ನಿನ್ನೆ ನಡೆದ ಐಪಿಎಲ್ ಪಂದ್ಯಗಳಲ್ಲಿ ಆರೆಂಜ್ ಕ್ಯಾಪ್ ಒಂದೇ ದಿನದಲ್ಲಿ ನಾಲ್ಕು ಆಟಗಾರರ ನಡುವೆ ಕೈ ಬದಲಾಯಿಸಿತು. ವಿರಾಟ್ ಕೊಹ್ಲಿಯಿಂದ ಆರಂಭವಾಗಿ, ಕೆ.ಎಲ್. ರಾಹುಲ್ ಮತ್ತು ವೈಭವ್ ಸೂರ್ಯವಂಶಿ ಮೂಲಕ ಅಂತಿಮವಾಗಿ ಅಭಿಷೇಕ್ ಶರ್ಮಾ ಅವರ ಪಾಲಾಯಿತು. ಈ ಮೂಲಕ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ.

ಜೈಪುರ: ನಿನ್ನೆ ಐಪಿಎಲ್‌ನಲ್ಲಿ ಆರೆಂಜ್ ಕ್ಯಾಪ್ ಒಂದಲ್ಲ ಎರಡಲ್ಲ ಬರೋಬ್ಬರಿ ನಾಲ್ಕು ಜನರ ಶಿರವೇರಿ ಗಮನ ಸೆಳೆಯಿತು. ರನ್‌ಗಳ ಮಳೆ ಸುರಿದ ಎರಡು ಪಂದ್ಯಗಳ ನಂತರ, ಸನ್‌ರೈಸರ್ಸ್ ಹೈದರಾಬಾದ್ ಆಟಗಾರ ಅಭಿಷೇಕ್ ಶರ್ಮಾ ತಲೆಗೆ ಮತ್ತೆ ಆರೆಂಜ್ ಕ್ಯಾಪ್ ಏರಿದೆ. ಆದರೆ, ಅಭಿಷೇಕ್ ಅವರ ಈ ಆರೆಂಜ್ ಕ್ಯಾಪ್‌ಗೆ ಎಷ್ಟು ದಿನ ಆಯಸ್ಸು ಇರುತ್ತೆ ಅನ್ನೋದು ಇವತ್ತಿನ ಮ್ಯಾಚ್‌ಗಳ ನಂತರವೇ ಗೊತ್ತಾಗಲಿದೆ.

ಒಂದೇ ದಿನ ನಾಲ್ಕು ಜನರ ಶಿರವೇರಿದ ಆರೆಂಜ್ ಕ್ಯಾಪ್‌:

ಅಚ್ಚರಿಯೆನಿಸಿದರೂ ಇದು ಸತ್ಯ. 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಬ್ಯಾಟರ್‌ಗಳ ಅಬ್ಬರ ಜೋರಾಗಿದೆ. ಶನಿವಾರದ ದಿನದಾಟ ಆರಂಭಕ್ಕೂ ಮೊದಲು ಆರ್‌ಸಿಬಿ ರನ್ ಮಷೀನ್ ವಿರಾಟ್ ಕೊಹ್ಲಿ ಬಳಿ ಆರೆಂಜ್ ಕ್ಯಾಪ್ ಇತ್ತು. ಆದರೆ ಪಂಜಾಬ್ ಕಿಂಗ್ಸ್ ಎದುರು ಅಜೇಯ 152 ರನ್ ಸಿಡಿಸಿದ ಕೆ ಎಲ್ ರಾಹುಲ್ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಆದರೆ ಈ ಸಂಭ್ರಮಾಚರಣೆ ರಾಹುಲ್ ಬಳಿ ಹೆಚ್ಚು ಹೊತ್ತು ಉಳಿಯಲಿಲ್ಲ.

ಸನ್‌ರೈಸರ್ಸ್ ಹೈದರಾಬಾದ್ ಎದುರು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್ ಅರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ, ಈ ಸೀಸನ್‌ನ ಮೊದಲ ಶತಕ ಸಿಡಿಸಿ ಸಂಭ್ರಮಿಸಿದರು. ಈ ಮೂಲಕ 357 ರನ್‌ಗಳೊಂದಿಗೆ ಆರೆಂಜ್‌ ಕ್ಯಾಪ್ ತಮ್ಮದಾಗಿಸಿಕೊಂಡರು. ಇದಾದ ಬಳಿಕ ಗುರಿ ಬೆನ್ನತ್ತಿದ ಸನ್‌ರೈಸರ್ಸ್ ಹೈದರಾಬಾದ್‌ಗೆ ಅಭಿಷೇಕ್ ಶರ್ಮಾ ಸ್ಪೋಟಕ ಅರ್ಧಶತಕ ಸಿಡಿಸುವ ಮೂಲಕ ಭರ್ಜರಿ ಆರಂಭ ಒದಗಿಸಿಕೊಟ್ಟರು. ಆರೆಂಜ್ ಆರ್ಮಿ ಪರ ಅಭಿಷೇಕ್ ಶರ್ಮಾ 29 ಎಸೆತಗಳಲ್ಲಿ 57 ರನ್ ಸಿಡಿಸಿದರು. ಇದರ ಜತೆಗೆ ಟೂರ್ನಿಯಲ್ಲಿ 380 ರನ್ ಬಾರಿಸುವ ಮೂಲಕ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡರು. ಇದರೊಂದಿಗೆ ಬೆಳಗ್ಗೆ ಕೊಹ್ಲಿ ಬಳಿಯಿದ್ದ ಆರೆಂಜ್ ಕ್ಯಾಪ್, ಬಳಿಕ ರಾಹುಲ್, ವೈಭವ್ ಸೂರ್ಯವಂಶಿ ನಂತರ ಇದೀಗ ಅಭಿಷೇಕ್ ಶರ್ಮಾ ಪಾಲಾಗಿದೆ.

ರಾಜಸ್ಥಾನ ರಾಯಲ್ಸ್ ವಿರುದ್ಧ ಅರ್ಧಶತಕ ಬಾರಿಸಿದ ಅಭಿಷೇಕ್, 8 ಪಂದ್ಯಗಳಿಂದ 54.29ರ ಸರಾಸರಿ ಮತ್ತು 212.29ರ ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 380 ರನ್ ಗಳಿಸಿ ಆರೆಂಜ್ ಕ್ಯಾಪ್‌ ಅನ್ನು ಮತ್ತೆ ತಮ್ಮದಾಗಿಸಿಕೊಂಡಿದ್ದಾರೆ. ಒಂದು ಶತಕ ಮತ್ತು ಮೂರು ಅರ್ಧಶತಕಗಳನ್ನು ಸಿಡಿಸಿರುವ ಅಭಿಷೇಕ್, 36 ಬೌಂಡರಿ ಮತ್ತು 28 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಹೈದರಾಬಾದ್ ವಿರುದ್ಧ ರಾಜಸ್ಥಾನ ಪರ ಸ್ಫೋಟಕ ಶತಕ ಸಿಡಿಸಿದ ಯುವ ಆಟಗಾರ ವೈಭವ್ ಸೂರ್ಯವಂಶಿ, ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಕೇವಲ 37 ಎಸೆತಗಳಲ್ಲಿ 103 ರನ್ ಚಚ್ಚಿದ ವೈಭವ್, 8 ಪಂದ್ಯಗಳಿಂದ 357 ರನ್ ಗಳಿಸಿದ್ದಾರೆ. ಅವರ ಸರಾಸರಿ 44.63 ಮತ್ತು ಸ್ಟ್ರೈಕ್ ರೇಟ್ 234.86. ವೈಭವ್ ಬ್ಯಾಟ್‌ನಿಂದ 31 ಬೌಂಡರಿ ಮತ್ತು 32 ಸಿಕ್ಸರ್‌ಗಳು ಬಂದಿವೆ.

ಮೂರನೇ ಸ್ಥಾನಕ್ಕೆ ಜಾರಿದ ಕನ್ನಡಿಗ ಕೆ ಎಲ್ ರಾಹುಲ್

ಪಂಜಾಬ್ ಕಿಂಗ್ಸ್ ವಿರುದ್ಧ 67 ಎಸೆತಗಳಲ್ಲಿ 152 ರನ್ ಬಾರಿಸಿ ದಾಖಲೆ ಬರೆದ ಕೆ.ಎಲ್. ರಾಹುಲ್, ಆರೆಂಜ್ ಕ್ಯಾಪ್ ಸ್ಪರ್ಧೆಯಲ್ಲಿ ಸದ್ಯ ಮೂರನೇ ಸ್ಥಾನದಲ್ಲಿದ್ದಾರೆ. ನಿನ್ನೆ ಶತಕ ಸಿಡಿಸಿ ಆರೆಂಜ್ ಕ್ಯಾಪ್ ಪಡೆದಿದ್ದರೂ, ಅದಕ್ಕೆ ಕೆಲವೇ ಗಂಟೆಗಳ ಆಯಸ್ಸು ಇರಲಿಲ್ಲ. ನಂತರ ವೈಭವ್ ಶತಕ ಬಾರಿಸುತ್ತಿದ್ದಂತೆ ರಾಹುಲ್ ಆರೆಂಜ್ ಕ್ಯಾಪ್ ಕಳೆದುಕೊಂಡರು. 7 ಪಂದ್ಯಗಳಲ್ಲಿ 59.50ರ ಸರಾಸರಿ ಮತ್ತು 187.89ರ ಸ್ಟ್ರೈಕ್ ರೇಟ್‌ನಲ್ಲಿ 357 ರನ್ ಗಳಿಸಿರುವ ರಾಹುಲ್, ರನ್‌ಗಳ ಸಂಖ್ಯೆಯಲ್ಲಿ ವೈಭವ್‌ಗೆ ಸರಿಸಮರಾಗಿದ್ದಾರೆ. ಹೈದರಾಬಾದ್‌ ಪರ ನಿನ್ನೆ ಮತ್ತೊಂದು ನಿರ್ಣಾಯಕ ಇನ್ನಿಂಗ್ಸ್ ಆಡಿದ ಹೆನ್ರಿಚ್ ಕ್ಲಾಸೆನ್ 349 ರನ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರ ಸರಾಸರಿ 49.86 ಇದ್ದರೂ, ಸ್ಟ್ರೈಕ್ ರೇಟ್ ಕೇವಲ 149.78. ಇನ್ನು 328 ರನ್‌ಗಳೊಂದಿಗೆ ವಿರಾಟ್ ಕೊಹ್ಲಿ ಟಾಪ್-5 ಪಟ್ಟಿಯಲ್ಲಿ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ.

ನಿನ್ನೆ ರಾಜಸ್ಥಾನ್ ವಿರುದ್ಧ 31 ಎಸೆತಗಳಲ್ಲಿ 74 ರನ್ ಚಚ್ಚಿದ ಇಶಾನ್ ಕಿಶನ್, ಒಟ್ಟು 312 ರನ್‌ಗಳೊಂದಿಗೆ ಸಂಜು ಸ್ಯಾಮ್ಸನ್ ಮತ್ತು ಶುಭಮನ್ ಗಿಲ್ ಅವರನ್ನು ಹಿಂದಿಕ್ಕಿ ಆರನೇ ಸ್ಥಾನಕ್ಕೆ ಜಿಗಿದಿದ್ದಾರೆ. 297 ರನ್ ಗಳಿಸಿರುವ ಶುಭಮನ್ ಗಿಲ್ ಏಳನೇ ಸ್ಥಾನದಲ್ಲಿದ್ದಾರೆ. ಇಂದು ಗುಜರಾತ್ ವಿರುದ್ಧ ಕಣಕ್ಕಿಳಿಯಲಿರುವ ಚೆನ್ನೈ ಸೂಪರ್ ಕಿಂಗ್ಸ್‌ನ ಆಟಗಾರ ಸಂಜು ಸ್ಯಾಮ್ಸನ್ 293 ರನ್‌ಗಳೊಂದಿಗೆ ಎಂಟನೇ ಸ್ಥಾನದಲ್ಲಿದ್ದಾರೆ. 58.60ರ ಉತ್ತಮ ಸರಾಸರಿ ಹೊಂದಿರುವ ಸಂಜು, 178.65ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಇಂದು ಗುಜರಾತ್ ವಿರುದ್ಧ ಉತ್ತಮ ಪ್ರದರ್ಶನ ನೀಡಿದರೆ, ಸಂಜು ಮತ್ತೆ ಟಾಪ್-5 ಪಟ್ಟಿಗೆ ಮರಳಬಹುದು.