2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನವು ನ್ಯೂಜಿಲೆಂಡ್ ವಿರುದ್ಧ ಸೋತಿದೆ. ಆರಂಭಿಕ ಆಟಗಾರ ಫಖರ್ ಜಮಾನ್ ಗಾಯಗೊಂಡು ಟೂರ್ನಿಯಿಂದ ಹೊರಗುಳಿದಿದ್ದಾರೆ. ಇದು ಪಾಕಿಸ್ತಾನಕ್ಕೆ ದೊಡ್ಡ ಹೊಡೆತವಾಗಿದೆ. ಅವರ ಬದಲಿಗೆ ಇಮಾಮ್ ಉಲ್ ಹಕ್ ತಂಡ ಸೇರಿಕೊಂಡಿದ್ದಾರೆ. ಮುಂಬರುವ ಭಾರತದ ವಿರುದ್ಧದ ಪಂದ್ಯ ಪಾಕಿಸ್ತಾನಕ್ಕೆ ನಿರ್ಣಾಯಕವಾಗಿದೆ.

ಕರಾಚಿ: ಬಹುನಿರೀಕ್ಷಿತ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಚಾಲನೆ ಸಿಕ್ಕಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಹಾಗೂ ಆತಿಥೇಯ ಪಾಕಿಸ್ತಾನ ತಂಡವು ನ್ಯೂಜಿಲೆಂಡ್ ಎದುರು 60 ರನ್‌ಗಳ ಅಂತರದ ಹೀನಾಯ ಸೋಲು ಅನುಭವಿಸಿದೆ. ಈ ಸೋಲಿನ ಶಾಕ್‌ನಿಂದ ಹೊರಬರುವ ಮುನ್ನವೇ ಪಾಕಿಸ್ತಾನ ತಂಡಕ್ಕೆ ಮತ್ತೊಂದು ಶಾಕ್ ಎದುರಾಗಿದ್ದು, ತಂಡದ ಸ್ಪೋಟಕ ಬ್ಯಾಟರ್ ಫಖರ್ ಜಮಾನ್, ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಪಾಕಿಸ್ತಾನ ತಂಡವು 2017ರಲ್ಲಿ ಚೊಚ್ಚಲ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಫಖರ್ ಜಮಾನ್ ತಂಡದಿಂದ ಹೊರಬಿದ್ದಿರುವುದು ಪಾಕ್‌ ತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.

ಹೌದು, ನ್ಯೂಜಿಲೆಂಡ್ ಎದುರಿನ ಉದ್ಘಾಟನಾ ಪಂದ್ಯದಲ್ಲಿ ಕ್ಷೇತ್ರ ರಕ್ಷಣೆ ಮಾಡುವ ಸಂದರ್ಭದಲ್ಲಿ ಫಖರ್ ಜಮಾನ್ ಗಾಯಗೊಂಡಿದ್ದರು. ಇನ್ನಿಂಗ್ಸ್‌ ಎರಡನೇ ಎಸೆತದಲ್ಲಿ ಶಾಹೀನ್ ಅಫ್ರಿದಿ ಬೌಲಿಂಗ್‌ನಲ್ಲಿ ವಿಲ್ ಯಂಗ್ ಬಾರಿಸಿದ ಚೆಂಡನ್ನು ಬೌಂಡರಿ ಗೆರೆಯ ಬಳಿ ತಡೆಯುವ ಯತ್ನದಲ್ಲಿ ಜಾರುವ ವೇಳೆ ಫಖರ್ ಗಾಯಗೊಂಡಿದ್ದರು. ಇದಾದ ಬಳಿಕ ಮೈದಾನ ಎಡಗೈ ಬ್ಯಾಟರ್ ಫಖರ್ ಜಮಾನ್ ಮೈದಾನ ತೊರೆದಿದ್ದರು.

ಚಾಂಪಿಯನ್ಸ್ ಟ್ರೋಫಿ: ಭಾರತ ಎದುರು ಟಾಸ್ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್ ಆಯ್ಕೆ

ಇನ್ನು ಪಾಕಿಸ್ತಾನ ತಂಡದ ಆರಂಭಿಕರಾಗಿರುವ ಫಖರ್ ಜಮಾನ್, ನೋವಿನಿಂದ ಬಳಲುತ್ತಿದ್ದುದರಿಂದಾಗಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿದರು. ಫಖರ್ ಜಮಾನ್ 41 ಎಸೆತಗಳನ್ನು ಎದುರಿಸಿ 24 ರನ್ ಗಳಿಸಲಷ್ಟೇ ಶಕ್ತರಾದರು. ಫಖರ್ ಜಮಾನ್, ಬಾಬರ್ ಅಜಂ ಅವರ ಜತೆಗೂಡಿ 65 ಎಸೆತಗಳನ್ನು ಎದುರಿಸಿ 47 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಗಲು ಯತ್ನಿಸಿದರು.

ಗೆಲ್ಲಲು 320 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ್ದ ಪಾಕಿಸ್ತಾನ ತಂಡವು, ಕಿವೀಸ್ ಎದುರು 260 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ 60 ರನ್ ಅಂತರದಲ್ಲಿ ಸೋಲು ಒಪ್ಪಿಕೊಂಡಿತು. ಇದೀಗ ಫಖರ್ ಜಮಾನ್ ಬದಲಿಗೆ ಇಮಾಮ್ ಉಲ್ ಹಕ್ ಪಾಕಿಸ್ತಾನ ತಂಡ ಕೂಡಿಕೊಂಡಿದ್ದಾರೆ. ಅಂದಹಾಗೆ ಫಖರ್ ಜಮಾನ್ 2023ರಿಂದೀಚೆಗೆ ಯಾವುದೇ ಏಕದಿನ ಪಂದ್ಯವನ್ನು ಆಡಿಲ್ಲ. 2023ರಲ್ಲಿ ಭಾರತದಲ್ಲಿ ನಡೆದಿದ್ದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ವೇಳೆಯಲ್ಲಿ ಕೊನೆಯದಾಗಿ ಇಮಾಮ್ ಉಲ್ ಹಕ್ ಪಾಕಿಸ್ತಾನ ತಂಡವನ್ನು ಏಕದಿನ ಮಾದರಿಯಲ್ಲಿ ಪ್ರತಿನಿಧಿಸಿದ್ದರು.

ಐಸಿಸಿ ಚಾಂಪಿಯನ್ಸ್ ಟ್ರೋಫಿ ಉದ್ಘಾಟನಾ ಪಂದ್ಯದಲ್ಲೇ ಪಾಕ್‌ಗೆ ಮುಖಭಂಗ; ಕಿವೀಸ್ ಎದುರು ಹೀನಾಯ ಸೋಲು!

ಕಳೆದ ಬಾರಿ ಭಾರತವನ್ನು ಕಾಡಿದ್ದ ಫಖರ್ ಜಮಾನ್:

ಫಖರ್ ಜಮಾನ್ ಎಂದಾಕ್ಷಣ ಭಾರತೀಯರಿಗೆ ನೆನಪಾಗುವುದು 2017ರಲ್ಲಿ ನಡೆದಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್. 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಫೈನಲ್‌ನಲ್ಲಿ ಫಖರ್ ಜಮಾನ್ 106 ಎಸೆತಗಳನ್ನು ಎದುರಿಸಿ12 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಸ್ಪೋಟಕ 114 ರನ್ ಸಿಡಿಸುವ ಮೂಲಕ ಪಾಕಿಸ್ತಾನ ತಂಡವು ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ ತಂಡವು ಫಖರ್ ಜಮಾನ್ ಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 338 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಭಾರತ 180 ರನ್‌ಗಳಿಗೆ ಸರ್ವಪತನ ಕಂಡು ರನ್ನರ್‌ ಅಪ್‌ಗೆ ತೃಪ್ತಿಪಟ್ಟುಕೊಂಡಿತ್ತು.

ಭಾರತ ಎದುರಿನ ಮಹತ್ವದ ಪಂದ್ಯ: 

ಪಾಕಿಸ್ತಾನ ತಂಡವು ಈಗಾಗಲೇ ಕಿವೀಸ್ ಎದುರು ಸೋಲು ಅನುಭವಿಸಿದ್ದು, ಇದೀಗ ಫೆಬ್ರವರಿ 23ರಂದು ಭಾರತ ಎದುರು ದುಬೈನಲ್ಲಿ ಮಹತ್ವದ ಪಂದ್ಯ ಆಡಲು ಸಜ್ಜಾಗಿದೆ. ಒಂದು ವೇಳೆ ಭಾರತ ಎದುರು ಪಾಕ್ ಸೋಲು ಅನುಭವಿಸಿದರೆ, ಬಹುತೇಕ ಗ್ರೂಪ್‌ ಹಂತದಲ್ಲೇ ಹೊರಬೀಳುವ ಆತಂಕಕ್ಕೆ ಸಿಲುಕಿದೆ.