ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದದ ಕುರಿತು ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಸೇರಿದಂತೆ ಶುಭ್‌ಮನ್ ಗಿಲ್, ಯುವರಾಜ್ ಸಿಂಗ್‌ರಂತಹ ಹಲವು ಕ್ರೀಡಾಪಟುಗಳು ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ವಿದ್ಯಾರ್ಥಿಗಳ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು ಮತ್ತು ಅವರ ಭವಿಷ್ಯವನ್ನು ಸುಭದ್ರಗೊಳಿಸಬೇಕು ಎಂದು ಗಣ್ಯರು ಆಗ್ರಹಿಸಿದ್ದಾರೆ.
ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ಭಾರತದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಗುರುವಾರ ಬೆಂಬಲಿಸಿದ್ದಾರೆ. ವಿದ್ಯಾರ್ಥಿಗಳ ನಿರಾಸೆ ಅರ್ಥವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಗುರುವಾರ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, ‘ಸಮಾಜದಲ್ಲಿ ಹಿರಿಯರಾದ ನಾವು ಸಂಸ್ಕೃತಿಯನ್ನು ರೂಪಿಸುವ ಜವಾಬ್ದಾರಿ ಹೊಂದಿದ್ದೇವೆ. ಪ್ರಯತ್ನಕ್ಕಿಂತ ಫಲಿತಾಂಶಗಳಿಗೆ ಆದ್ಯತೆ ನೀಡುವ ಸಮಾಜವು ಅರ್ಹತೆಗಿಂತ ಶಾರ್ಟ್‌ಕಟ್‌ಗಳನ್ನು ಹುಡುಕುತ್ತದೆ. ಇಂದು ವಿದ್ಯಾರ್ಥಿಗಳು ತಮ್ಮ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿಲ್ಲ ಎಂದು ನಿರಾಶೆಗೊಂಡಿದ್ದಾರೆ. ಅದು ಅರ್ಥವಾಗುವಂತದ್ದು. ಅವರು ಮತ್ತೊಮ್ಮೆ ನಿರಾಸೆಗೊಳ್ಳದಂತೆ ನೋಡಿಕೊಳ್ಳಬೇಕು’ ಎಂದಿದ್ದಾರೆ.
ಯುವ ಭಾರತವು ಕನಸು ಮತ್ತು ಉತ್ಸಾಹದಿಂದ ತುಂಬಿದೆ. ಅವರೇ ನಮ್ಮ ಯಶಸ್ಸಿನ ಇಂಧನ. ಕಠಿಣ ಪರಿಶ್ರಮಕ್ಕೆ ಯೋಗ್ಯವಾದ ಪ್ರತಿಫಲ ಸಿಗುವಂತೆ, ಪ್ರಾಮಾಣಿಕತೆಯನ್ನು ಉತ್ತೇಜಿಸುವಂತೆ ಹಾಗೂ ಅರ್ಹತೆಗೆ ಗೆಲುವು ದೊರೆಯುವಂತಹ ಸಂಸ್ಕೃತಿಯನ್ನು ನಾವು ನಿರ್ಮಿಸಬೇಕು. ಮಕ್ಕಳ ಭವಿಷ್ಯವನ್ನು ಸುಭದ್ರಗೊಳಿಸುವ ಸಮಾಜವನ್ನು ನಾವು ನಿರ್ಮಿಸಬೇಕು ಎಂದು ಸಚಿನ್ ಮನವಿ ಮಾಡಿದ್ದಾರೆ.
ವಿದ್ಯಾರ್ಥಿಗಳ ಹಿತಾಸಕ್ತಿ ಗಮನದಲ್ಲಿರಲಿ: ಗಿಲ್
ಭಾರತ ಕ್ರಿಕೆಟ್ ತಂಡದ ನಾಯಕ ಶುಭ್‌ಮನ್ ಗಿಲ್ ಕೂಡಾ ವಿದ್ಯಾರ್ಥಿಗಳ ವಿಚಾರದಲ್ಲಿ ಮಾತನಾಡಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, ‘ನಮ್ಮ ಪೀಳಿಗೆಗೆ ಕಲಿಯಲು, ಕನಸು ಕಾಣಲು, ಭವಿಷ್ಯ ರೂಪಿಸಲು ಅವಕಾಶವಿದೆ. ಶಾಂತಿಯುತವಾಗಿ ತಮ್ಮ ಧ್ವನಿಯನ್ನು ತಲುಪಿಸುವ ಬಗ್ಗೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ಯುವ ಜನತೆಯ ಬಗ್ಗೆಯೂ ನನಗೆ ಅಪಾರ ಗೌರವವಿದೆ. ಭಾರತದ ಭವಿಷ್ಯಕ್ಕಾಗಿ, ಪರಸ್ಪರ ಗೌರವ ಮತ್ತು ಪ್ರತಿಯೊಬ್ಬ ವಿದ್ಯಾರ್ಥಿಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಾವು ಮುನ್ನಡೆಯಬೇಕು’ ಎಂದಿದ್ದಾರೆ.
ಅಭಿನವ್ ಬಿಂದ್ರಾ, ಯುವಿ ನಿಖಾತ್ ಬೆಂಬಲ
ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಚಿನ್ನ ವಿಜೇತ ಭಾರತದ ಮೊದಲ ಕ್ರೀಡಾಪಟು ಎನಿಸಿಕೊಂಡಿರುವ ಶೂಟರ್ ಅಭಿನವ್ ಬಿಂದ್ರಾ, ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್, ಬಾಕ್ಸಿಂಗ್ ವಿಶ್ವ ಚಾಂಪಿಯನ್ ನಿಖಾತ್ ಜರೀನ್ ಕೂಡಾ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ‘ಈ ಸಮಸ್ಯೆ ನಮಗೆಲ್ಲರಿಗೂ ಸೇರಿದ್ದು. ರಾಷ್ಟ್ರ ಅಳೆಯುವುದು ಆರ್ಥಿಕ ಅಭಿವೃದ್ಧಿಯಿಂದ ಮಾತ್ರವಲ್ಲ. ಯುವಜನರಿಗೆ ಸೃಷ್ಟಿಸುವ ಅವಕಾಶಗಳೂ ಸೇರಿವೆ. ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು’ ಎಂದು ಬಿಂದ್ರಾ ಹೇಳಿದ್ದಾರೆ.


