರೆ.
ಸೌತ್ ಆಫ್ರಿಕಾದ ಮಾಜಿ ವೇಗಿ ಮಾರ್ನೆ ಮಾರ್ಕೆಲ್, ಪಾಕಿಸ್ತಾನ ತಂಡದ ಬೌಲಿಂಗ್ ಕೋಚ್ ಆಗಿ ಜೂನ್ ತಿಂಗಳಲ್ಲಿ ತಂಡ ಸೇರಿಕೊಂಡಿದ್ದರು. 6 ತಿಂಗಳ ಒಪ್ಪಂದ ಮಾಡಿಕೊಂಡಿದ್ದ ಮಾರ್ನೆ ಮಾರ್ಕೆಲ್, ಪಾಕಿಸ್ತಾನ ತಂಡದ ಹೀನಾ ಬೌಲಿಂಗ್ ಪ್ರದರ್ಶನ ಹಾಗೂ ಫಲಿತಾಂಶದ ಬೆನ್ನಲ್ಲೇ ರಾಜೀನಾಮೆ ನೀಡಿದ್ದಾರೆ. ಡಿಸೆಂಬರ್ 14 ರಿಂದ ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ವಿರುದ್ದ ಸರಣಿ ಆಡಲಿದೆ. ಇದೀಗ ಮಾರ್ನೆ ಮಾರ್ಕೆಲ್ ರಾಜೀನಾಮೆಯಿಂದ ಆಸೀಸ್ ಸರಣಿಗೆ ಪಿಸಿಬಿ ನೂತನ ಬೌಲಿಂಗ್ ಕೋಚ್ ನೇಮಕ ಮಾಡಲಿದೆ.
ವಿಶ್ವಕಪ್‌ನಿಂದ ಹೊರಬಿದ್ದರೂ ಪಾಕಿಸ್ತಾನಕ್ಕೆ ಸಿಗಲಿದೆ ಕೋಟಿ ಕೋಟಿ ರೂ ಪ್ರಶಸ್ತಿ ಮೊತ್ತ!
ಶ್ರೀಲಂಕಾ ವಿರುದ್ಧ ಸರಣಿ, ಆಫ್ಘಾನಿಸ್ತಾನ ವಿರುದ್ದ ಸರಣಿ, ಏಷ್ಯಾಕಪ್ ಹಾಗೂ ವಿಶ್ವಕಪ್ ಟೂರ್ನಿಯಲ್ಲಿ ಮಾರ್ನೆ ಮಾರ್ಕೆಲ್ ಪಾಕಿಸ್ತಾನ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಈ ಪೈಕಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ 2-0 ಅಂತರದ ಗೆಲುವು, ಆಫ್ಘಾನಿಸ್ತಾನ ವಿರುದ್ದ ಏಕದಿನ ಸರಣಿಯಲ್ಲಿ ಕ್ಲೀನ್ ಸ್ವೀಪ್ ಗೆಲುವು ಕಂಡಿತ್ತು. ಆದರೆ ಏಷ್ಯಾಕಪ್ ಹಾಗೂ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ನಿರಾಸೆ ಅನುಭವಿಸಿದೆ.
ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ 9 ಲೀಗ್ ಪಂದ್ಯದಲ್ಲಿ 5 ಸೋಲು ಕಂಡಿದೆ. ಕೇವಲ ನಾಲ್ಕು ಗೆಲುವು ಮಾತ್ರ ಸಾಧಿಸಿದೆ. ಇನ್ನು ಆಫ್ಘಾನಿಸ್ತಾನ ವಿರುದ್ಧವೂ ಪಾಕಿಸ್ತಾನ ಮುಗ್ಗರಿಸಿತ್ತು. ಇದು ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ಪಾಕಿಸ್ತಾನ ಬೌಲಿಂಗ್ ಪರಿಣಾಮಕಾರಿಯಾಗಿರಲಿಲ್ಲ ಅನ್ನೋ ಟೀಕೆ ಟೂರ್ನಿ ಆರಂಭದಿಂದಲೂ ಕೇಳಿಬರುತ್ತಿದೆ. ಆರೋಪ-ಪ್ರತ್ಯಾರೋಪದ ಬೆನ್ನಲ್ಲೇ ಮಾರ್ನೆ ಮಾರ್ಕೆಲ್ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ಈ ಮಾಹಿತಿಯನ್ನು ಖುದ್ದು ಪಿಸಿಬಿ ಬಹಿರಂಗಪಡಿಸಿದೆ. ಶೀಘ್ರದಲ್ಲೇ ನೂತನ ಬೌಲಿಂಗ್ ಕೋಚ್ ನೇಮಕ ಪ್ರಕಟಿಸಲಾಗುವುದು ಎಂದಿದೆ.
"ಪ್ರಾಮಾಣಿಕವಾಗಿ ಹೇಳಬೇಕಂದ್ರೆ...": ಭಾರತದ ಆತಿಥ್ಯದ ಬಗ್ಗೆ ಪಾಕ್ ನಾಯಕ ಬಾಬರ್ ಅಜಂ ಹೇಳಿದ್ದೇನು?