ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಶತಕ ಸಿಡಿಸಿದ ಬೆಂಗಳೂರು ಮೂಲದ ಕಿವೀಸ್ ಆಲ್ರೌಂಡರ್ ರಚಿನ್ ರವೀಂದ್ರ!
ಏಕದಿನ ವಿಶ್ವಕಪ್‌ನ ಉದ್ಘಾಟನಾ ಪಂದ್ಯಕ್ಕೆ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ಆಲ್ರೌಂಡರ್ ರಚಿನ್ ರವೀಂದ್ರ ಭರ್ಜರಿಯಾಗಿ ಮಿಂಚಿದ್ದಾರೆ. ವಿಶೇಷವೆಂದರೆ, ರಚಿನ್ ರವೀಂದ್ರ ಅವರ ಮೂಲ ಕರ್ನಾಟಕದ ಬೆಂಗಳೂರು.
ಅಹಮದಾಬಾದ್ (ಅ.5): ಕಳೆದ ವರ್ಷದ ಇದೇ ಹೊತ್ತಿನಲ್ಲಿ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ಪಂದ್ಯವಾಡಲು ಬಂದಿತ್ತು. ಅಲ್ಲಿಯವರೆಗೂ ನ್ಯೂಜಿಲೆಂಡ್ ತಂಡದ ಅಲ್ರೌಂಡರ್ ಆಟಗಾರ ರಚಿನ್ ರವೀಂದ್ರ ಅವರ ಮೂಲ ಕರ್ನಾಟಕದ ಬೆಂಗಳೂರು ಅನ್ನೋದು ಯಾರಿಗೂ ಗೊತ್ತಿರಲಿಲ್ಲ. ಈಗ ಅಹಮದಾಬಾದ್‌ನಲ್ಲಿ ನಡೆದ ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್ ಆಲ್ರೌಂಡರ್ ರಚಿನ್ ರವೀಂದ್ರ ಭರ್ಜರಿ ಇನ್ನಿಂಗ್ಸ್ ಆಡಿದಾಗ, ಮತ್ತೆ ಈ ವಿಚಾರ ಮುನ್ನಲೆಗೆ ಬಂದಿದೆ. ಹಾಗಂತ ರಚಿನ್ ರವೀಂದ್ರ ಹುಟ್ಟಿದ್ದು ಬೆಂಗಳೂರಿನಲ್ಲ. ಅವರ ಹುಟ್ಟು, ಓದು ಎಲ್ಲವೂ ಆಗಿದ್ದು ನ್ಯೂಜಿಲೆಂಡ್‌ನ ವೆಲ್ಲಿಂಗ್ಟನ್‌ನಲ್ಲಿಯೇ. ಆದರೆ, ಅವರ ಇಡೀ ಕುಟುಂಬದ ಮೂಲ ಕರ್ನಾಟಕದ ಬೆಂಗಳೂರು. ಸಾಫ್ಟ್‌ವೇರ್ ಆರ್ಕಿಟೆಕ್ಟ್ ಆಗಿದ್ದ ರಚಿನ್ ರವೀಂದ್ರ ಅವರ ತಂದೆ ರವಿ ಕೃಷ್ಣಮೂರ್ತಿ, 1990ರಲ್ಲಿ ನ್ಯೂಜಿಲೆಂಡ್‌ಗೆ ವಲಸೆ ಹೋಗುವ ಮುನ್ನ ಬೆಂಗಳೂರಿನಲ್ಲಿ ಕ್ಲಬ್ ಕ್ರಿಕೆಟರ್ ಆಗಿದ್ದರು. ಇನ್ನು ರಚಿನ್ ರವೀಂದ್ರ ಅವರ ಅಜ್ಜ ಬಾಲಕೃಷ್ಣ ಅಡಿಗ ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಬಯಾಲಜಿ ಪ್ರಾಧ್ಯಾಪಕರಾಗಿದ್ದರು.
ಕಳೆದ ವರ್ಷ ಬೆಂಗಳೂರಿನಲ್ಲಿ ಆಡುವ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ರಚಿನ್ ರವೀಂದ್ರ, 'ನಾನು ಬೆಂಗಳೂರಿಗೆ ಸಾಕಷ್ಟು ಬಾರಿ ಬಂದಿದ್ದೇನೆ. ಆದರೆ ಚಿನ್ನಸ್ವಾಮಿಯಲ್ಲಿ ಎಂದೂ ಆಡಲು ಸಾಧ್ಯವಾಗಿರಲಿಲ್ಲ' ಎಂದು ಎಡಗೈ ಆಲ್ರೌಂಡರ್ ಹೇಳಿದ್ದರು. ಬೆಂಗಳೂರಿನಲ್ಲಿರುವ ನನ್ನ ಕುಟುಂಬದೊಂದಿಗೆ ಬೆರೆತಿದ್ದು ಖುಷಿಯಾಗಿದೆ. ಬೆಂಗಳೂರಿಗೆ ಮರಳುವುದು ನನಗೆ ಯಾವಾಗಲೂ ಖುಷಿ. ಬಹಳ ವರ್ಷಗಳ ಹಿಂದೆಯೇ ನನ್ನ ಕುಟುಂಬ ನ್ಯೂಜಿಲೆಂಡ್‌ಗೆ ವಲಸೆ ಹೋಗಿದ್ದರಿಂದ ನಾನು ಅಲ್ಲಿಯೇ ಹುಟ್ಟಿದ್ದೆ. ಆದರೆ, ಬೆಂಗಳೂರಿಗೆ ಬಂದಾಗ ಇದು ನನಗೆ ಪರಿಚಿತ ಸ್ಥಳ ಎನ್ನುವುದು ಗೊತ್ತಾಗಿತ್ತದೆ. ಇಲ್ಲಿರುವ ಪ್ರತಿ ನಿಮಿಷವನ್ನೂ ನಾನು ಇಷ್ಟಪಟ್ಟಿದ್ದೇನೆ' ಎಂದು ಬೆಂಗಳೂರಿನ ಬಗ್ಗೆ ಮಾತನಾಡಿದ್ದರು. ಇನ್ನೂ ವಿಶೇಷವೆಂದರೆ, ರಚಿನ್ ಎನ್ನುವ ಹೆಸರಿನಲ್ಲೂ ಕ್ರಿಕೆಟ್‌ನ ಅಂಶವಿದೆ. ರಚಿನ್ ರವೀಂದ್ರ ಅವರ ತಂದೆ ಕ್ರಿಕೆಟ್ ಆಸಕ್ತರಾಗಿದ್ದರಿಂದ, ಭಾರತ ಎರಡು ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಾದ ರಾಹುಲ್ ದ್ರಾವಿಡ್ ಹಾಗೂ ಸಚಿನ್ ತೆಂಡುಲ್ಕರ್ ಅವರ ಹೆಸರು ಸೇರಿಸಿ ರಚಿನ್ ಎನ್ನುವ ಹೆಸರನ್ನಿಟ್ಟಿದ್ದರು.
ಇನ್ನು ನ್ಯೂಜಿಲೆಂಡ್‌ಗೆ ಶಿಫ್ಟ್ ಆಗಿದ್ದ ರಚಿನ್ ರವೀಂದ್ರ ಅವರ ತಂದೆಗೆ ಕ್ರಿಕೆಟ್ ಆಸಕ್ತಿ ಮಾತ್ರ ಕಡಿಮೆಯಾಗಿರಲಿಲ್ಲ. ನ್ಯೂಜಿಲೆಂಡ್‌ನಲ್ಲಿ ಹಟ್ ಹಾಕ್ಸ್ ಕ್ಲಬ್ ಎಂಬ ಕ್ರಿಕೆಟ್ ಕ್ಲಬ್ ಅನ್ನು ಆರಂಭಿಸಿದ ಅವರು ನ್ಯೂಜಿಲೆಂಡ್ ಕ್ರಿಕೆಟ್‌ನಿಂದ ಲೆವೆಲ್ 3 ಕೋಚಿಂಗ್ ಸರ್ಟಿಫಿಕೇಶನ್ ಕೋರ್ಸ್ ಅನ್ನು ಪೂರ್ಣಗೊಳಿಸಿದರು.
Cricketer Rachin Ravindra ಪೋಷಕರ ವಿಶೇಷ ಸಂದರ್ಶನ!
ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಬೌಲಿಂಗ್‌ನಲ್ಲೂ ಮಿಂಚಿದ ರಚಿನ್ ರವೀಂದ್ರ, ಹ್ಯಾರಿ ಬ್ರೂಕ್ ಅವರ ವಿಕೆಟ್ ಉರುಳಿಸಿದ್ದರು. ತಮ್ಮ 10 ಓವರ್‌ಗಳ ಕೋಟಾದಲ್ಲಿ 76 ರನ್ ನೀಡಿದ್ದರು. ಆ ಬಳಿಕ ಬ್ಯಾಟಿಂಗ್‌ನಲ್ಲಿ ಭರ್ಜರಿ ನಿರ್ವಹಣೆ ತೋರಿದ ರಚಿನ್ ರವೀಂದ್ರ, ವನ್‌ಡೌನ್ ಬ್ಯಾಟ್ಸ್‌ಮನ್ ಆಗಿ ಬಂದು ಅದ್ಭುತವಾಗಿ ಆಟವಾಡಿದರು. ಅದರೊಂದಿಗೆ ಏಕದಿನ ಕ್ರಿಕೆಟ್‌ನ ತಮ್ಮ ಚೊಚ್ಚಲ ಶತಕವನ್ನು ವಿಶ್ವಕಪ್ ವೇದಿಕೆಯಲ್ಲಿಯೇ ಸಿಡಿಸಿದರು.
Ind vs NZ Kanpur Test: ಕಿವೀಸ್ ಪಡೆಯನ್ನು ಸೋಲಿನಿಂದ ಪಾರು ಮಾಡಿದ 'ಭಾರತದ' ಜೋಡಿ..!