ದುಬೈನಲ್ಲಿ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಅಭಿಯಾನ ಆರಂಭವಾಗಿದೆ. ಬಾಂಗ್ಲಾದೇಶ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಪಂದ್ಯ ನಡೆಯುತ್ತಿದೆ. 2017ರ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಸೋತಿದ್ದ ಭಾರತ, ಈ ಬಾರಿ ಗೆಲುವಿನೊಂದಿಗೆ ಶುಭಾರಂಭ ಮಾಡಲು ಸಜ್ಜಾಗಿದೆ. 2017ರ ಸೆಮಿಫೈನಲ್‌ನಲ್ಲಿ ಭಾರತ ಬಾಂಗ್ಲಾವನ್ನು ಸೋಲಿಸಿತ್ತು.

ದುಬೈ: 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿಂದು ಭಾರತದ ಅಭಿಯಾನ ಆರಂಭವಾಗಿದೆ. ಟೂರ್ನಿಯ ಎರಡನೇ ಪಂದ್ಯದಲ್ಲಿಂದು ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಬಾಂಗ್ಲಾದೇಶ ನಾಯಕ ನಜ್ಮುಲ್ ಹೊಸೈನ್ ಶಾಂತೋ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ.

ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಪಂದ್ಯಕ್ಕೆ ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಆತಿಥ್ಯ ವಹಿಸಿದೆ. ಬಾಂಗ್ಲಾದೇಶ ತಂಡವು ಮೂವರು ವೇಗಿಗಳು ಹಾಗೂ ಇಬ್ಬರು ಸ್ಪಿನ್ನರ್ ಹಾಗೂ 6 ಬ್ಯಾಟರ್‌ಗಳೊಂದಿಗೆ ಕಣಕ್ಕಿಳಿದಿದೆ. ಇನ್ನೊಂದೆಡೆ ಭಾರತ ತಂಡವು ವೇಗದ ಬೌಲಿಂಗ್ ರೂಪದಲ್ಲಿ ಮೊಹಮ್ಮದ್ ಶಮಿ ಹಾಗೂ ಹರ್ಷಿತ್ ರಾಣಾ ಸ್ಥಾನ ಪಡೆದಿದ್ದಾರೆ. ಇನ್ನು ಹಾರ್ದಿಕ್ ಪಾಂಡ್ಯ ಕೂಡಾ ಬ್ಯಾಟಿಂಗ್ ಆಲ್ರೌಂಡರ್ ಆಗಿ ಸ್ಥಾನ ಪಡೆದಿದ್ದಾರೆ.

Scroll to load tweet…

2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್‌ನಲ್ಲಿ ಟೀಂ ಇಂಡಿಯಾ ನೆರೆಯ ಪಾಕಿಸ್ತಾನ ಎದುರು ಮುಗ್ಗರಿಸುವ ಮೂಲಕ ಮೂರನೇ ಬಾರಿಗೆ ಕಪ್ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತ್ತು. ಇದೀಗ ಆ ನಿರಾಸೆಯನ್ನು ಮರೆತು, ಗೆಲುವಿನೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಮಾಡಲು ಎದುರು ನೋಡುತ್ತಿದೆ. 

ದುಬೈನಲ್ಲಿಂದು ಮೆಗಾ ಫೈಟ್‌; ಬಾಂಗ್ಲಾದೇಶಕ್ಕೆ ಮಣ್ಣುಮುಕ್ಕಿಸಿ ಗೆಲ್ಲುತ್ತಾ ಭಾರತ?

ಇನ್ನೊಂದೆಡೆ ಭಾರತ-ಬಾಂಗ್ಲಾದೇಶ ಚಾಂಪಿಯನ್ಸ್‌ ಟ್ರೋಫಿ ಇತಿಹಾಸದಲ್ಲಿ ಒಮ್ಮೆ ಮುಖಾಮುಖಿಯಾಗಿದೆ. 2017ರ ಸೆಮಿಫೈನಲ್‌ನಲ್ಲಿ ಬಾಂಗ್ಲಾ ವಿರುದ್ಧ ಭಾರತ ಗೆದ್ದಿತ್ತು. ಭಾರತದ ಎದುರು ಸೇಡು ತೀರಿಸಿಕೊಳ್ಳಲು ಬಾಂಗ್ಲಾದೇಶ ಎದುರು ನೋಡುತ್ತಿದೆ.

ಉಭಯ ತಂಡಗಳ ಆಟಗಾರರು

ಭಾರತ: ರೋಹಿತ್‌ ಶರ್ಮಾ(ನಾಯಕ), ಶುಭ್‌ಮನ್ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್, ಕೆ ಎಲ್ ರಾಹುಲ್‌, ಅಕ್ಷರ್‌ ಪಟೇಲ್, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಕುಲ್ದೀಪ್‌ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ.

ಬಾಂಗ್ಲಾ: ನಜ್ಮುಲ್‌ ಹೊಸೈನ್ ಶಾಂತೊ(ನಾಯಕ), ಸೌಮ್ಯಾ ಸರ್ಕಾರ್, ತಂಜೀದ್‌, ರಹೀಂ, ಮಹ್ಮೂದುಲ್ಲಾ, ಜಾಕರ್‌, ಮೆಹಿದಿ, ರಿಶಾದ್‌, ತಸ್ಕೀನ್‌ ಅಹಮದ್, ಮುಸ್ತಾಫಿಜುರ್‌ ರೆಹಮಾನ್, ನಹಿದ್‌.