Cricket World Cup: ಕಿವೀಸ್ ಬ್ಯಾಟಿಂಗ್ ಪ್ರಹಾರ, ವಿಶ್ವ ಚಾಂಪಿಯನ್ ಇಂಗ್ಲೆಂಡ್‌ಗೆ ಸೋಲಿನ ಹಾರ!
2019ರ ಏಕದಿನ ವಿಶ್ವಕಪ್ ಫೈನಲ್ ಸೋಲಿಗೆ ಸೇಡು ಎನ್ನುವಂತೆ ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ತಂಡ 2023ರ ಏಕದಿನ ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ 9 ವಿಕಟ್ ಗೆಲುವು ಕಂಡಿದೆ.
ಅಹಮದಾಬಾದ್ (ಅ.5): ಇಂಗ್ಲೆಂಡ್‌ನ ಆತಿಥ್ಯದಲ್ಲಿ ನಡೆದಿದ್ದ ಕಳೆದ ಆವೃತ್ತಿಯ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದ ಸೇಡು ತೀರಿಸಿಕೊಳ್ಳುವಂಥ ರೀತಿಯಲ್ಲಿ ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 2023ರ ಏಕದಿನ ವಿಶ್ವಕಪ್‌ನ ತನ್ನ ಉದ್ಘಾಟನಾ ಪಂದ್ಯದಲ್ಲಿ ವಿಶ್ವಚಾಂಪಿಯನ್ ಇಂಗ್ಲೆಂಡ್ ತಂಡವನ್ನು 9 ವಿಕೆಟ್‌ಗಳಿಂದ ಮಣಿಸಿದೆ. 2019ರ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ತಂಡಗಳು ಎದುರಾಗಿದ್ದವು. ರೋಚಕವಾಗಿದ್ದ ಈ ಪಂದ್ಯವನ್ನು ಇಂಗ್ಲೆಂಡ್ ಬೌಂಡರಿ ಕೌಂಟ್‌ನಲ್ಲಿ ಗೆದ್ದುಕೊಂಡಿತ್ತು. ಆ ಪಂದ್ಯದ ಸೋಲಿಗೆ ಈ ಬಾರಿ ಬ್ಯಾಟಿಂಗ್‌ನಲ್ಲಿ ಬೆಂಡೆತ್ತಿ ನ್ಯೂಜಿಲೆಂಡ್ ಸೇಡು ತೀರಿಸಿಕೊಂಡಿದೆ. ಅದರಲ್ಲೂ 2ನೇ ವಿಕೆಟ್‌ಗೆ ರಚಿನ್ ರವೀಂದ್ರ ಹಾಗೂ ಡೆವೋನ್ ಕಾನ್ವೆ ಇಬ್ಬರೂ ಶತಕ ದಾಖಲು ಮಾಡಿದ್ದು ಮಾತ್ರವಲ್ಲದೆ 273 ರನ್‌ಗಳ ಮುರಿಯದ ಜೊತೆಯಾಟವಾಡಿ ತಂಡಕ್ಕೆ ಅಭೂತಪೂರ್ವವಾದ ಗೆಲುವು ನೀಡಿದರು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಕಿವೀಸ್‌ನ ಶಿಸ್ತಿನ ದಾಳಿಗೆ 9 ವಿಕೆಟ್‌ಗೆ 282 ರನ್ ಪೇರಿಸಿದರೆ, ಪ್ರತಿಯಾಗಿ ನ್ಯೂಜಿಲೆಂಡ್ ತಂಡ 36.2 ಓವರ್‌ಗಳಲ್ಲಿ 1 ವಿಕೆಟ್‌ಗೆ 283 ರನ್ ಬಾರಿಸಿ ಗೆಲವು ಕಂಡಿತು.
ಗುರುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್‌ನ ಉದ್ಘಾಟನಾ ಪಂದ್ಯಕ್ಕೆ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಬಹುತೇಕವಾಗಿ ಖಾಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವಿಶ್ವ ಚಾಂಪಿಯನ್ ಇಂಗ್ಲೆಂಡ್ ತನ್ನ ಬ್ಯಾಟಿಂಗ್ ಶಕ್ತಿಗೆ ತಕ್ಕುದಾದ ನಿರ್ವಹಣೆ ತೋರಲಿಲ್ಲ. ಇನ್ನೊಂದೆಡೆ ಇಂಗ್ಲೆಂಡ್ ನೀಡಿದ ಸವಾಲು ಕಿವೀಸ್ ಸಲೀಸಾಗಿ ಬೆನ್ನಟ್ಟಿತು. ಡೆವೋನ್ ಕಾನ್ವೆ 121 ಎಸೆತದಲ್ಲಿ 19 ಬೌಂಡರಿ ಹಾಗೂ 3 ಸಿಕ್ಸರ್‌ಗಳೊಂದಿಗೆ ಅಜೇಯ 152 ರನ್ ಬಾರಿಸಿದರೆ, ಬೆಂಗಳೂರು ಮೂಲದ ಆಟಗಾರ ರಚಿನ್ ರವೀಂದ್ರ 96 ಎಸೆತಗಳಲ್ಲಿ 11 ಬೌಂಡರಿ, 5 ಸಿಕ್ಸರ್ ನೆರವಿನಿಂದ ಅಜೇಯ 123 ರನ್ ಸಿಡಿಸಿ ತಂಡಕ್ಕೆ ಗೆಲುವು ತಂದರು.
ಎರಡು ಮೇಡನ್ ಒವರ್‌ಗಳೊಂದಿಗೆ ಬೌಲಿಂಗ್ ಆರಂಭಿಸಿದ್ದ ಸ್ಯಾಮ್ ಕರ್ರನ್ , ತಮ್ಮ ಮೊದಲ ಓವರ್‌ನ ಮೊದಲ ಎಸೆತದಲ್ಲಿಯೇ ವಿಲ್ ಯಂಗ್ ವಿಕೆಟ್ ಉರುಳಿಸಿ ಕಿವೀಸ್‌ಗೆ ಆಘಾತ ನೀಡಿದ್ದರು. ಈ ವೇಳೆ ನ್ಯೂಜಿಲೆಂಡ್ ಕೇವಲ 10 ರನ್ ಬಾರಿಸಿತ್ತು. ಆದರೆ, ಅದಾದ ಬಳಿಕ ಕ್ರೀಸ್‌ನಲ್ಲಿ ಡೆವೋನ್ ಕಾನ್ವೆಗೆ ಜೊತೆಯಾದ ರಚಿನ್ ರವೀಂದ್ರ ಇಂಗ್ಲೆಂಡ್‌ನ ಬೌಲರ್‌ಗಳನ್ನು ಬೆಂಡೆತ್ತಿದರು. ಯಾವೊಬ್ಬ ಬೌಲರ್‌ಗೂ ಈ ಜೊತೆಯಾಟ ಬೇಪರ್ಡಿಸುವ ಉಪಾಯ ಹೊಳೆಯಲಿಲ್ಲ. ಹೊಸ ಚೆಂಡಿನಲ್ಲಿ ಕ್ರಿಸ್ ವೋಕ್ಸ್ ಧಾರಳಾವಾಗಿ ರನ್ ಬಿಟ್ಟುಕೊಟ್ಟರೆ, ಮಾರ್ಕ್‌ವುಡ್ ಎಸೆದ ವೇಗದ ಎಸೆತಗಳು ಅಷ್ಟೇ ವೇಗವಾಗಿ ಬೌಂಡರಿ ಲೈನ್‌ಗೆ ತಲುಪುತ್ತಿದ್ದರು. ಆದಿಲ್ ರಶೀದ್, ಮೋಯಿನ್ ಅಲಿ, ಲಿಯಾಮ್ ಲಿವಿಂಗ್‌ಸ್ಟೋನ್ ಎಲ್ಲರೂ ರನ್‌ಗಳ ಮೇಲೆ ರನ್ ನೀಡಿದರು. ಇದರಿಂದಾಗಿ ಇಬ್ಬರೂ ಎಡಗೈ ಬ್ಯಾಟ್ಸ್‌ಮನ್‌ಗಳು ವಿಶ್ವಕಪ್ ದಾಖಲೆಯ ಜೊತೆಯಾಟವಾಡಿದರು.
ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಶತಕ ಸಿಡಿಸಿದ ಬೆಂಗಳೂರು ಮೂಲದ ಕಿವೀಸ್ ಆಲ್ರೌಂಡರ್ ರಚಿನ್ ರವೀಂದ್ರ!
ಕೇನ್ ವಿಲಿಯಮ್ಸನ್ ಗಾಯಗೊಂಡಿದ್ದ ಕಾರಣಕ್ಕೆ, 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿದ್ದ ರಚಿನ್ ರವೀಂದ್ರ ತಮ್ಮ ಆಕರ್ಷಕ ಬ್ಯಾಟಿಂಗ್ ಮೂಲಕ ಗಮನಸೆಳೆದರು. ಇನ್ನು ಡೆವೋನ್ ಕಾನ್ವೆ ಆಟದಲ್ಲಿ ಯಾವುದೇ ಸಮಸ್ಯೆಗಳೇ ಇದ್ದಿರಲಿಲಿಲ್ಲ. ಫ್ರಂಟ್ ಫೂಟ್, ಬ್ಯಾಕ್‌ಫೂಟ್ ಪಂಚ್ ಡ್ರೈವ್, ಪುಲ್, ಕಟ್ ಶಾಟ್ ಎಲ್ಲವೂ ಅದ್ಭುತವಾಗಿದ್ದವು. ವಿಶ್ವಕಪ್‌ಗೆ ಪಾದಾರ್ಪಣೆ ಮಾಡಿದ ಇಬ್ಬರು ಬ್ಯಾಟ್ಸ್‌ಮನ್‌ಗಳು ಒಂದೇ ಪಂದ್ಯದಲ್ಲಿ ಶತಕ ದಾಖಲು ಮಾಡಿದ್ದು ಇದೇ ಮೊದಲ ಬಾರಿಯಾಗಿದೆ.
ವಿಶ್ವಕಪ್‌ನ ಮೊದಲ ಪಂದ್ಯದಲ್ಲೇ ಈ ಹಿಂದೆ ಯಾವ ತಂಡವೂ ಮಾಡದ ಅಪರೂಪದ ದಾಖಲೆ ನಿರ್ಮಿಸಿದ ಪ್ರಚಂಡ ಇಂಗ್ಲೆಂಡ್..!