ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಭಾವುಕರಾಗಿದ್ದಾರೆ. ಕೈಮುಗಿದು ನಮಿಸಿದ ಮಾಸ್ಟರ್ ಬ್ಲಾಸ್ಟರ್ ಎಷ್ಟು ವರ್ಷ ಕಳೆದರೂ ಮತ್ತೊಂದು ಧನ್ಯವಾದ ಹೇಳುವುದು ಬಾಕಿ ಇದ್ದೇ ಇರುತ್ತೆ ಎಂದಿದ್ದಾರೆ.

ಮುಂಬೈ (ಜು.29) ಭಾರತದಲ್ಲಿ ಕ್ರಿಕೆಟ್ ಪ್ರೀತಿ ಹೆಚ್ಚಿಸಿದ, ಯುವಕರಿಗೆ ಮಾದರಿಯಾದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಭಾವುಕರಾಗಿದ್ದಾರೆ. ಕೈಮುಗಿದು ನಮನ ಸಲ್ಲಿಸಿದ ಸಚಿನ್ ತೆಂಡೂಲ್ಕರ್, ಅದೆಷ್ಟೇ ವರ್ಷ ಕಳೆದರೂ ಮತ್ತೊಂದು ಧನ್ಯವಾದ ಹೇಳಲು ಬಾಕಿ ಇದೆ ಎಂದು ಭಾಸವಾಗುತ್ತಿದೆ ಎಂದಿದ್ದಾರೆ. ಗುರುಪೂರ್ಣಿಮೆ ದಿನ ಸಚಿನ್ ತೆಂಡೂಲ್ಕರ್ ತಮ್ಮ ಬಾಲ್ಯದ ಕೋಚ್ ಹಾಗೂ ಇಡೀ ಕರಿಯರ್‌ನಲ್ಲಿ ಬೆನ್ನೆಲುಬಾಗಿ ನಿಂತಿದ್ದ ರಮಾಕಾಂತ್ ಅಚ್ರೇಕರ್ ಸರ್‌ಗೆ ಗೌರವ ನಮನ ಸಲ್ಲಿಸಿದ್ದಾರೆ.

ಗುರು ರಮಾಕಾಂತ್ ಅಚ್ರೇಕರ್‌ಗೆ ನಮನ

ಸಚಿನ್ ತೆಂಡೂಲ್ಕರ್ ಗುರುಪೂರ್ಣಿಮೆ ದಿನ ತನ್ನ ಗುರುಗಳ ನೆನೆದಿದ್ದಾರೆ. ಮುಂಬೈ ಶಿವಾಜಿ ಪಾರ್ಕ್‌ನಲ್ಲಿರುವ ಅಚ್ರೇಕರ್ ಸ್ಮಾರಕಕ್ಕೆ ಭೇಟಿ ನೀಡಿದ ಸಚಿನ್ ತೆಂಡೂಲ್ಕರ್ ಗೌರವ ನಮನ ಸಲ್ಲಿಸಿದ್ದಾರೆ. ಈ ಕ್ಷಣಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿ ನಿಂತು ಕೈಮುಗಿದಾಗ ಭಾವುಕನಾಗುತ್ತೇನೆ. ಎಷ್ಟು ಕಾಲ ಉರುಳಿದರೂ, ಎಷ್ಟು ಸಮಯ ಕಳೆದರೂ ನಿಮ್ಮ ಮಾರ್ಗದರ್ಶನಕ್ಕೆ ನಾನು ಅದೆಷ್ಟು ಧನ್ಯವಾದ ಹೇಳಿದರೂ ಸಾಲದು. ನನ್ನ ಮೇಲೆ ಭರವಸೆ ಇಟ್ಟು ಕೈಹಿಡಿದು ಮುನ್ನಡೆಸಿದ ನಿಮಗೆ ಧನ್ಯವಾದಗಳು. ನಿಮಗೆ ಗುರುಪೂರ್ಣಿಮೆ ಶುಭಾಶಯಗಳು ಎಂದಿದ್ದಾರೆ

ರಮಾಕಾಂತ್ ಅಚ್ರೇಕರ್ 2019ರ ಜನವರಿಯಲ್ಲಿ ನಿಧರಾಗಿದ್ದಾರೆ. ನಿಧನ ಬಳಿಕ ಶಿವಾಜಿ ಪಾರ್ಕ್‌ನಲ್ಲಿ ಅಚ್ರೇಕರ್ ಸ್ಮಾರಕ ನಿರ್ಮಿಸಲಾಗಿದೆ. ಸಚಿನ್ ತೆಂಡೂಲ್ಕರ್ ಈಗಲೂ ತಮ್ಮ ಗುರಿನ ಆಶೀರ್ವಾದ ಪಡೆಯಲು ಈ ಪಾರ್ಕ್‌ಗೆ ತೆರಳುತ್ತಾರೆ. ಇಂದು ಗುರುಪೂರ್ಣಿಮೆಯ ವಿಶೇಷ ದಿನದಲ್ಲಿ ಗುರುವಿನ ಸ್ಮಾರಕಕ್ಕೆ ನಮನ ಸಲ್ಲಿಸಿ ಆಶೀರ್ವಾದ ಪಡೆದಿದ್ದಾರೆ.

ಸಚಿನ್ ತೆಂಡೂಲ್ಕರ್ ಅನ್ನೋ ದೈತ್ಯ ಪ್ರತಿಭೆಯನ್ನು ಮೊದಲು ಗುರುತಿಸಿದ್ದು, ಪಳಗಿಸಿದ್ದು ಇದೇ ರಮಾಕಾಂತ್ ಅಚ್ರೇಕರ್. ಅಂತಾರಾಷ್ಟ್ರೀಯ ಮಟ್ಟದ ಬ್ಯಾಟ್ಸ್‌ಮನ್ ಆಗಿ ರೂಪಿಸಿ, ಶಿಸ್ತು, ತಾಳ್ಮೆ, ಸ್ಫೋಟಕ ಬ್ಯಾಟಿಂಗ್ ಸೇರಿದಂತೆ ಕ್ರಿಕೆಟ್‌ನ ಇಂಚಿಂಚು ಕಲಿಸಿಕೊಟ್ಟಿದ್ದು ರಮಾಕಾಂತ್ ಅಚ್ರೇಕರ್. ಇದೇ ರಮಾಕಾಂತ್ ಅಚ್ರೇಕರ್ ಶಿಷ್ಯರಲ್ಲಿ ಸಚಿನ್ ಮಾತ್ರವಲ್ಲ, ವಿನೋದ್ ಕಾಂಬ್ಳಿ, ಅಜಿಕ್ ಅಗರ್ಕರ್ ಸೇರಿದಂತೆ ಹಲವು ಪ್ರಮುಖರು ಇದ್ದಾರೆ.

1989ರಿಂದ 2013ರ ವರೆಗೆ ಸತತ 24 ವರ್ಷಗಳ ಕಾಲ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಜಗತ್ತಿನ ದೊರೆಯಾಗಿ ಮೆರೆದಿದ್ದಾರೆ. ಅಕ್ಷರಶಃ ವಿಶ್ವಕ್ರಿಕೆಟ್ ಆಳಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಗಳ ಶತಕ ಸಿಡಿಸಿದ ಏಕೈಕ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್. ಇದೀಗ ತಮ್ಮ ಗುರುವಿಗೆ ಗುರುಪೂರ್ಣಿಮೆಯ ಶುಭಾಶಯ ತಿಳಿಸಿದ್ದಾರೆ.