ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲುವಿಗೆ 8 ವರ್ಷ ಭರ್ತಿ; ಧೋನಿ ನಾಯಕತ್ವಕ್ಕೆ ಐಸಿಸಿ ಸೆಲ್ಯೂಟ್
* ಟೀಂ ಇಂಡಿಯಾ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲುವಿಗೆ 8 ವರ್ಷ ಭರ್ತಿ
* ಧೋನಿ ನಾಯಕತ್ವಕ್ಕೆ ಸಲಾಂ ಎಂದ ಐಸಿಸಿ
* 2013ರಲ್ಲಿ ಇಂಗ್ಲೆಂಡ್ ವಿರುದ್ದ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಟೀಂ ಇಂಡಿಯಾ
ನವದೆಹಲಿ(ಜೂ.23): ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಧೋನಿ ನೇತೃತ್ವದ ಟೀಂ ಇಂಡಿಯಾ ಇಂದಿಗೆ 8 ವರ್ಷಗಳ ಹಿಂದೆ(ಜೂ.23, 2013) ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದು ಮೆರೆದಾಡಿತ್ತು. ಇದರೊಂದಿಗೆ ಧೋನಿ ಐಸಿಸಿಯ ಮೂರೂ ಟ್ರೋಫಿ ಗೆದ್ದ ಮೊದಲ ನಾಯಕ ಎನ್ನುವ ಅಪರೂಪದ ವಿಶ್ವದಾಖಲೆ ಬರೆದಿದ್ದರು.
ಇಂಗ್ಲೆಂಡ್‌ನ ಎಡ್ಜ್‌ಬಾಸ್ಟನ್‌ನಲ್ಲಿ ಆಯೋಜನೆಗೊಂಡಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸಿದ್ದ. 50 ಓವರ್‌ಗಳ ಏಕದಿನ ಪಂದ್ಯವನ್ನು ಮಳೆಯ ಕಾರಣದಿಂದ 20 ಓವರ್‌ಗೆ ಮಿತಿಗೊಳಿಸಲಾಗಿತ್ತು. ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತ್ತು. ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ, ವಿರಾಟ್ ಕೊಹ್ಲಿ ಬಾರಿಸಿದ ಸಮಯೋಚಿತ 43 ರನ್‌ಗಳ ನೆರವಿನಿಂದ 7 ವಿಕೆಟ್ ಕಳೆದುಕೊಂಡು 129 ರನ್ ಕಲೆಹಾಕಿತ್ತು.
120 ಎಸೆತಗಳಲ್ಲಿ ಕೇವಲ 130 ರನ್‌ಗಳ ಸಾಧಾರಣ ಗುರಿ ಪಡೆದ ಆತಿಥೇಯ ಇಂಗ್ಲೆಂಡ್ ತಂಡ ಮೊದಲ 8 ಓವರ್‌ನಲ್ಲಿ 4 ವಿಕೆಟ್ ಕಳೆದುಕೊಂಡು 46 ರನ್ ಗಳಿಸಿತ್ತು. ಇದಾದ ಬಳಿಕ ಇಯಾನ್ ಮಾರ್ಗನ್(33) ಹಾಗೂ ರವಿ ಬೋಪಾರ(30) ಜೋಡಿ 5ನೇ ವಿಕೆಟ್‌ಗೆ 64 ರನ್‌ಗಳ ಜತೆಯಾಟವಾಡುವ ಮೂಲಕ ಇಂಗ್ಲೆಂಡ್ ತಂಡವನ್ನು ಗೆಲುವಿನ ಹೊಸ್ತಿಲಿಗೆ ಕೊಂಡೊಯ್ದಿದ್ದರು.
ಈ ವೇಳೆ ತಂತ್ರಗಾರಿಕೆ ಉಪಯೋಗಿಸಿದ ಧೋನಿ ವೇಗಿ ಇಶಾಂತ್ ಶರ್ಮಾ ಅವರ ಕೈಗೆ ಚೆಂಡನ್ನಿಡುವ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸಿದರು. ಇಂಗ್ಲೆಂಡ್ ಗೆಲ್ಲಲು ಕೇವಲ 20 ರನ್ ಅಗತ್ಯವಿದ್ದಾಗ ಇಶಾಂತ್ ಶರ್ಮಾ ಈ ಇಬ್ಬರು ಸೆಟ್ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್ನಿಟ್ಟುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಟೀಂ ಇಂಡಿಯಾ 5 ರನ್‌ಗಳಿಂದ ರೋಚಕ ಗೆಲುವು ಸಾಧಿಸಿತ್ತು. ಧೋನಿ ನಾಯಕತ್ವದ ಸಾಧನೆಯನ್ನು ಐಸಿಸಿ ಟ್ವೀಟ್ ಮೂಲಕ ಗುಣಗಾನ ಮಾಡಿದೆ
ಈ ಗೆಲುವಿನೊಂದಿಗೆ ಮಹೇಂದ್ರ ಸಿಂಗ್ ಧೋನಿ ನಾಯಕನಾಗಿ ಐಸಿಸಿಯ ಮೂರು ಪ್ರತಿಷ್ಠಿತ ಟ್ರೋಫಿ ಗೆದ್ದ ಜಗತ್ತಿನ ಮೊದಲ ಹಾಗೂ ಏಕೈಕ ನಾಯಕ ಎನ್ನುವ ಕೀರ್ತಿಗೆ ಭಾಜನರಾಗಿದ್ದಾರೆ. ಧೋನಿ ನೇತೃತ್ವದಲ್ಲಿ ಟೀಂ ಇಂಡಿಯಾ 2007ರಲ್ಲಿ ಐಸಿಸಿ ಟಿ20 ವಿಶ್ವಕಪ್, 2011ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.