ಭಾರತ-ಇಂಗ್ಲೆಂಡ್ ನಡುವಿನ ಓವಲ್ ಟೆಸ್ಟ್ ರೋಚಕ ಘಟ್ಟ ತಲುಪಿದೆ. ಗೆಲ್ಲಲು ಇಂಗ್ಲೆಂಡಿಗೆ 35 ರನ್‌ಗಳು ಬೇಕಾಗಿದ್ದರೆ, ಭಾರತಕ್ಕೆ ನಾಲ್ಕು ವಿಕೆಟ್‌ಗಳು ಬೇಕು. ಕೊನೆಯ ದಿನ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ.
ಲಂಡನ್: ಭಾರತ - ಇಂಗ್ಲೆಂಡ್ ನಡುವಿನ ಓವಲ್ ಟೆಸ್ಟ್ ರೋಚಕ ಘಟ್ಟ ತಲುಪಿದೆ. ಗೆಲ್ಲಲು ಇಂಗ್ಲೆಂಡಿಗೆ 35 ರನ್‌ಗಳು ಬೇಕಾಗಿದ್ದರೆ, ಭಾರತಕ್ಕೆ ನಾಲ್ಕು ವಿಕೆಟ್‌ಗಳು ಬೇಕು. 374 ರನ್‌ಗಳ ಗುರಿ ಬೆನ್ನಟ್ಟುತ್ತಿರುವ ಇಂಗ್ಲೆಂಡ್ ನಾಲ್ಕನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 339 ರನ್ ಗಳಿಸಿದೆ. ಜೇಮೀ ಓವರ್ಟನ್ (0), ಜೇಮೀ ಸ್ಮಿತ್ (2) ಕ್ರೀಸ್‌ನಲ್ಲಿದ್ದಾರೆ. ಕೊನೆಯ ಅವಧಿಯಲ್ಲಿ ಭಾರತೀಯ ವೇಗಿಗಳ ನಿಖರ ದಾಳಿ ಇಂಗ್ಲೆಂಡ್‌ಗೆ ಕಠಿಣ ಪರಿಸ್ಥಿತಿ ನಿರ್ಮಿಸಿದೆ. ಒಂದು ಹಂತದಲ್ಲಿ ಗೆಲುವು ಖಚಿತ ಎಂದು ಭಾವಿಸಲಾಗಿತ್ತು. ಆದರೆ ಹ್ಯಾರಿ ಬ್ರೂಕ್ (111), ಜೋ ರೂಟ್ (105) ವಿಕೆಟ್ ಪತನ ಇಂಗ್ಲೆಂಡ್‌ಗೆ ಹಿನ್ನಡೆಯಾಯಿತು.
ಕೊನೆಯ ದಿನದಾಟಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ಕಾತುರರಾಗಿದ್ದಾರೆ. ಆದರೆ ಮಳೆ ಅಡ್ಡಿಯಾಗುತ್ತದೆಯೇ ಎಂಬ ಪ್ರಶ್ನೆ ಎದುರಾಗಿದೆ. ದಕ್ಷಿಣ ಲಂಡನ್‌ನಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪಂದ್ಯದ ವೇಳೆ ಮಳೆ ಬರುವ ಸಾಧ್ಯತೆ ಇದೆ. ಆದರೆ ಮೊದಲ ಅವಧಿಯಲ್ಲಿ ಮಳೆ ಅಡ್ಡಿ ಇರುವುದಿಲ್ಲ ಎಂದು ನಿರೀಕ್ಷಿಸಲಾಗಿದೆ. ಮೊದಲ ಅವಧಿಯಲ್ಲೇ ಪಂದ್ಯ ಮುಗಿಯುವ ಸಾಧ್ಯತೆ ಇದೆ. ಬಿಬಿಸಿ ಹವಾಮಾನ ವರದಿಯ ಪ್ರಕಾರ ಮಧ್ಯಾಹ್ನ 1 ಗಂಟೆಗೆ ಮಳೆಯಾಗಬಹುದು. ಮೊದಲ ಅವಧಿ ಮೋಡ ಕವಿದ ವಾತಾವರಣವಿರುತ್ತದೆ. ನಾಲ್ಕು ಓವರ್‌ಗಳ ನಂತರ ಹೊಸ ಚೆಂಡು ತೆಗೆದುಕೊಳ್ಳುವುದು ಭಾರತೀಯ ಬೌಲರ್‌ಗಳಿಗೆ ಸಹಾಯಕವಾಗಲಿದೆ.
50 ರನ್‌ಗೆ ಒಂದು ವಿಕೆಟ್ ಕಳೆದುಕೊಂಡು ನಾಲ್ಕನೇ ದಿನದಾಟ ಆರಂಭಿಸಿದ ಇಂಗ್ಲೆಂಡ್ ತಂಡವು ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. ಬೆನ್ ಡಕೆಟ್ (54) ಮೊದಲು ಔಟಾದರು. ಪ್ರಸಿದ್ಧ್ ಕೃಷ್ಣ ಅವರ ಎಸೆತದಲ್ಲಿ ಸೆಕೆಂಡ್ ಸ್ಲಿಪ್‌ನಲ್ಲಿ ಕೆ ಎಲ್ ರಾಹುಲ್‌ಗೆ ಕ್ಯಾಚ್ ನೀಡಿದರು. ಇದಾದ ನಂತರ ಪರಿಸ್ಥಿತಿ ಬದಲಾಯಿತು. ನಂತರ ನಾಯಕ ಓಲಿ ಪೋಪ್ ಔಟಾದರು. 27 ರನ್ ಗಳಿಸಿದ್ದ ಪೋಪ್ ಅವರನ್ನು ಮೊಹಮ್ಮದ್ ಸಿರಾಜ್ ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು. ಬಳಿಕ ಬ್ರೂಕ್ ಮತ್ತು ರೂಟ್ ಜೊತೆಯಾಟದಲ್ಲಿ 195 ರನ್‌ಗಳು ಸೇರಿಸಿದರು. ಈ ಜೊತೆಯಾಟ ಇಂಗ್ಲೆಂಡ್‌ಗೆ ಗೆಲುವಿನ ಆಸೆ ಹುಟ್ಟಿಸಿತ್ತು. ಆಕಾಶ್ ದೀಪ್ ಬ್ರೂಕ್ ಅವರನ್ನು ಔಟ್ ಮಾಡಿದರೂ ಆಗಲೇ ತಡವಾಗಿತ್ತು. ಕೇವಲ 98 ಎಸೆತಗಳನ್ನು ಎದುರಿಸಿದ ಬ್ರೂಕ್ 2 ಸಿಕ್ಸರ್ ಮತ್ತು 14 ಬೌಂಡರಿ ಬಾರಿಸಿದರು.
ಇದಕ್ಕೂ ಮೊದಲು, ಬ್ರೂಕ್ ಅವರ ವಿಕೆಟ್ ಪಡೆಯುವ ಅವಕಾಶವನ್ನು ಮೊಹಮ್ಮದ್ ಸಿರಾಜ್ ಕೈಚೆಲ್ಲಿದ್ದರು. ಆಗ ಬ್ರೂಕ್ ಕೇವಲ 19 ರನ್ ಗಳಿಸಿದ್ದರು. ಇನ್ನು ಬ್ರೂಕ್ ಔಟಾದ ನಂತರ ಇಂಗ್ಲೆಂಡ್ ಸ್ವಲ್ಪ ಒತ್ತಡಕ್ಕೆ ಸಿಲುಕಿತು. ಜೇಕಬ್ ಬೆಥೆಲ್ (5) ರನ್ ಗಳಿಸಲು ಪರದಾಡಿದರು. 31 ಎಸೆತಗಳನ್ನು ಎದುರಿಸಿದ ಬೆಥೆಲ್ ಅವರನ್ನು ಪ್ರಸಿದ್ಧ್ ಕೃಷ್ಣ ಬೌಲ್ಡ್ ಮಾಡಿದರು. ಈ ನಡುವೆ ರೂಟ್ ಶತಕ ಪೂರೈಸಿದರು. ಆದರೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ಪ್ರಸಿದ್ಧ್ ಕೃಷ್ಣ ಅವರ ಎಸೆತದಲ್ಲಿ ವಿಕೆಟ್ ಕೀಪರ್ ಧ್ರುವ್ ಜುರೆಲ್‌ಗೆ ಕ್ಯಾಚ್ ನೀಡಿದರು. ನಂತರ ಸ್ಮಿತ್ ಮತ್ತು ಓವರ್ಟನ್ ಜೋಡಿ ರಕ್ಷಣಾತ್ಮಕ ಆಟ ಪ್ರದರ್ಶಿಸಿದರು. ಇಂಗ್ಲೆಂಡ್ ಮೊದಲ ದಿನವೇ ಜಾಕ್ ಕ್ರಾಲಿ (14) ವಿಕೆಟ್ ಕಳೆದುಕೊಂಡಿತ್ತು. ಮೂರನೇ ದಿನದ ಕೊನೆಯ ಓವರ್‌ನಲ್ಲಿ ಮೊಹಮ್ಮದ್ ಸಿರಾಜ್ ಕ್ರಾಲಿಯನ್ನು ಬೌಲ್ಡ್ ಮಾಡಿದ್ದರು. ಇದೀಗ ವಿಕೆಟ್ ಕೀಪರ್ ಬ್ಯಾಟರ್ ಜೇಮೀ ಸ್ಮಿತ್ 2 ಹಾಗೂ ಜೇಮಿ ಓವರ್‌ಟನ್(0) ಕೊನೆಯ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
