ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 05ರಿಂದ ಆರಂಭಭಾರತ-ಪಾಕಿಸ್ತಾನ ನಡುವಿನ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆಅಕ್ಟೋಬರ್ 15ರಂದು ನಿಗದಿಯಾಗಿರುವ ಪಂದ್ಯ

ನವದೆಹಲಿ(ಆ.02): ಬಹುನಿರೀಕ್ಷಿತ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸಿದೆ. ಇನ್ನು ಈ ಟೂರ್ನಿಯ ಸೆಂಟರ್ ಆಫ್ ಅಟ್ರ್ಯಾಕ್ಷನ್ ಎನಿಸಿಕೊಂಡಿರುವ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಕಾದಾಟಕ್ಕೆ ಈಗಾಗಲೇ ದಿನಾಂಕ ನಿಗದಿಯಾಗಿದೆ. ಐಸಿಸಿ ಪ್ರಕಟಿಸಿರುವ ವೇಳಾಪಟ್ಟಿಯಂತೆ ಅಕ್ಟೋಬರ್ 15ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಬೇಕಿತ್ತು. ಆದರೆ ಈ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆಯಾಗುವುದು ಬಹುತೇಕ ಪಕ್ಕಾ ಎನಿಸಿದೆ.

ಹೌದು, ಈಗಾಗಲೇ ನಿಗದಿಯಾಗಿರುವ ಅಕ್ಟೋಬರ್ 15ರ ಬದಲು ಅಕ್ಟೋಬರ್ 14ರಂದು ಭಾರತ ವಿರುದ್ದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕಣಕ್ಕಿಳಿಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಒಪ್ಪಿಗೆ ಸೂಚಿಸಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು, ಬಿಸಿಸಿಐ ಹಾಗೂ ಐಸಿಸಿ ಬಳಿಕ ತಾವು ಲೀಗ್ ಹಂತದಲ್ಲಿ ಆಡಲಿರುವ ಎರಡು ಪಂದ್ಯಗಳ ವೇಳಾಪಟ್ಟಿಯನ್ನು ಪರಿಷ್ಕರಿಸುವಂತೆ ಮನವಿ ಮಾಡಿಕೊಂಡಿತ್ತು. ಈ ಮೊದಲಿನ ವೇಳಾಪಟ್ಟಿಯಂತೆ ಪಾಕಿಸ್ತಾನ ತಂಡವು ಅಕ್ಟೋಬರ್ 12ರಂದು ಶ್ರೀಲಂಕಾ ವಿರುದ್ದ ಹೈದರಾಬಾದ್‌ನಲ್ಲಿ ಕಾದಾಡಬೇಕಿತ್ತು. ಈ ಪಂದ್ಯವು ಅಕ್ಟೋಬರ್ 10ರಂದು ನಡೆಯುವ ಸಾಧ್ಯತೆಯಿದೆ.

"ಟೀಂ ಇಂಡಿಯಾ ಆಟಗಾರನಾಗುವುದು....": ಫಿಫ್ಟಿ ಬಾರಿಸಿ ಅಚ್ಚರಿಯ ಹೇಳಿಕೆ ನೀಡಿದ ಸಂಜು ಸ್ಯಾಮ್ಸನ್‌..!

ಹೀಗಾದಲ್ಲಿ ಭಾರತ ಎದುರು ಅಕ್ಟೋಬರ್ 14ರಂದು ಪಾಕಿಸ್ತಾನ ಕಣಕ್ಕಿಳಿಯುವ ಮುನ್ನ ಮೂರು ದಿನ ವಿಶ್ರಾಂತಿ ಸಿಗಲಿದೆ. ಇನ್ನು ಗುಜರಾತ್‌ನಾದ್ಯಂತ ಅಕ್ಟೋಬರ್ 15ರಂದು ನವರಾತ್ರಿಯ ಮೊದಲ ದಿನವಾದ್ದರಿಂದ ಭದ್ರತೆ ಸಮಸ್ಯೆಯ ಕುರಿತಂತೆ ಪ್ರಶ್ನೆಗಳು ಎದ್ದಿದ್ದವು. ಇದೀಗ ಭಾರತ ಹಾಗೂ ಪಾಕ್ ನಡುವಿನ ಪಂದ್ಯದ ವೇಳಾಪಟ್ಟಿ ಪರಿಷ್ಕರಣೆಯಾಗುವುದು ಬಹುತೇಕ ಖಚಿತವಾಗಿದ್ದು, ಐಸಿಸಿ ನಿಂದ ಅಧಿಕೃತ ಪ್ರಕಟಣೆಯೊಂದೇ ಬಾಕಿ ಉಳಿದಿದೆ.

ವಿಶ್ವಕಪ್ ಟೂರ್ನಿ ಹಾಲಿ ವೇಳಾಪಟ್ಟಿ ಪ್ರಕಾರ ಪಾಕಿಸ್ತಾನದ ಲೀಗ್ ಹಂತದ ಪಂದ್ಯಗಳು ಹೀಗಿವೆ ನೋಡಿ:

ಅಕ್ಟೋಬರ್ 06: ಪಾಕಿಸ್ತಾನ-ನೆದರ್‌ಲೆಂಡ್ಸ್‌- ಹೈದರಾಬಾದ್‌
ಅಕ್ಟೋಬರ್ 12: ಪಾಕಿಸ್ತಾನ - ಶ್ರೀಲಂಕಾ- ಹೈದರಾಬಾದ್‌
ಅಕ್ಟೋಬರ್ 15: ಪಾಕಿಸ್ತಾನ - ಭಾರತ- ಅಹಮದಾಬಾದ್‌
ಅಕ್ಟೋಬರ್ 20: ಪಾಕಿಸ್ತಾನ - ಆಸ್ಟ್ರೇಲಿಯಾ- ಬೆಂಗಳೂರು
ಅಕ್ಟೋಬರ್ 23: ಪಾಕಿಸ್ತಾನ - ಆಫ್ಘಾನಿಸ್ತಾನ- ಚೆನ್ನೈ
ಅಕ್ಟೋಬರ್ 27: ಪಾಕಿಸ್ತಾನ - ದಕ್ಷಿಣ ಆಫ್ರಿಕಾ- ಚೆನ್ನೈ
ಅಕ್ಟೋಬರ್ 31: ಪಾಕಿಸ್ತಾನ - ಬಾಂಗ್ಲಾದೇಶ- ಕೋಲ್ಕತಾ
ನವೆಂಬರ್ 04: ಪಾಕಿಸ್ತಾನ - ನ್ಯೂಜಿಲೆಂಡ್- ಬೆಂಗಳೂರು

ಆಗಸ್ಟ್‌ 10ರಿಂದ ಟಿಕೆಟ್‌ ಮಾರಾಟ?

ವಿಶ್ವಕಪ್‌ ಪಂದ್ಯಗಳ ಟಿಕೆಟ್‌ ಮಾರಾಟ ಅ.10ರಿಂದ ಆರಂಭಗೊಳ್ಳಲಿದೆ ಎನ್ನಲಾಗಿದೆ. ಟಿಕೆಟ್‌ಗಳ ಬೆಲೆಯನ್ನು ಅಂತಿಮಗೊಳಿಸಿ ಜು.31ರೊಳಗೆ ಪಟ್ಟಿ ಸಲ್ಲಿಸಲು ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ ಜಯ್‌ ಶಾ ಸೂಚಿಸಿದ್ದರು. ಇದೇ ವೇಳೆ ಆನ್‌ಲೈನ್‌ನಲ್ಲಿ ಟಿಕೆಟ್‌ ಖರೀದಿಸಿದರೂ ಕೌಂಟರ್‌ಗಳಲ್ಲಿ ಟಿಕೆಟ್‌ನ ಪ್ರತಿ ಪಡೆಯುವುದು ಕಡ್ಡಾಯ ಎಂದು ಶಾ ಸ್ಪಷ್ಟಪಡಿಸಿದ್ದಾರೆ. ಐಪಿಎಲ್‌ ಫೈನಲ್‌ ವೇಳೆ ಆದ ಭಾರೀ ಎಡವಟ್ಟು ತಡೆಯಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿರುವ ಶಾ, ಕ್ರೀಡಾಂಗಣ ಕೌಂಟರ್‌ಗಳಲ್ಲದೇ ಆಯಾ ನಗರಗಳಲ್ಲಿ 8-10 ಕಡೆ ಟಿಕೆಟ್‌ ಪ್ರತಿಯನ್ನು ಪಡೆಯಲು ವ್ಯವಸ್ಥೆ ಮಾಡಲಿದ್ದೇವೆ. ಪಂದ್ಯಕ್ಕೆ ಒಂದು ವಾರ ಮೊದಲೇ ಟಿಕೆಟ್‌ಗಳನ್ನು ಪಡೆಯಬಹುದಾಗಿದೆ ಎಂದು ಶಾ ಹೇಳಿದ್ದಾರೆ. ಐಪಿಎಲ್‌ ವೇಳೆ ಆನ್‌ಲೈನ್‌ ಟಿಕೆಟ್‌ ಕಾಯ್ದಿರಿಸಿದ್ದ ಸಾವಿರಾರು ಮಂದಿ ಟಿಕೆಟ್‌ ಪ್ರತಿಗಳನ್ನು ಪಡೆಯಲು ಕ್ರೀಡಾಂಗಣದ ಬಳಿ ಒಟ್ಟಿಗೆ ಹೋಗಿದ್ದಾಗ ಕಾಲ್ತುಳಿತ ಉಂಟಾಗಿ ಹಲವರು ಗಾಯಗೊಂಡಿದ್ದ ಘಟನೆ ನಡೆದಿತ್ತು.