ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮಹಿಳಾ ತಂಡ ಭರ್ಜರಿ ಶುಭಾರಂಭ ಮಾಡಿದೆ. ಪಾಕಿಸ್ತಾನ ವಿರುದ್ಧ 64 ರನ್ ಗೆಲುವು ದಾಖಲಿಸಿದ ಭಾರತ ಸಂಭ್ರಮಾಚರಿಸಿದೆ. ಭಾರತದ ದಾಳಿಗೆ ಪಾಕಿಸ್ತಾನ ಕೇವಲ 106 ರನ್‌ಗೆ ಆಲೌಟ್ ಆಗಿದೆ.

ಎಡ್ಜ್‌ಬಾಸ್ಟನ್ (ಜೂ.14) ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಶುಭಾರಂಭ ಮಾಡಿದೆ. ಪಾಕಿಸ್ತಾನ ವಿರುದ್ದ ಮೊದಲ ಪಂದ್ಯದಲ್ಲಿ ಭಾರತ ಆಲ್ರೌಂಡರ್ ಪ್ರದರ್ಶನ ನೀಡಿದೆ. 171 ರನ್ ಟಾರ್ಗೆಟ್ ನೀಡಿದ ಬಳಿಕ ಬೌಲಿಂಗ್‌ನಲ್ಲಿ ಭಾರತ ಮಹಿಳಾ ತಂಡದ ದಾಳಿಗೆ ಪಾಕಿಸ್ತಾನ ಮಕಾಡೆ ಮಲಗಿದೆ. ಕೇವಲ 106 ರನ್‌ಗೆ ಆಲೌಟ್ ಆಗುವ ಮೂಲಕ ಪಾಕಿಸ್ತಾನ ಸೋಲಿಗೆ ಶರಣಾಗಿದೆ. ಮೊದಲ ಪಂದ್ಯದಲ್ಲಿ 64 ರನ್ ಅದ್ಭುತ ಗೆಲುವು ಸಾಧಿಸಿದ ಭಾರತ ಮಹಿಳಾ ತಂಡಕ್ಕೆ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾರತದ ದಾಳಿಗೆ ಗಿರಗಿರ ತಿರುಗಿದ ಪಾಕಿಸ್ತಾನ

171 ರನ್ ಟಾರ್ಗೆಟ್ ಪಡೆದ ಪಾಕಿಸ್ತಾನ ಆರಂಭದಲ್ಲೇ ಅಬ್ಬರಿಸಿತು. ಮಬೀನಾ ಅಲಿ 41 ರನ್ ಸಿಡಿಸಿದರು. ಈ ಮೂಲಕ ಪಾಕಿಸ್ತಾನ ಅತೀವೇಗದಲ್ಲಿ 50 ರನ್ ಸಿಡಿಸಿತು. ಆದರೆ ಭಾರತ ಮಹಿಳಾ ತಂಡದ ಬೌಲಿಂಗ್ ದಾಳಿ ಮತ್ತಷ್ಟು ಬಿಗಿಗೊಳಿಸಿತು. ಪರಿಣಾಮ ಪಾಕಿಸ್ತಾನದ ವಿಕೆಟ್ ಪತನ ಆರಂಭಗೊಂಡಿತು. ಗುಲ್ ಫೆರೋಜಾ ವಿಕೆಟ್‌ನೊಂದಿಗೆ ಪಾಕಿಸ್ತಾನದ ಪತನ ಆರಂಭವಾಯಿತು. ಬಳಿಕ ನಿಲ್ಲಲೇ ಇಲ್ಲ.

ದೀಪ್ತಿ ಶರ್ಮಾ, ಶ್ರೀ ಚರ್ನಿ ಹಾಗೂ ಶೆಫಾಲಿ ವರ್ಮಾ ದಾಳಿಗೆ ವಿಕೆಟ್ ಪತನಗೊಂಡಿತು. ಇತ್ತ ಮುಬೀನಾ ಆಲಿ 41 ರನ್ ಸಿಡಿಸಿ ಮುನ್ನುಗ್ಗುತ್ತಿದ್ದರೆ, ದೀಪ್ತಿ ಶರ್ಮಾ ಮಾಡಿದ ರನೌಟ್ ಪಾಕಿಸ್ತಾನದ ಹೋರಾಟದ ಆತ್ಮವಿಶ್ವಾಸವನ್ನು ಕಸಿದುಕೊಂಡಿತು. ಭಾರತ ಮಹಿಳಾ ತಂಡದ ದಾಳಿಗೆ ಪಾಕಿಸ್ತಾನ ಬಳಿ ಉತ್ತರವಿರಲಿಲ್ಲ.

ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಸಾಧನೆ

ಜುಲನ್ ಗೋಸ್ವಾಮಿ, 355 ವಿಕೆಟ್ ( ಭಾರತ)

ದೀಪ್ತಿ ಶರ್ಮಾ, 354 ವಿಕೆಟ್ (ಭಾರತ)

ಕ್ಯಾಥರಿನ್ ಸ್ಕಿವಿಯರ್ ಬ್ರಂಟ್, 335 ವಿಕೆಟ್ (ಇಂಗ್ಲೆಂಡ್)

ಎಲ್ಲಿಸ್ ಪೆರಿ, 332 ವಿಕೆಟ್ ( ಆಸ್ಟ್ರೇಲಿಯಾ)

ಪಾಕಿಸ್ತಾನ ಹೋರಾಟ ನೀಡಲು ಭಾರತದ ಬೌಲರ್ಸ್ ಅವಕಾಶ ನೀಡಲೇ ಇಲ್ಲ. 17ನೇ ಓವರ್‌ನಲ್ಲಿ ದೀಪ್ತಿ ಶರ್ಮಾ ಸತತ ವಿಕೆಟ್ ಕಬಳಿಸಿ ಮಿಂಚಿದರು. ದೀಪ್ತಿ 5 ವಿಕೆಟ್ ಕಬಳಿಸಿ ಮಿಂಚಿದರು. ಇತ್ತ ಶ್ರೀ ಚರ್ನಿ 3 ಹಾಗೂ ಶೆಫಾಲಿ 1 ವಿಕೆಟ್ ಕಬಳಿಸಿದರು. ಈ ಮೂಲಕ ಪಾಕಿಸ್ತಾನ 17 ಓವರ್‌ನಲ್ಲಿ 106 ರನ್‌ಗೆ ಆಲೌಟ್ ಆಯಿತು. ಭಾರತ 64 ರನ್ ಭರ್ಜರಿ ಗೆಲುವು ದಾಖಲಿಸಿತು.

ದಾಖಲೆ ಬರೆದ ಶೆಫಾಲಿ ವರ್ಮಾ

ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಂದ್ಯದ ಮೊದಲ ಎಸೆತದಲ್ಲಿ ಸಿಕ್ಸರ್ ಸಿಡಿಸಿದ ಏಕೈಕ ಆಟಗಾರ್ತಿ ಅನ್ನೋ ಹೆಗ್ಗಳಿಕೆಗೆ ಶೆಫಾಲಿ ವರ್ಮಾ ಪಾತ್ರರಾಗಿದ್ದಾರೆ. ಶೆಫಾಲಿ ಪಂದ್ಯದ ಮೊದಲ ಎಸೆತವನ್ನೇ ಸಿಕ್ಸರ್ ಸಿಡಿಸಿದ್ದರು. ಪುರುಷರ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ ಮೊದಲ ಎಸೆತವನ್ನೇ ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ 170 ರನ್ ಸಿಡಿಸಿತ್ತು. ಸ್ಮೃತಿ ಮಂಧನಾ 68, ನಾಯಕಿ ಹರ್ಮನ್‌ಪ್ರೀತ್ ಕೌರ್ 36, ರಿಚಾ ಘೋಷ್ 34 ರನ್ ಕಾಣಿಕೆ ನೀಡಿದರು.