Asianet Suvarna News Asianet Suvarna News

World Cup 2023: ಮೋದಿ ಸ್ಟೇಡಿಯಂನಲ್ಲಿ ಪಾಕ್‌ಗೆ ಬೆಂಡೆತ್ತಿದ ಭಾರತ, ದಾಖಲೆಗಳ ಸಾಮ್ರಾಜ್ಯ!

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟೀಮ್‌ ಇಂಡಿಯಾ ಪಾಕಿಸ್ತಾನ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿದೆ. ಅದರೊಂದಿಗೆ ಪಾಕಿಸ್ತಾನದ ವಿರುದ್ಧ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಒಂದೂ ಪಂದ್ಯವನ್ನೂ ಸೋಲದ ದಾಖಲೆಯನ್ನು ಉಳಿಸಿಕೊಂಡಿದೆ. ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಪಾಕ್‌ ವಿರುದ್ಧ 8ನೇ ಗೆಲುವು ಇದಾಗಿದೆ.
 

ODI World Cup 2023 Team India Records VS Pakistan in Ahmedabad Narendra Modi Stadium san
Author
First Published Oct 14, 2023, 8:33 PM IST

ಅಹಮದಾಬಾದ್‌ (ಅ.14): ಏಕಪಕ್ಷೀಯವಾಗಿ ಪಾಕಿಸ್ತಾನ ಕ್ರಿಕೆಟ್‌ ತಂಡದ ಮೇಲೆ ಮುಗಿಬಿದ್ದ ಭಾರತ ತಂಡ, ನೆರೆಯ ದೇಶವನ್ನು 7 ವಿಕೆಟ್‌ಗಳಿಂದ ಮಣಿಸಿದೆ. ಅದರೊಂದಿಗೆ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದ ದಾಖಲೆಯನ್ನು ಭಾರತ ತಂಡ ಮುಂದುವರಿಸಿದೆ. ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಇದು ಪಾಕಿಸ್ತಾನ ವಿರುದ್ಧ 8ನೇ ಗೆಲುವು ಇದಾಗಿದೆ. ಒಂದೇ ತಂಡದ ವಿರುದ್ಧ ವಿಶ್ವಕಪ್‌ ಟೂರ್ನಿಯಲ್ಲಿ ಒಂದೂ ಪಂದ್ಯ ಸೋಲದೆ ಭಾರತ 8 ಪಂದ್ಯ ಗೆದ್ದಿದೆ. ಪಾಕಿಸ್ತಾನ ತಂಡ ಕೂಡ ಶ್ರೀಲಂಕಾ ವಿರುದ್ಧ ಇದೇ ರೀತಿಯ ದಾಖಲೆಯನ್ನು ಹೊಂದಿದೆ. ವೆಸ್ಟ್‌ ಇಂಡೀಸ್‌ ತಂಡ ಜಿಂಬಾಬ್ವೆ ವಿರುದ್ಧ ವಿಶ್ವಕಪ್‌ನಲ್ಲಿ ಆಡಿದ ಆರೂ ಪಂದ್ಯಗಳನ್ನು ಗೆದ್ದಿದೆ. ನ್ಯೂಜಿಲೆಂಡ್‌ ತಂಡ ಬಾಂಗ್ಲಾದೇಶ ವಿರುದ್ಧ ಕೂಡ ಆಡಿದ ಆರೂ ಪಂದ್ಯಗಳಲ್ಲಿ ಜಯ ಕಂಡಿದೆ. ಈ ಗೆಲುವಿನೊಂದಿಗೆ ಟೀಮ್‌ ಇಂಡಿಯಾ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೂ ಏರಿದೆ. 

ರೋಹಿತ್‌ ಶರ್ಮ ದಾಖಲೆ: ಪಂದ್ಯದಲ್ಲಿ 86 ರನ್ ಬಾರಿಸಿದ ರೋಹಿತ್‌ ಶರ್ಮ, ವಿಶ್ವಕಪ್‌ನಲ್ಲಿ ಟೀಮ್‌ ಇಂಡಿಯಾ ಪರವಾಗಿ ಗರಿಷ್ಠ ರನ್ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ವಿರಾಟ್‌ ಕೊಹ್ಲಿಯನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದರು. ಪ್ರಸ್ತುತ ರೋಹಿತ್‌ ಶರ್ಮ 1195 ರನ್‌ ಬಾರಿಸಿದ್ದಾರೆ. 2278 ರನ್‌ ಬಾರಿಸಿರುವ ಸಚಿನ್‌ ತೆಂಡುಲ್ಕರ್‌ ಅಗ್ರಸ್ಥಾನದಲ್ಲಿದ್ದಾರೆ.

ಸಿಕ್ಸರ್ ಕಿಂಗ್‌: ವಿಶ್ವಕಪ್‌ನ ಇನ್ನಿಂಗ್ಸ್‌ವೊಂದರಲ್ಲಿ 5 ಹಾಗೂ ಅದಕ್ಕಿಂತ ಹೆಚ್ಚಿನ ಸಿಕ್ಸರ್‌ಗಳನ್ನು ಗರಿಷ್ಠ ಬಾರಿ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ರೋಹಿತ್‌ ಶರ್ಮ ಜಂಟಿ ಅಗ್ರಸ್ಥಾನಕ್ಕೇರಿದರು. ಎಬಿ ಡಿವಿಲಿಯರ್ಸ್‌ ಹಾಗೂ ಕ್ರಿಸ್‌ ಗೇಲ್‌ ಮೂರು ಬಾರಿ ಈ ಸಾಧನೆ ಮಾಡಿದ್ದರೆ, ಪಾಕ್‌ ವಿರುದ್ಧ 6 ಸಿಕ್ಸರ್‌ ಸಿಡಿಸುವ ಮೂಲಕ ರೋಹಿತ್‌ ಕೂಡ ಈ ಪಟ್ಟಿಗೆ ಸೇರಿದರು.

ಪಾಕ್‌ ವಿರುದ್ಧ ರೋಹಿತ್‌ ಬೆಂಕಿ: ರೋಹಿತ್ ಶರ್ಮ ಪಾಕಿಸ್ತಾನ ವಿರುದ್ಧ ಕಳೆದ ಎಂಟು ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ 91, 0, 52, 111*, 140, 11, 56 ಹಾಗೂ 86 ರನ್‌ ಬಾರಿಸಿದ್ದಾರೆ.

10 ಓವರ್‌ಗಳಲ್ಲಿ 79 ರನ್‌: ಪಾಕಿಸ್ತಾನ ತಂಡ ಪಂದ್ಯದ ಮೊದಲ 10 ಓವರ್‌ಗಳಲ್ಲಿ 79 ರನ್‌ ಬಿಟ್ಟುಕೊಟ್ಟಿತು. ಇದು ವಿಶ್ವಕಪ್‌ ಪಂದ್ಯದ ಮೊದಲ 10 ಓವರ್‌ಗಳಲ್ಲಿ ಪಾಕಿಸ್ತಾನ ತಂಡ ಬಿಟ್ಟುಕೊಟ್ಟ 2ನೇ ಗರಿಷ್ಠ ರನ್‌ ಎನಿಸಿದೆ. 2003ರ ವಿಶ್ವಕಪ್‌ನಲ್ಲಿ ಸೆಂಚುರಿಯನ್‌ನಲ್ಲಿ ಭಾರತ ತಂಡವೇ ಮೊದಲ 10 ಓವರ್‌ಗಳಲ್ಲಿ 88 ರನ್‌ ಬಾರಿಸಿದ್ದು ದಾಖಲೆಯಾಗಿದೆ.

300 ಪ್ಲಸ್‌ ಸಿಕ್ಸರ್‌: ಏಕದಿನ ಕ್ರಿಕೆಟ್‌ನಲ್ಲಿ 300 ಪ್ಲಸ್‌ ಸಿಕ್ಸರ್‌ ಬಾರಿಸಿದ ವಿಶ್ವದ ಮೂರನೇ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮ, ಶಾಹಿದ್ ಅಫ್ರಿದಿ (351) ಹಾಗೂ ಕ್ರಿಸ್‌ ಗೇಲ್‌ (331) ಮೊದಲ ಎರಡು ಸ್ಥಾನದಲ್ಲಿದ್ದಾರೆ.

ಒಂದೂ ಸಿಕ್ಸರ್‌ಗಳಿಲ್ಲದ 2ನೇ ಇನ್ನಿಂಗ್ಸ್‌:  ಹಾಲಿ ವಿಶ್ವಕಪ್‌ನಲ್ಲಿ ಒಂದೂ ಸಿಕ್ಸರ್‌ಗಳಿಲ್ಲದ 2ನೇ ಇನ್ನಿಂಗ್ಸ್‌ ದಾಖಲಾಯಿತು. ಪಾಕಿಸ್ತಾನ ತಂಡ ತನ್ನ ಇನ್ನಿಂಗ್ಸ್‌ನಲ್ಲಿ ಒಂದೂ ಸಿಕ್ಸರ್‌ ಬಾರಿಸಲಿಲ್ಲ. ಇದಕ್ಕೂ ಮುನ್ನ ಲಕ್ನೋದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ ಕೂಡ ಒಂದೂ ಸಿಕ್ಸ್ ಬಾರಿಸಿರಲಿಲ್ಲ.

ಪಾಕಿಸ್ತಾನದ 3ನೇ ಅತ್ಯಂತ ಕೆಟ್ಟ ಬ್ಯಾಟಿಂಗ್‌ ಕುಸಿತ: 36 ರನ್‌ಗೆ 8 ವಿಕೆಟ್‌ ಕಳೆದುಕೊಂಡಿದ್ದು, ಏಕದಿನ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ 3ನೇ ಅತ್ಯಂತ ಕೆಟ್ಟ ಬ್ಯಾಟಿಂಗ್‌ ಕುಸಿತವಾಗಿದೆ. 1993ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಕೇಪ್‌ಟೌನ್‌ನಲ್ಲಿ 11 ರನ್‌ಗೆ 2 ವಿಕೆಟ್‌ ಕಳೆದುಕೊಂಡಿದ್ದ ಪಾಕ್‌ 43 ರನ್‌ಗೆ ಆಲೌಟ್‌ ಆಗಿತ್ತು. ಕೇವಲ 32 ರನ್‌ಗೆ 8 ವಿಕೆಟ್‌ ಕಳೆದುಕೊಂಡಿದ್ದು ಮೊದಲ ಸ್ಥಾನದಲ್ಲಿದೆ. 2012ರಲ್ಲಿ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ 166 ರನ್‌ಗರ 2 ವಿಕೆಟ್‌ ಕಳೆದುಕೊಂಡಿದ್ದ ಪಾಕ್‌ 199 ರನ್‌ಗೆ ಆಲೌಟ್‌ ಆಗಿತ್ತು. 33  ರನ್‌ಗೆ 8 ವಿಕೆಟ್‌ ಕಳೆದುಕೊಂಡಿದ್ದು 2ನೇ ಸ್ಥಾನದಲ್ಲಿದೆ. ಅಹಮದಾಬಾದ್‌ನಲ್ಲಿ 155 ರನ್‌ಗೆ 2 ವಿಕೆಟ್‌ ಕಳೆದುಕೊಂಡಿದ್ದ ಪಾಕ್‌ 191 ರನ್‌ಗೆ ಆಲೌಟ್‌ ಆಯಿತು. ಪಾಕ್‌ ತಂಡ ಕೇವಲ 36 ರನ್‌ಗೆ 8 ವಿಕೆಟ್‌ ಕಳೆದುಕೊಂಡಿದ್ದ ಮೂರನೇ ಸ್ಥಾನದಲ್ಲಿದೆ.

IND vs PAK ಏಕದಿನ ವಿಶ್ವಕಪ್‌ನಲ್ಲಿ 8ನೇ ಬಾರಿ ತಲೆಬಾಗಿದ ಪಾಕಿಸ್ತಾನ, ಭಾರತಕ್ಕೆ 7 ವಿಕೆಟ್ ಭರ್ಜರಿ ಗೆಲುವು!

ಐದು ಬೌಲರ್‌ಗಳಿಗೆ 2 ವಿಕೆಟ್: ವಿಶ್ವಕಪ್‌ ಪಂದ್ಯವೊಂದರಲ್ಲಿ ತಂಡದ ಐದು ಬೌಲರ್‌ಗಳು ತಲಾ 2 ವಿಕೆಟ್‌ ಪಡೆದಿರುವುದು ಇದು ಮೂರನೇ ಬಾರಿ. 2011ರಲ್ಲಿ ಪಾಕಿಸ್ತಾನ ವಿರುದ್ಧ ಮೊಹಾಲಿ ಪಂದ್ಯದಲ್ಲಿ ಭಾರತ ತಂಡ, 2015ರಲ್ಲಿ ಶ್ರೀಲಂಕಾ ವಿರುದ್ಧ ಕ್ರೈಸ್ಟ್‌ಚರ್ಚ್‌ನಲ್ಲಿ ನ್ಯೂಜಿಲೆಂಡ್‌ ತಂಡ ಕೂಡ ಇದೇ ಸಾಧನೆ ಮಾಡಿತ್ತು.

Watch: ಪಾಕಿಸ್ತಾನ ತಂಡದ ಬ್ಯಾಟಿಂಗ್‌ ವೇಳೆ ಮೊಳಗಿದ ಜೈಶ್ರಿರಾಮ್‌ ಘೋಷಣೆ!

Follow Us:
Download App:
  • android
  • ios